ದಿನದ ಸುದ್ದಿ
ದೇವಸ್ಥಾನಗಳ ಜಾಗಗಳು ಅನ್ಯರ ಪಾಲಾಗುತ್ತಿವೆ : ಸಚಿವ ಸಿ.ಟಿ ರವಿ
ಸುದ್ದಿದಿನ,ಚಿಕ್ಕಮಗಳೂರು: ರಾಜ್ಯದಲ್ಲಿ ಪುರಾಣ ಪ್ರಸಿದ್ಧ ಇತಿಹಾಸ ಹೊಂದಿರುವ ಪಾರಂಪರಿಕ ದೇವಸ್ಥಾನ ಹಾಗೂ ವಾಸ್ತುಶಿಲ್ಪಗಳನ್ನು ಸಂರಕ್ಷಣಾ ಯೋಜನೆಯ ಹೆಸರಿನಲ್ಲಿ ಸಂರಕ್ಷಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಹೇಳಿದರು.
ಅವರು ಸೋಮವಾರ ಕಡೂರು, ಹಾಗೂ ತರೀಕೆರೆ, ಅಜ್ಜಂಪುರ ತಾಲ್ಲೂಕುಗಳ ಮಚ್ಚೇರಿ, ಹಿರೇನಲ್ಲೂರು, ಆಸಂದಿ, ಬಗ್ಗವಳ್ಳಿ, ಅಮೃತಾಪುರ, ಸೋಂಪುರದಲ್ಲಿರುವ ಪುರಾಣ ಪ್ರಸಿದ್ಧ ಪ್ರಾಚೀನ ದೇವಾಲಯಳಿಗೆ ಭೇಟಿ ನೀಡಿ ಪರಿಶೀಲಿಸಿ ನಡೆಸಿದರು.
ಜಿಲ್ಲೆಯಲ್ಲಿ ಹೊಯ್ಸಳರು, ಕದಂಬರು, ಚೋಳರು, ಚಾಲುಕ್ಯರು ಸೇರಿದಂತೆ ವಿವಿಧ ರಾಜಮನೆತನಗಳ ಆಳ್ವಿಕೆ ನಡೆಸಿ ಆ ಕಾಲದಲ್ಲಿ ನಿರ್ಮಿತವಾದ ಪ್ರಸಿದ್ದ ಪ್ರಾಚೀನ ಇತಿಹಾಸದ ದೇವಾಲಯಗಳಿದ್ದು ಅವುಗಳನ್ನು ಉಳಿಸುವ ಹೊಣೆ ನಮ್ಮೆಲ್ಲರದಾಗಿದ್ದು ಅವುಗಳ ಮೂಲ ಸ್ವರೂಪ ವಿರೂಪವಾಗದಂತೆ ಜೀರ್ಣೋದ್ದಾರ ಕೈಗೊಂಡು ಅಭಿವೃದ್ಧಿಪಡಿಸಲಾಗುವುದು ಎಂದರು.
ರಾಜ್ಯದಲ್ಲಿ ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗೆ ಒಳಪಡುವ1400ಕ್ಕೂ ಹೆಚ್ಚು ದೇವಾಲಯಗಳಿದ್ದು, ಇವುಗಳನ್ನು ಹೊರತುಪಡಿಸಿಯೂ ಸಹ ಹಲವು ದೇವಾಲಯಗಳಿವೆ ಇವುಗಳ ಸಂರಕ್ಷಣೆಗೆ ಕ್ರಮವಹಿಸಲಾಗುವುದು ಎಂದ ಅವರು ಪ್ರಾಚೀನ ಮತ್ತು ಪುರಾತನ ದೇವಾಲಯಗಳ ಸಂರಕ್ಷಣೆಗೆ ಸರ್ಕಾರವು ಮುಂದಿನ ಬಜೆಟ್‌ನಲ್ಲಿ ಸಂರಕ್ಷಣಾ ಯೋಜನೆಯನ್ನು ತೆರೆದು ಅವುಗಳ ಅಡಿಯಲ್ಲಿ ಪುರಾತನ ದೇವಾಲಯ ಹಾಗೂ ವಾಸ್ತುಶಿಲ್ಪಗಳ ನಿರ್ವಹಣೆ ಹಾಗೂ ಅಭಿವೃದ್ಧಿಪಡಿಸಲಿದೆ ಇದಕ್ಕಾಗಿ ಪುರಾತತ್ವ್ವ ಇಲಾಖೆ ಹಾಗೂ ಧರ್ಮೊತ್ಥಾನ ಟ್ರಸ್ಟ್ ಜೊತೆಯಾಗಿ ಒಡಂಬಡಿಕೆ ಮಾಡಿಕೊಂಡು ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದರು.
ಕೋವಿಡ್-19ಕಾರಣದಿಂದಾಗಿ ಈ ಬಾರಿ ಅನುದಾನದ ಕೊರತೆ ಇದ್ದು ಸದ್ಯ ಆದ್ಯತೆ ಮೇರೆಗೆ ಆಯ್ದ ಪ್ರಸಿದ್ದ ದೇವಾಲಯಗಳನ್ನು ಅಭಿವೃದ್ಧಿ ಪಡಿಸಿ ಉಳಿದವುಗಳನ್ನು ಹಂತ- ಹಂತವಾಗಿ ಜೀರ್ಣೋದ್ದಾರ ಮಾಡಲಾಗುವುದು ಹಿಂದೆ ದೇವಾಲಯಗಳಿಗಾಗಿ ಧಾನದತ್ತಿಯ ರೂಪದಲ್ಲಿ ಜಾಗಗಳನ್ನು ನೀಡಿದ್ದು ಪ್ರಸ್ತುತ ದಿನಗಳಲ್ಲಿ ಎಷ್ಟೂ ದೇವಸ್ಥಾನಗಳ ಜಾಗಗಳು ಅನ್ಯರ ಪಾಲಾಗುತ್ತಿವೆ. ಎಷ್ಟೋ ದೇವಾಲಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದಿವೆ ಅಂತವುಗಳನ್ನು ಗುರುತಿಸಿ ಸಂರಕ್ಷಣೆ ಮಾಡಲಾಗುವುದು ಎಂದರು.
ಪ್ರವಾಸಿ ತಾಣಗಳಲ್ಲಿ ಯಾತ್ರಿ ನಿವಾಸಗಳ ಸ್ಥಾಪನೆ ಕುರಿತು ಮಾತನಾಡಿದ ಅವರು ಈ ಬಾರಿಯ ಬಜೆಟ್‌ನಲ್ಲಿ ಯಾತ್ರಿ ನಿವಾಸಗಳ ಸ್ಥಾಪನೆಗೆ ಅವಕಾಶವಿಲ್ಲ ಆದರು ಈ ಬಗ್ಗೆ ಅಧ್ಯಯನ ಕೈಗೊಂಡು ಅಗತ್ಯ ಸ್ಥಳಗಳಲ್ಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಅನೇಕ ಯಾತ್ರಿ ನಿವಾಸಗಳು ಹಾಳುಬಿದ್ದಿವೆ ಎಂದು ದೂರು ಇದೆ ಹಾಗಾಗಿ ಹೊಸದಾದ ಯಾತ್ರಿ ನಿವಾಸಗಳ ಮಂಜೂರು ಕುರಿತು ಚರ್ಚಿಸಲಾಗವುದು ಎಂದು ತಿಳಿಸಿದರು.
ಅಮೃತಾಪುರ ದೇವಾಲಯ ವೀಕ್ಷಣೆ ಮಾಡಿ ಮಾತನಾಡಿದ ಅವರು ಸೂಕ್ಷ್ಮ ಕೆತ್ತನೆ ವಾಸ್ತಶಿಲ್ಪ ಹೊಂದಿರುವ ದೇವಾಲಯಗಳಲ್ಲಿ ಅಮೃತೇಶ್ವರ ದೇಗುಲವು ಒಂದಾಗಿದ್ದು ಪೂರ್ವಿಕರು ಕೊಟ್ಟಿರುವ ಒಂದು ಬಳುವಳಿಯಾಗಿದ್ದು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜೀರ್ಣೊದ್ದಾರ ಕೈಗೊಳ್ಳಲು ಹಂತ- ಹಂತವಾಗಿ ಅನುದಾನ ಬಿಡುಗಡೆಗೊಳಿಸಲಾಗುವುದು. ಇದೊಂದು ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿದ್ದು ಇದರ ಸೂಕ್ಷ್ಮ ಕೆತ್ತನೆ ಕುರಿತು ಸಂಶೋಧನೆಗೆ ವಿವಿಧ ಭಾಗಗಳಿಂದ ಜನ ಇಲ್ಲಿಗೆ ಆಗಮಿಸುತ್ತಿದ್ದಾರೆ ಹಾಗಾಗಿ ಇದನ್ನು ಸಂರಕ್ಷ್ಷಿಸಿ ಪೋಷಿಸುವ ಕರ್ತವ್ಯ ನಮ್ಮೆಲ್ಲರದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್, ಶರತ್ ಕೃಷ್ಣಮೂರ್ತಿ, ತರೀಕೆರೆ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್, ತಹಶೀಲ್ದಾರ್‌ಗಳಾದ ಉಮೇಶ್, ವಿಶ್ವೇಶ್ವರ ರೆಡ್ಡಿ, ಪುರಾತತ್ವ ಇಲಾಖೆಯ ಸಂರಕ್ಷಣಾ ಅಧಿಕಾರಿಗಳು. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243