ಲೋಕಾರೂಢಿ

ದುಬಾರಿಯಾದ ಈರುಳ್ಳಿ, ಮಾಂಸದ ಬೆಲೆಗಳು ಮತ್ತು ಸಿಎಎ-ಎನ್ ಆರ್ ಸಿ ಹೋರಾಟ

Published

on

  • ರಂಗನಾಥ ಕಂಟನಕುಂಟೆ

ಮಾಂಸ ತರಲು ಇಂದು ಅಂಗಡಿಗೆ ಹೋಗಿದ್ದೆ. ಒಂದು ಕೆ.ಜಿ. ಮಾಂಸ ಕೊಂಡುಕೊಂಡು 500ರೂ ಕೊಟ್ಟೆ. ಅಂಗಡಿಯವರು 560 ರೂ ಎಂದರು! ಒಂದು ತಿಂಗಳ ಹಿಂದೆ ಕೆ.ಜಿ. ಮಾಂಸಕ್ಕೆ 480 ರೂ ಕೊಟ್ಟಿದ್ದೆ. ಅದರ ಆಧಾರದ ಮೇಲೆ 500 ರೂ ಕೊಟ್ಟೆ. ಅವರು 560 ಎಂದ ಮೇಲೆ ಮತ್ತೆ ನೂರು ಕೊಟ್ಟಿದ್ದಕ್ಕೆ ಚಿಲ್ಲರೆ ಇಲ್ಲದ ಕಾರಣ ಒಂದು ತುಂಡು ಮಾಂಸ ಹಾಕಿ 600 ರೂ ಸರಿಯಾಯಿತು ಎಂದರು. ಮನದಲ್ಲೇ ಚಿಂತಿಸುತ್ತ ಮನಗೆ ಬಂದು ಬೇಯಿಸಿ ತಿಂದೂ ಆಯಿತು. ನಾಲ್ಕು ಜನರಿಗೆ ಅದು ಸಾಲಲಿಲ್ಲ!

ಇಲ್ಲಿನ ಮುಖ್ಯ ವಿಚಾರ ಇದಲ್ಲ. ಸದ್ಯಕ್ಕೆ ಇಷ್ಟು ಹಣವನ್ನು ಕೊಟ್ಟು ಖರೀದಿಸಿ ತಿನ್ನುವ ಸಾಮಥ್ರ್ಯ ಇರುವವರು ತಿನ್ನುತ್ತಾರೆ. ಈ ಬೆಲೆ ಮತ್ತೂ ಏರಲಿದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ.

ಆದರೆ ದಿನಕ್ಕೆ ಇನ್ನೂರು ಮುನ್ನೂರು ನಾನ್ನೂರು ಐನೂರು ಇದಕ್ಕಿಂತ ಕೊಂಚ ಹೆಚ್ಚು ಕಡಿಮೆ ಆದಾಯವನ್ನು ಪ್ರತಿದಿನ ಗಳಿಸುವ ಜನರು ಇಷ್ಟೊಂದು ಬೆಲೆ ನೀಡಿ ಕುರಿ ಮೇಕೆ ಮಾಂಸವನ್ನು ಖರೀದಿಸಿ ತಿನ್ನಲು ಸಾಧ್ಯವೇ? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗಿದೆ.

ಇದು ದುಬಾರಿ ಎನ್ನಿಸಿ ಸಹಜವಾಗಿ ಮಾಂಸಾಹಾರಿಗಳು ಹೈಬ್ರಿಡ್ ಕೋಳಿ ಮಾಂಸದತ್ತ ಚಲಿಸುತ್ತಾರೆ. ಇದು 120ರ ಆಸುಪಾಸಿನಲ್ಲಿ ಸಿಗುತ್ತದೆ. ಆದರೆ ಈ ಹೈಬ್ರಿಡ್ ಕೋಳಿ ಮಾಂಸ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಅನೇಕ ಆಹಾರ ತಜ್ಞರು ಎಚ್ಚರಿಸಿದ್ದಾರೆ. ನಿರಂತರವಾಗಿ ಇದನ್ನು ಸೇವಿಸುವವರ ಆರೋಗ್ಯದ ಮೇಲೆ ಮಾರಕ ಪರಿಣಾಮಗಳು ಬೀರುವುದರಲ್ಲಿ ಅನುಮಾನವೇ ಇಲ್ಲ.

ಅಂದರೆ ಕಡಿಮೆ ಆದಾಯ ಇರುವವರು ಕುರಿ ಮೇಕೆ ಮಾಂಸವನ್ನು ಖರೀದಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ಹೈಬ್ರಿಡ್ ಚಿಕನ್ ಆಯ್ಕೆಮಾಡಿಕೊಳ್ಳುತ್ತಾರೆ. ಅಂದರೆ ಬೆಲೆಗಳು ವಿಪರೀತ ಹೆಚ್ಚಿದಾಗ ಅದು ಕಡಿಮೆ ಆದಾಯ ಇರುವ ಜನರ ಆಹಾರ ಕ್ರಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದು ಸಹಜವಾಗಿ ಅವರ ಆರೋಗ್ಯದ ಮೇಲೆ ¯ ಪರಿಣಾಮ ಬೀರುತ್ತದೆ ಎಂಬುದನ್ನೂ ಇದು ತೋರಿಸಿಕೊಡುತ್ತದೆ.

ಅಲ್ಲದೆ ಹೆಚ್ಚು ದುಡಿಮೆ ಇರುವವರ ಮತ್ತು ಕಡಿಮೆ ಆದಾಯ ಇರುವವರ ನಡುವೆ ಆಹಾರ ಕ್ರಮದಲ್ಲಿ ವ್ಯತ್ಯಾಸ ಉಂಟಾಗುವುದನ್ನು ಇದು ತೋರಿಸಿಕೊಡುತ್ತದೆ. ಕುರಿ ಮೇಕೆ ಮಾಂಸವು ಉಳ್ಳವರ ಆಹಾರವಾಗಿ ಹೈಬ್ರಿಡ್ ಕೋಳಿ ಮಾಂಸವು ಬಡವರ, ಕಾರ್ಮಿಕರ, ಕಡಿಮೆ ಆದಾಯ ಇರುವವರ ಆಹಾರವಾಗಿ ಬದಲಾಗುತ್ತದೆ.

ಇದು ಹೊಸ ಬಗೆಯ ತರತಮ ಸೃಷ್ಟಿಸುತ್ತದೆ. ಇದೇ ಹೊತ್ತಿನಲ್ಲಿ ಮೀನಿನ ಬೆಲೆಗಳು ವಿಪರೀತ ಹೆಚ್ಚಿವೆ. ಕರಾವಳಿಯವರಿಗೂ ಇದರ ಬಿಸಿ ತಟ್ಟಿದೆ. ಮೀನೂ ಕೂಡ ಬಡವರಿಗೆ ಎಟುಕದ ಮಟ್ಟಕ್ಕೆ ಅದರ ಬೆಲೆಗಳು ಏರುತ್ತಿವೆ. ಮಾಂಸಾಹಾರಿಗಳ ನಡುವೆ ಇದು ಹೊಸದೇ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ.

ಇದೇ ಹೊತ್ತಿನಲ್ಲಿ ಒಂದು ಕೆ.ಜಿ. ಈರುಳ್ಳಿ 120ರಿಂದ180 ರೂ ಇದೆ. ಇದೇ ರೀತಿಯಾಗಿ ಹಣ್ಣುಗಳು, ಅನೇಕ ಪದಾರ್ಥಗಳ ಬೆಲೆಗಳು ವಿಪರೀತ ಹೆಚ್ಚಿವೆ. ಈ ಸಮಸ್ಯೆಗಳ ಬಗೆಗೆ ಯೋಚಿಸುವುದು ಅತ್ಯಂತ ಜರೂರಾಗಿದೆ.

ಆದರೆ ಈಗ ಮನೆ ಬಾಗಿಲಿಗೆ ಬಂದಿರುವ ಮಹಾಮಾರಿ ಸಿಎಎ ಕಾಯ್ದೆ-ಎನ್‍ಆರ್‍ಸಿಗಳು ಇಂತಹ ದುಡಿಮೆಗಾರರನ್ನು ಬಡವರನ್ನು ಕಾರ್ಮಿಕರನ್ನು ದುಡಿಮೆಗಾರರನ್ನು ಬೀದಿಗಳಿಗೆ ಎಳೆದಿದೆ. ಇಂತಹ ಮಹಾಮಾರಿಯ ವಿರುದ್ಧ ಹೋರಾಡುವುದೋ ತಿನ್ನುವ ಆಹಾರದ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಹೋರಾಡುವುದೋ? ಎಂಬ ಸಂದಿಗ್ಧತೆ ಸೃಷ್ಟಿಯಾಗಿದೆ.

ಒಂದೆಡೆ ಬದುಕುವ ಪರದಾಟ; ಮತ್ತೊಂದೆಡೆ ನೀವು ಈ ದೇಶದ ಪ್ರಜೆಗಳು ಎಂಬುದನ್ನು ಸರ್ಕಾರಿ ದಾಖಲೆ ಕೊಟ್ಟು ನಿಮ್ಮ ಪೌರತ್ವವನ್ನು ಸಾಬೀತು ಪಡಿಸಿ ಎಂಬ ಒತ್ತಡ. ಈ ಪೌರತ್ವವನ್ನು ಸಮರ್ಥಿಸಿಕೊಳ್ಳದೇ ಹೋದರೆ ಅಸ್ಸಾಂನಲ್ಲಿ ಸಂಭವಿಸಿರುಂತೆ ಡಿಟೆಂಶನ್ ಕ್ಯಾಂಪ್ ಸೇರಬೇಕಾದ ಆತಂಕ. ಈ ದೇಶದ ಪ್ರಜೆಗಳ ಸಾಮಾನ್ಯ ಜನರ ಬದುಕು ದಿವಾಳಿಯೇಳಲು ಇನ್ನೇನು ಬೇಕು?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version