ದಿನದ ಸುದ್ದಿ
ಇಂದು ಕೇಂದ್ರ ಬಜೆಟ್ | 7ನೇ ಆಯವ್ಯಯ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಸುದ್ದಿದಿನಡೆಸ್ಕ್:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಲೋಕಸಭೆಯಲ್ಲಿಂದು ಮಂಡನೆಯಾಗಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸತತ 7ನೇ ಮುಂಗಡ ಪತ್ರವನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಫೆಬ್ರವರಿಯಲ್ಲಿ ಅವರು ಮಧ್ಯಂತರ ಬಜೆಟ್ ಮಂಡಿಸಿದ್ದರು.
2024-25 ರ ಸಾಲಿನ ಪೂರ್ಣ ಬಜೆಟ್ ಇದಾಗಿದ್ದು, ನಿನ್ನೆ ಸಂಸತ್ತಿನಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷೆಯಲ್ಲಿ ನವ ಭಾರತದ ಕನಸನ್ನು ಬಿಚ್ಚಿಡಲಾಗಿದೆ. ದೇಶದ ಈಗಿನ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ವಿವರಿಸಲಾಗಿದೆ.
2024-25ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡಾ 6.5ರಿಂದ 7ಕ್ಕೆ ಅಂದಾಜಿಸಲಾಗಿದೆ. ಭಾರತದ ನೈಜ ಜಿಡಿಪಿ 2024ರ ಹಣಕಾಸು ವರ್ಷದಲ್ಲಿ ಶೇಕಡಾ 8.2ರಷ್ಟು ಬೆಳೆದಿದೆ. ಇದು ಹಣಕಾಸು ವರ್ಷ 2024ರ ನಾಲ್ಕು ತ್ರೈಮಾಸಿಕಗಳ ಪೈಕಿ ಮೂರು ತ್ರೈಮಾಸಿಕಗಳಲ್ಲಿ ಶೇಕಡಾ 8ರ ಗಡಿ ಮೀರಿದೆ.
ಸರಿಯಾದ ನೀತಿಗಳನ್ನು ಜಾರಿಗೊಳಿಸಿದ್ದರಿಂದ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬೆಲೆ ಸ್ಥಿರತೆ ಕ್ರಮಗಳು ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.4ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
ಹಣಕಾಸು ವರ್ಷ 2022 ಮತ್ತು 2023ರ ಅವಧಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಪೂರೈಕೆ ಅಡೆ ತಡೆಗಳು ಜಾಗತಿಕವಾಗಿ ಹಣದುಬ್ಬರದ ಒತ್ತಡವನ್ನು ಹೆಚ್ಚಿಸಲು ಕಾರಣವಾಗಿವೆ ಎಂದು ಸಮೀಕ್ಷೆ ಹೇಳಿದೆ.
ವಿದೇಶಿ ಬಂಡವಾಳ ಹೂಡಿಕೆಯ ಹೆಚ್ಚಳ, ವಿದ್ಯುತ್ ಸಾಮರ್ಥ್ಯ ದುಪ್ಪಟ್ಟು ಮಾಡುವ ಗುರಿ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಬಲವರ್ಧನೆ, ಷೇರು ಮಾರುಕಟ್ಟೆಯಲ್ಲಿನ ಪ್ರಗತಿಯನ್ನು ಮತ್ತಷ್ಟು ವೃದ್ಧಿಸುವುದು ಬಜೆಟ್ ಭಾಗವಾಗಿರಲಿವೆ ಎಂದು ಅಂದಾಜಿಸಲಾಗಿದೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243