ಲೋಕಾರೂಢಿ

ಪರೀಕ್ಷೆಯಲ್ಲಿನ ಸೋಲು ಸೋಲಲ್ಲ..!

Published

on

ಮೊನ್ನೆ ಮೊನ್ನೆಯಷ್ಟೆ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಇಂದು ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೊರಬೀಳಲಿದೆ. ಪ್ರತಿವರ್ಷವೂ ಕೂಡ ಫಲಿತಾಂಶ ಪ್ರಕಟವಾದ ದಿನ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಅನುಭವಿಸುವ ಸಂಕಟ ಆತ್ಮಹತ್ಯೆಯ ರೂಪದಲ್ಲಿ ಕೊನೆಗೊಳ್ಳುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಶೈಕ್ಷಣಿಕವಾಗಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಯ ಆಲೋಚನೆ ಮಾಡುತ್ತಾನೆಂದರೆ, ಅದು ಇಡೀ ಶಿಕ್ಷಣ ವ್ಯವಸ್ಥೆಯ ಸೋಲು. ಯಾವ ಶಿಕ್ಷಣ ವಿದ್ಯಾರ್ಥಿಗಳಿಗೆ ಅಕ್ಷರತೆಯ ಜೊತೆ ಮಾನಸಿಕ ಸ್ಥೈರ್ಯವನ್ನು ನೀಡಬೇಕಿತ್ತೋ, ಸೋತು ಸುಣ್ಣವಾದ ವೇಳೆ ಮರಳಿ ಯತ್ನವ ಮಾಡಿ ಯಶಸ್ಸನ್ನು ಅಪ್ಪಿಕೊಳ್ಳುವಂತೆ ಮಾಡಬೇಕಿತ್ತೋ, ಅದು ಕೇವಲ ಪರೀಕ್ಷೆಯ ಭಯವನ್ನು, ಫಲಿತಾಂಶದ ಭೂತವನ್ನು ಹೆಗಲ ಮೇಲೆ ಹೊತ್ತೊಯ್ಯುವಂತೆ ಮಾಡುತ್ತಿದೆ ಎಂದರೆ ಅದರರ್ಥ ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಅಕ್ಷರ ಕಲಿಸುವಿಕೆಗೆ ಸೀಮಿತವಾಗಿಬಿಟ್ಟಿದೆಯೇ ಹೊರತು ವ್ಯಕ್ತಿತ್ವ ನಿರ್ಮಾಣದ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿಲ್ಲವೆಂದೇ ಅರ್ಥ.

ಕೆಲವು ತಿಂಗಳುಗಳ ಹಿಂದೆ, ಅಂದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭದ ದಿನಗಳಲ್ಲಿ ವಿದ್ಯಾರ್ಥಿ ಮಿತ್ರನೋರ್ವನನ್ನು ಮಾತನಾಡಿಸುತ್ತಿದ್ದೆ. “ಈ ಪರೀಕ್ಷೆ ನಿಮ್ಮ ಜೀವನದ ಮಹತ್ವದ ಘಟ್ಟ. ಇಲ್ಲಿನ ಫಲಿತಾಂಶದ ಆಧಾರದ ಮೇಲೆಯೇ ನಿಮ್ಮ ಭವಿಷ್ಯ ಅಡಗಿದೆ ಎಂದು ಶಿಕ್ಷಕರು ಹೇಳಿದ್ದಾರೆ” ಎಂದನಾತ. “ಮತ್ತೇನು ಹೇಳಿದ್ದಾರೆ?” ಎಂದು ಸ್ವಲ್ಪ ಕುತೂಹಲದಿಂದಲೇ ಕೇಳಿದೆ. “ಒಂದು ವೇಳೆ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದರೆ ಅಥವಾ ಅನುತ್ತೀರ್ಣರಾದರೆ ಅಂತವರು ಸಮಾಜದಲ್ಲಿ ತಲೆ ಎತ್ತಲಾಗುವುದಿಲ್ಲ ಎಂದಿದ್ದಾರೆ.” ಎಂದು ನನ್ನತ್ತಲೇ ನೆಟ್ಟ ನೋಟದಿಂದ ಕಣ್ತೆಗೆದ ಆ ಪೋರ. “ಚೆನ್ನಾಗಿ ಓದಿಕೋ” ಎಂದಷ್ಟೇ ಹೇಳಿ ಆತನ ಬೆನ್ನು ತಟ್ಟಿದೆ. ಆತನ ಮಾತುಗಳಲ್ಲಿ ಪರೀಕ್ಷೆಯ ಕುರಿತು, ಫಲಿತಾಂಶದ ಕುರಿತು ಅದೆಷ್ಟು ಭಯವಿದ್ದವೆಂದರೆ ಮಾತಿನ ಧಾಟಿಯಲ್ಲಿ ಆ ಭಾವಗಳು ಅವನಿಗರಿವಿಲ್ಲದಂತೆ ಹೊರಚೆಲ್ಲಿದ್ದವು. ನಮ್ಮ ಶಿಕ್ಷಣ ವ್ಯವಸ್ಥೆ ಎಡವುವುದೇ ಇಲ್ಲಿ, ಶಿಕ್ಷಕರು ಗೊತ್ತಿದ್ದೋ-ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ಇವು, ‘ಸೋಲೇ ಗೆಲುವಿನ ಸೋಪಾನ’ ಎಂಬ ಜನಜನಿತ ನಾಣ್ನುಡಿಯನ್ನು ಶಿಕ್ಷಕರು ಬಾಯಿಪಾಠ ಮಾಡಲು ಹೇಳಿಕೊಡುತ್ತಾರೆ, ಆದರೆ ಜೀವನದಲ್ಲಿ ಅಳವಡಿಸಿಕೊಳ್ಳುವ ಕುರಿತು ಹೇಳಿಕೊಡುವಲ್ಲಿ ಬಹುತೇಕರು ಎಡವುತ್ತಾರೆ.

‘ವ್ಯಕ್ತಿತ್ವ ನಿರ್ಮಾಣ’ದ ಕಾರ್ಯಾಗಾರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತವೆ. ಆ ಕುರಿತಂತೆ ಪುಸ್ತಕಗಳೂ ಲಭ್ಯವಿವೆ. ಅವುಗಳಲ್ಲಿ ಪ್ರಮುಖವಾಗಿ ‘ಸೋಲನ್ನು ಗೆಲ್ಲುವುದು ಹೇಗೆ?’ ಎಂಬಂತಹ ವಿಷಯಗಳು ಮಹತ್ವವನ್ನು ಪಡೆದಿರುತ್ತವೆ. ಇಂತವುಗಳು ಜನರನ್ನು ಆಕರ್ಷಿಸುತ್ತವೆ ಕೂಡಾ. ಯಾಕೆ ಹೀಗೆ? ಎಂಬ ಪ್ರಶ್ನೆಯನ್ನು ಮುಂದಿಟ್ಟರೆ ನನ್ನ ಮಟ್ಟಿಗೆ ಸಿಗುವ ಉತ್ತರ ಮತ್ತದೇ ಶಿಕ್ಷಣ ವ್ಯವಸ್ಥೆ. ಶಾಲೆ ಎಂಬುದು ಕೇವಲ ಅಕ್ಷರಸ್ಥರನ್ನು ಸಿದ್ಧಪಡಿಸಿ ಹೊರತರುವ ಕಟ್ಟಡಗಳಲ್ಲ. ಅಲ್ಲಿ ಅಕ್ಷರತೆಯ ಜೊತೆ ವ್ಯಕ್ತಿತ್ವ ನಿರ್ಮಾಣವನ್ನೂ ಮಾಡುವ ಮಹತ್ವದ ಜವಾಬ್ದಾರಿಯಿರುತ್ತದೆ. ಪರೀಕ್ಷೆಯೆಂಬುದು ಮಕ್ಕಳಿಗೆ ಆಟದ ಸ್ಪರ್ಧೆಯಂತಿರಬೇಕೇ ಹೊರತು ಭಯಬೀಳಿಸುವ, ಮಾನಸಿಕವಾಗಿ ಜರ್ಜರಿತರನ್ನಾಗಿಸುವ ಪ್ರಕ್ರಿಯೆಯಾಗಬಾರದು. ಮಕ್ಕಳು ಈ ರೀತಿ ತಯಾರಾಗುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು.

ಪರೀಕ್ಷೆಯ ಪ್ರಾಮುಖ್ಯತೆಯನ್ನು ಹೇಳುವುದರ ಜೊತೆಜೊತೆಗೇ ಸೋಲನ್ನು ಸ್ವೀಕರಿಸುವ ಸ್ವಭಾವವನ್ನು ಮಕ್ಕಳಿಗೆ ತಿಳಿಸಿಕೊಡಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಅದು ಕೇವಲ ಶಾಲಾಮಟ್ಟದ ಸೋಲೇ ಹೊರತು, ಜೀವನದ ಸೋಲಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಿ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಕಲಿಸುವ ವಿಷಯಗಳನ್ನು ಆದಷ್ಟು ಮನರಂಜನೀಯವಾಗಿ ತಿಳಿಹೇಳಿ. ಅದರಿಂದ ಮಕ್ಕಳೂ ಸಹ ಉತ್ಸಾಹಭರಿತರಾಗಿ, ಕುತೂಹಲಿಗಳಾಗಿ ಪಾಠ ಕೇಳುವುದಲ್ಲದೇ, ಸುಲಭವಾಗಿ ಮನನ ಮಾಡಿಕೊಳ್ಳುತ್ತಾರೆ. ಪರೀಕ್ಷೆಯಲ್ಲಿ ಸೋತರೂ ಸಹ ಜೀವನದಲ್ಲಿ ಗೆದ್ದವರ ಕಥೆಗಳನ್ನು ಹೇಳಿ. ಆದರೆ ಯಶಸ್ಸಿನ ರುಚಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವಂತೆ ನೋಡಿಕೊಳ್ಳಿ. ಒಮ್ಮೆ ಸೋತರೆ ಮತ್ತೊಮ್ಮೆ, ಮತ್ತೊಮ್ಮೆ ಸೋತರೆ ಮಗದೊಮ್ಮೆ ಪ್ರಯತ್ನಿಸಿ, ಯಶಸ್ಸಿನ ಬೆನ್ನು ಬೀಳುವುದನ್ನು ಹೇಳಿಕೊಡಿ. ಎಲ್ಲಕ್ಕಿಂತ ಹೆಚ್ಚಾಗಿ ಜೊತೆಗೆ ಓದುವ ಮಕ್ಕಳನ್ನು ಸಹಪಾಠಿಗಳನ್ನಾಗಿ ಪರಿಗಣಿಸುವುದನ್ನು ಹೇಳಿಕೊಡಬೇಕೇ ಹೊರತು ಎದುರಾಳಿಗಳನ್ನಾಗಿ ಅಲ್ಲ. ಈ ಎಲ್ಲ ಅಂಶಗಳನ್ನು ಬದಿಗಿಟ್ಟು ಕೇವಲ ಅಕ್ಷರಸ್ಥರನ್ನಾಗಿಯಷ್ಟೇ ಮಕ್ಕಳನ್ನು ರೂಪಿಸಿದಿರೋ, ನಾಳೆ ಅವರು ‘ವ್ಯಕ್ತಿತ್ವ ನಿರ್ಮಾಣ’ದ ಕಾರ್ಯಾಗಾರಗಳಿಗೆ ಎಡತಾಕುವ ಅಭ್ಯರ್ಥಿಗಳಾಗುತ್ತಾರಷ್ಟೆ.

ನಿಜ, ಪರೀಕ್ಷೆಯಲ್ಲಿ ಗೆದ್ದವ ಉತ್ತಮ ಸಂಬಳ ಪಡೆಯುತ್ತ ಆರಾಮದಾಯಕ ಬದುಕು ನಡೆಸಬಹುದು, ಆದರೆ ಪರೀಕ್ಷೆಯಲ್ಲಿ ಸೋತರೂ ಸಹ ಜೀವನದಲ್ಲಿ ಗೆದ್ದವ ಬದುಕನ್ನು ಅನುಭವಿಸುತ್ತಾ ನಡೆಯುತ್ತಾನೆ, ಎಲ್ಲರಿಗಿಂರ ಭಿನ್ನವಾಗಿ ಯೋಚಿಸಿ ಅದ್ಭುತ ಯಶಸ್ಸನ್ನು ಕಾಣುತ್ತಾನೆ. ಎಷ್ಟೆಂದರೂ ಆತ ಸೋತು ಗೆದ್ದವನಲ್ಲವೇ! ಇದಕ್ಕೆ ಪೂರಕವಾದ ಅದೆಷ್ಟೋ ಉದಾಹರಣೆಗಳು ನಮ್ಮ ಸಮಾಜದಲ್ಲಿದೆ. ವಿದ್ಯಾರ್ಥಿಗಳಿಗೆ ಬರೆಯುವುದು ಹೇಳಿಕೊಡಿ, ಜೊತೆಗೆ ಬದುಕುವುದನ್ನೂ ಕೂಡ; ಅಕ್ಷರ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವನ್ನೂ ಕೂಡ; ಬೆಳಕು ಹಚ್ಚುವುದರ ಜೊತೆಗೆ ಬೆಳಕಾಗುವುದನ್ನೂ ಕೂಡ. ಆಗ ಮಾತ್ರ ಶಿಕ್ಷಣ ನಿಜವಾದ ಅರ್ಥವನ್ನು ಕೊಡುತ್ತದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ನೈತಿಕ ಶಿಕ್ಷಣದ ತರಗತಿಗಳ ಅವಶ್ಯಕತೆ ತೀರಾ ಇದೆ. ಕೊನೆಯದಾಗಿ ಹೇಳಬೇಕೆಂದರೆ, ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳನ್ನು ಅಕ್ಷರಸ್ಥರನ್ನಾಗಿಯಷ್ಟೇ ಅಲ್ಲದೆ ಸುಸಂಸ್ಕøತರನ್ನಾಗಿಯೂ ರೂಪಿಸಬೇಕಿದೆ.

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

Leave a Reply

Your email address will not be published. Required fields are marked *

Trending

Exit mobile version