ಬಹಿರಂಗ

CAA-NRC ಯನ್ನು ಈ ಕಾರಣಗಳಿಗಾಗಿ ವಿರೋಧಿಸಲೇ ಬೇಕು : ಪರ- ವಿರೋಧವಿರುವವರು ಮಿಸ್ ಮಾಡ್ದೆ ಓದಿ

Published

on

  • ಅಪರ್ಣ ಎಚ್.ಎಸ್.

ದೊಡ್ಡ ದುರಂತ ಎಂದರೆ ಸಿಎಎ, ಎನ್ ಆರ್ ಸಿ ಗಳ ಬಗ್ಗೆ ಮಾತಾಡುವಾಗ ಬಹಳಷ್ಚು ಮಂದಿಯ ವರ್ತನೆ ಹೇಗಿದೆ ಎಂದರೆ – ಬಿಜೆಪಿ ತಂದಿದೆ ಅದಕ್ಕೆ ವಿರೋಧಿಸ್ತೀವಿ, ಬಿಜೆಪಿ ತಂದಿದೆ ಹಾಗಾಗಿ ಸಪೋರ್ಟ್ ಮಾಡ್ತೀವಿ, ಹಿಂದುಗಳಿಗೆ ತೊಂದರೆ ಆಗಲ್ಲ ಹಾಗಾಗಿ ನನ್ನ ವಿರೋಧ ಇಲ್ಲ, ಮುಸ್ಲಿಮರಿಗೆ ತೊಂದರೆ ಹಾಗಾಗಿ ನನ್ನ ವಿರೋಧ – ಇಂತಹ ಅಭಿಪ್ರಾಯವೇ ಹೆಚ್ಚು ಕೇಳ್ತಾ ಇದೆ.

ಆದರೆ, ಎನ್ ಆರ್ ಸಿ ದೇಶಾದ್ಯಂತ ಜಾರಿಗೆ ಬಂದಾಗ ಅದು ಎಲ್ಲಾ ಭಾರತೀಯರ ಮೇಲೂ ಪರಿಣಾಮ ಬೀರುತ್ತದೆ, ಸಮಸ್ಯೆ ನನ್ನ ಮನೆ ಬಾಗಿಲಿಗೂ ಬರಬಹುದು ಎನ್ನುವುದು ಬಹಳ ಜನರ ಅರಿವಿಗೆ ಬಂದ ಹಾಗಿಲ್ಲ. ಎನ್ ಆರ್ ಸಿಯನ್ನು ದೇಶಾದ್ಯಂತ ಹೇಗೆ ಜಾರಿಗೆ ತರಲಿದ್ದೇವೆ ಎಂಬ ಬಗ್ಗೆ ಸರ್ಕಾರ ಸ್ಪಷ್ಚವಾಗಿ ಏನೂ ಹೇಳಿಲ್ಲ. ಆದರೆ, ಅಸ್ಸಾಂ ನಲ್ಲಿನ ಎನ್ ಆರ್ ಸಿ ಪ್ರಕ್ರಿಯೆಯನ್ನು ಆಧಾರವನ್ನಾಗಿಟ್ಟುಕೊಂಡರೆ ಎನ್ ಆರ್ ಸಿ ನಡೆಯುವುದು ಹೀಗೆ -(ಸರ್ಕಾರ ಕೆಲವು ಬದಲಾವಣೆಯನ್ನು ಮಾಡಲೇಬೇಕು. ಆದರೆ ಫ್ರೇಂ ವರ್ಕ್ ಹೆಚ್ಚು ಕಮ್ಮಿ ಇದೇ ಇರಬೇಕಾಗುತ್ತದೆ.)

1.ನಿಮ್ಮ ಮನೆ ಮನೆಗೆ ಬಂದು ಮಕ್ಕಳೆಷ್ಟು, ಜಾತಿ ಏನು ಅಂತ ಕೇಳಿ ಬರೆದುಕೊಂಡ ಹೋಗುವ ಖಾನೆಶುಮಾರಿ ಇದಲ್ಲ. ನೀವು ಭಾರತೀಯ ಪ್ರಜೆ ಅಂತ ನಿರೂಪಿಸುವ ಅಗತ್ಯತೆ, ಜವಾಬ್ದಾರಿ ನಿಮ್ಮ ಮೇಲಿದೆ. ಸರ್ಕಾರದ ಮೇಲಲ್ಲ.

ನೀವು ಭಾರತದಲ್ಲಿ ಹುಟ್ಟಿ, ಬೆಳೆದು, ಬಾಳುತ್ತಿದ್ದರೂ ಅದು ಗಣನೆಗೆ ಇಲ್ಲ. ಅಗತ್ಯ ದಾಖಲೆಗಳನ್ನು ಹಿಡಿದುಕೊಂಡು, ಇಲ್ಲವಾದರೆ ಸರ್ಕಾರಿ ಇಲಾಖೆಗಳಲ್ಲಿ ಬಡಿದಾಡಿ, ಹಣ ಚೆಲ್ಲಿ ದಾಖಲೆ ಹೊಂದಿಸಿಕೊಂಡು, ಉದ್ದ ಕ್ಯೂ ನಲ್ಲಿ ನಿಂತು, ದೇವರೆ ಎಲ್ಲಾ ದಾಖಲೆ ಸರಿ ಇರಲಿ, ಮತ್ತೆ ಮತ್ತೆ ಬರುವ ಹಾಗೆ ಆಗದಿರಲಿ ಅಂತ ಪ್ರಾರ್ಥಿಸುವ ಸಮಯ ಎಲ್ಲಾ ಭಾರತೀಯರಿಗೂ ಬರಲಿದೆ.

2. ಇದಕ್ಕೆ ಬೇಕಾದ ದಾಖಲೆಗಳನ್ನು ನೀವು ಈಗ ಮಾಡಿಸಿಕೊಳ್ಳಲು ಆಗುವುದಿಲ್ಲ. ಅಂದರೆ ಈಗ ವೋಟರ್ ಕಾರ್ಡಿಗೆ ಅರ್ಜಿ ಹಾಕುವುದಲ್ಲ. ಸರ್ಕಾರ ಒಂದು ಕಟ್ ಆಫ್ ಡೇಟ್ ಹೇಳುತ್ತದೆ. ಅದರ ಮೊದಲಿನ ದಾಖಲೆಗಳನ್ನು ಮಾತ್ರ ಕೊಡಬೇಕು. ಅಸ್ಸಾಂನ ಲ್ಲಿ ಇದ್ದದ್ದು 1971 ಮಾರ್ಚ್ 24 ಕಟ್ ಆಫ್ ಡೇಟ್. ಅಂದರೆ ಅದರ ಮೊದಲಿನ ದಾಖಲೆಗಳನ್ನೇ ಕೊಡಬೇಕು.

ಅದರ ನಂತರ ಹುಟ್ಟಿದವರ ಬಳಿ ಅದಕ್ಕೆ ಮೊದಲಿನ ದಾಖಲೆ ಇರಲು ಸಾಧ್ಯವಿಲ್ಲ. ಹೀಗಾಗಿ, ಅಂತಹ ದಾಖಲೆ ಇರುವ ತಮ್ಮ ಹೆತ್ತವರ ಜೊತೆಗೆ ತಮ್ಮ ಸಂಬಂಧವನ್ನು ಪ್ರೂವ್ ಮಾಡಬೇಕು. ಉದಾಹರಣೆಗೆ – ಇಡೀ ದೇಶಕ್ಕೆ ಈಗ 1980 ಮಾರ್ಚ್ 24 ಕಟ್ ಆಫ್ ದಿನಾಂಕವೆಂದಾದರೆ, ಅದರ ನಂತರ ಹುಟ್ಟಿದ ನಾನು ನನ್ನ ಅಪ್ಪ ಅಮ್ಮನ ಬಳಿ ಅದಕ್ಕೆ ಮೊದಲು ಪಡೆದ ಯಾವುದಾದರೋ( ಸರ್ಕಾರ ಕೊಟ್ಟ ಪಟ್ಟಿಯಲ್ಲಿರುವ) ದಾಖಲೆ ಇದ್ದರೆ ಅದನ್ನು ಮತ್ತು ಅದರ ಜೊತೆಗೆ ನನ್ನ ಬರ್ತ್ ಸರ್ಟಿಫಿಕೇಟ್, ಸ್ಕೂಲ್ ಸರ್ಟಿಫಿಕೇಟ್ ರೀತಿಯ ಯಾವುದಾದರೋ ಅಪ್ಪ ಅಮ್ಮನ ಹೆಸರಿರುವ ದಾಖಲೆ ಕೊಡಬೇಕು.

3. ಭಾರತದಲ್ಲಿ ಇಂತಹ ದಾಖಲೆಗಳಿಲ್ಲದೆ ಬದುಕುವ ಹಲವಾರು ಬಡವರಿದ್ದಾರೆ. ಪೌರತ್ವ ಎಂದರೇನು ಎಂದೇ ಗೊತ್ತಿಲ್ಲದವರೂ ಇದ್ದಾರೆ. ನಮ್ಮ ಜನರೇಷನ್ ನಲ್ಲಾದರೋ ಸರ್ಕಾರದ ಕೆಲವು ದಾಖಲೆಗಳು ಇರಬಹುದು, ಆದರೆ, ನಮ್ಮ ಹೆತ್ತವರ, ಅಜ್ಜ, ಅಜ್ಜಿಯರ ಕಾಲದಲ್ಲಿ ಎಷ್ಟು ಜನರ ಬಳಿ ಎಂತಹ ದಾಖಲೆಗಳಿವೆ ಗೊತ್ತಿಲ್ಲ.

ನಿಮ್ಮ 80 ವರ್ಷದ ಅಜ್ಜಿಯ ಬಳಿ ಅಂತ ಯಾವುದೇ ದಾಖಲೆ ಇಲ್ಲವಾದರೆ ಆಕೆ ಭಾರತದಲ್ಲಿ 80 ವರ್ಷ ಬದುಕಿದ್ದರೂ ಅದು ಗಣನೆಗೆ ಬರುವುದಿಲ್ಲ. ಆಕೆ ಭಾರತೀಯ ಪ್ರಜೆಯಲ್ಲ ಅಷ್ಟೇ.

4. ದಾಖಲೆಗಳ ಹಂಗೇ ಇಲ್ಲದೆ ಬದುಕಿರುವ ಹಲವು ಬುಡಕಟ್ಟು ಜನಾಂಗ(ಮೂಲ ನಿವಾಸಿಗಳಾದ ಅವರೇ ಎಲ್ಲರಿಗಿಂತ ಹೆಚ್ಚು ಭಾರತೀಯರು ಅನ್ನುವುದನ್ನು ಮರೆಯಬೇಡಿ)ಅಲೆಮಾರಿ ಜನಾಂಗಗಳ ಗತಿ ಏನು? ಗೊತ್ತಿಲ್ಲ.

5. ನಿಮ್ಮ ಬಳಿ ದಾಖಲೆಗಳಿದ್ದರಷ್ಟೇ ಸಾಲದು, ಅದರಲ್ಲಿರುವ ಪ್ರತೀ ಸ್ಪೆಲ್ಲಿಂಗ್, ಹೆಸರು, ಸಂಬಂಧಗಳು ಹೊಂದಾಣಿಕೆ ಆಗಬೇಕು. ಹೀಗಾಗಿ, ಒಂದೇ ಮನೆಯಲ್ಲಿ ನೀವು ಭಾರತೀಯ ನಾಗರಿಕರಾಗಿ ಉಳಿಯಬಹುದು. ಆದರೆ, ನಿಮ್ಮ ಅಣ್ಣನೋ ತಂಗಿಯೋ ವಿದೇಶಿ ಎನಿಸಿಕೊಳ್ಳಬಹುದು.

6. ದುರದೃಷ್ಟವಶಾತ್ ನಿಮ್ಮ ದಾಖಲೆಗಳು ಸರಿಯಿಲ್ಲ ಅಂತಾಗಿ, ಭಾರತೀಯರೇ ಅಲ್ಲ ಅಂತಾದರೆ, ಟ್ರಿಬ್ಯುನಲ್, ಕೋರ್ಟ್ ಬಾಗಿಲು ತಟ್ಟಬೇಕು. ಲಾಯರ್ ಗಳನ್ನು ಇಟ್ಟುಕೊಂಡು ಕೇಸು ನಡೆಸಬೇಕು.

ಅಲ್ಲೂ ಸಮಸ್ಯೆ ಸರಿಯಾಗದಿದ್ದರೆ, ನೀವು ಹೊಸದಾಗಿ ಪೌರತ್ವಕ್ಕೆ ಅರ್ಜಿ ಹಾಕಬೇಕಾಗಬಹುದು. ನೀವು ಹಿಂದೂವಾಗಲೀ, ಮುಸ್ಲಿಂ ಆಗಲೀ ಮತ್ಯಾರೇ ಆಗಲಿ ಪೌರತ್ವಕ್ಕೆ ಹೋರಾಡುವುದು ಈಗ ನಿಮ್ಮ ಕರ್ಮ.

7. ಈಗ ಸಿಎಎ ಬಂದಿದೆ, ಹೀಗಾಗಿ, ಹಿಂದುವಾದ ನನಗೆ ಪೌರತ್ವ ಬೇಗ ಸಿಗುತ್ತದೆ ಎಂದು ಯಾರಾದರೋ ಅಂದುಕೊಂಡರೆ ನನ್ನ ಪ್ರಕಾರ ಇಲ್ಲ.ಏಕೆಂದರೆ ಸಿಎಎ ಬಾಂಗ್ಲಾ, ಪಾಕಿಸ್ತಾನ್, ಅಫಘಾನಿಸ್ತಾನದ ವಲಸಿಗರಿಗೆ ಮಾತ್ರ ಸಂಬಂಧಿಸಿದ್ದು. ಭಾರತೀಯರೇ ಆಗಿದ್ದು ಪ್ರೂವ್ ಮಾಡಲಾರದ ನಿಮಗಿರುವುದು ( ಈ ಮೂರು ದೇಶಗಳಿಂದ ವಲಸ ಬಂದಿಲ್ಲದ ಎಲ್ಲಾ ಮತದ, ಭಾರತೀಯರಿಗೆ) ಪೌರತ್ವ ಕಾಯಿದೆಯಲ್ಲಿರುವ 11+1 ವರ್ಷದ ಮಾಮೂಲಿ ನ್ಯಾಚುರಲೈಸೇಷನ್ ವಿಧಾನ.

ಹೀಗಿದ್ದೂ. ಮುಸ್ಲಿಮೇತರರಿಗೆ ಈ ಮೂರು ದೇಶದಿಂದ ವಲಸೆ ಬಂದಂತೆ ತೋರಿಸಲು ಸಾಧ್ಯವಾದರೆ(ಉತ್ತರದ ರಾಜ್ಯಗಳಿಗೆ ಹಲವರಿಗೆ ಸಾಧ್ಯವಾಗಬಹುದೇನೋ) ಸಿಎಎ ಮೂಲಕ ಬೇಗ ಪೌರತ್ವ ಸಿಗುತ್ತದೆ. ಆದರೆ, ಮುಸ್ಲಿಮರಿಗೆ ಆ ಸೌಲಭ್ಯವೂ ಇಲ್ಲ.

8. ಇಷ್ಚಿದ್ದೂ ಎನ್ ಆರ್ ಸಿ ಗೂ ಸಿಎಎ ಗೂ ಸಂಬಂಧವೇ ಇಲ್ಲ ಎಂಬುದನ್ನು ನೀವು ನಂಬುತ್ತೀರಾದರೆ ಕಮೆಂಟಿನಲ್ಲಿರುವ ವೀಡಿಯೋ ಲಿಂಕ್ ನೋಡಿ. ಅಮಿತ್ ಶಾ ತಮ್ಮ ಬಾಯಾರೆ ಹೇಳಿರುವುದನ್ನು ಕೇಳಿ.

9. ಇದೆಲ್ಲಾ ಊಹೆಗಳು, ಭಾರತೀಯರಿಗೆ ತೊಂದರೆ ಆಗೋದಿಲ್ಲ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಅಸ್ಸಾಂನ ಎಷ್ಟೋ ಭಾರತೀಯರು ದಾಖಲೆಗಳಿಲ್ಲದೆ ಎನ್ ಆರ್ ಸಿಯ ಮೊದಲ ಪಟ್ಟಿಯಿಂದ ಹೊರಗೆ ಉಳಿದು ತೊಂದರೆ ಅನುಭವಿಸಿದ್ದಾರೆ. ಏಕೆಂದರೆ ದೇಶಕ್ಕೆ ಹೋರಾಡಿದ ಯೋಧರು, ಪ್ರವಾಹದಲ್ಲಿ ಮುಳುಗಿದ್ದ ತನ್ನ ಶಾಲೆಯ ಅಂಗಳದಲ್ಲಿ ಕುತ್ತಿಗೆ ಮಟ್ಟದ ನೀರಿನಲ್ಲಿ ನಿಂತು ಸ್ವಾತಂತ್ರ್ಯೋತ್ಸವದ ದಿನ ಧ್ವಜಕ್ಕೆ ಸೆಲ್ಯೂಟ್ ಮಾಡಿದ್ದ ವೈರಲ್ ಫೋಟೋದಲ್ಲಿದ್ದ ಹುಡುಗನೂ ಪಟ್ಟಿಯಿಂದ ಹೊರಗೆ ಇದ್ದ ಬಗ್ಗೆ ವರದಿಯಾಗಿತ್ತು. ಪರಿಷ್ಕೃತ ಪಟ್ಟಿಯಲ್ಲಿ ಇವರ ಹೆಸರು ಇದೇಯೋ ಗೊತ್ತಿಲ್ಲ. ಇಲ್ಲಿ ದಾಖಲೆ ಮಾತ್ರ ಮುಖ್ಯ. ನಾವು ಭಾರತೀಯರು ಎಂಬ ಭಾವನೆಯಲ್ಲ.

10. ಈ ಪೌರತ್ವದ ಗಲಾಟೆ ಅಸ್ಸಾಂನಲ್ಲಿ ದಶಕಗಳಿಂದ ನಡೆಯುತ್ತಿರುವುದಾದ್ದರಿಂದ ಪೌರತ್ವ ಸಾಬೀತು ಮಾಡಲಾರದವರಿಗೆ ಏನಾಗುತ್ತದೆ ಎಂಬುದನ್ನು ಅಲ್ಲಿಯ ಉದಾಹರಣೆ ಮೂಲಕ ನೋಡಬಹುದು. ಅಸ್ಸಾಂ ಅಕಾರ್ಡ್ ನ ಮುಖಾಂತರ 3.5 ಲಕ್ಷ ಜನರನ್ನು ಪೌರರಲ್ಲ ಎಂದು ಗುರುತಿಸಿ ಚುನಾವಣಾ ಆಯೋಗ ಅವರನ್ನು ಡಿ ವೋಟರ್ಸ್ ಎಂದು ಕರೆದಿತ್ತು.

ಅವರಲ್ಲಿ ಹಲವರ ಕೇಸು ಫಾರಿನರ್ಸ್ ಟ್ರಿಬ್ಯುನಲ್, ಕೋರ್ಟ್ ಗಳಲ್ಲಿ ಇದೆ. ಅಂತಹವರಲ್ಲಿ ಕೆಲವರನ್ನು ಜೈಲಿಗಳಲ್ಲಿ ನಿರ್ಮಿಸಲಾಗಿದ್ದ ಡಿಟೆಂಷನ್ ಸೆಂಟರ್ ಗಳಿಗೆ (ಹಿಂದೂ, ಮುಸ್ಲಿಂ ಎಲ್ಲರೂ) ಕಳುಹಿಸಲಾಗಿದೆ. ಇಂತಹ ಡಿಟೆಂಷನ್ ಸೆಂಟರ್ ಗಳಲಿದ್ದು ನಂತರ ತಮ್ಮ ಪೌರತ್ವ ಸಾಬೀತುಪಡಿಸಿ ಹೊರಬಂದ ಮೂವರ ಸಂದರ್ಶನ ಇರುವ ವಿಡೀಯೋ ಕಮೆಂಟ್ ನಲ್ಲಿ ಇದೆ. ದೇಶಾದ್ಯಂತ ಹೀಗೇ ಇರಬಹುದಾ, ಗೊತ್ತಿಲ್ಲ. ಹೀಗೂ ಇರಬಹುದು ಎನ್ನುವುದಂತೂ ನಿಜ.

ಸೋ, ದೇಶಾದ್ಯಂತ ಎನ್ ಆರ್ ಸಿ ಜಾರಿಗೆ ಬಂದಾಗ ನಿಮ್ಮ ಹಣ, ಸಮಯ, ತಾಳ್ಮೆ ಎಲ್ಲದರ ಜೊತೆಗೆ ಸಿದ್ದರಾಗಿ. ಭಾರತದ ಹೊರಗೆ ಕುಳಿತು “ವಿ ಸಪೋರ್ಟ್ ಎನ್ ಆರ್ ಸಿ” ಎನ್ನುವ ಅನಿವಾಸಿ ಭಾರತೀಯರು ಆಗ ರಜಾ ಹಾಕಿ ದೇಶಕ್ಕೆ ಬಂದು ಇಲ್ಲಿನ ರೋಡು, ನೀರು, ವ್ಯವಸ್ಥೆಗಳನ್ನು ಬೈಯ್ಯುತ್ತಾ ದಾಖಲೆ ಹಿಡಿದುಕೊಂಡು ಓಡಾಡಲು ತಯಾರಾಗಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version