ಬಹಿರಂಗ

ಜಾತಿ ಪದ್ದತಿ : ಎಲ್ಲರೂ ಓದಲೇ ಬೇಕಾದ ಡಾ. ಅಂಬೇಡ್ಕರ್ ಅವರ ಬರಹ..!

Published

on

ಜಾತಿಪದ್ಧತಿಯ ಸಮರ್ಥನೆಗಾಗಿ ಕೆಲವರು ವಂಶಶುದ್ದಿಯ ತತ್ವವನ್ನು ಬಳಸಿಕೊಂಡಿದ್ದಾರೆ . ಒಂದು ಜನಾಂಗದ ಅಥವಾ ವಂಶದ ಶುದ್ಧತೆಯನ್ನು ಕಾಪಾಡುವುದೇ ಜಾತಿಯ ಉದ್ದೇಶವೆಂದು ವಾದಿಸಲಾಗುತ್ತದೆ . ವಂಶಶಾಸ್ತ್ರಜ್ಞರ ಮೇರೆಗೆ ಜಗತ್ತಿನಲ್ಲಿ ಈಗ ಎಲ್ಲಿಯೂ ಶುದ್ದವಂಶವೆಂಬುದು ಉಳಿದಿಲ್ಲ . ಎಲ್ಲ ಕಡೆಯೂ ವಂಶಗಳು ಸಂಕರವಾಗಿ ಹೋಗಿವೆ . ಭಾರತದಲ್ಲಿ ಈ ಸಂಕರ ವಿಶೇಷವಾಗಿ ನಡೆದಿದೆ.

ಹಿಂದೂ ಜನತೆಯಲ್ಲಿ ಪರಕೀಯ ಅಂಶಗಳು ‘ ಎಂಬ ತಮ್ಮ ಲೇಖನದಲ್ಲಿ ಶ್ರೀ ಡಿ . ಆರ್ . ಭಂಡಾರ್‌ಕರ್ ಅವರು ಹೀಗೆ ಹೇಳಿದ್ದಾರೆ , “ ಪರಕೀಯ ಅಂಶ ಬೆರೆಯದಂತಹ ಒಂದು ವರ್ಗವಾಗಲಿ , ಜಾತಿಯಾಗಲಿ ಭಾರತದಲ್ಲಿ ಉಳಿದಿಲ್ಲ. ರಜಪೂತ , ಮರಾಠ ಮೊದಲಾದ ಕೃತಿಯ ವರ್ಗಗಳಲ್ಲಿ ಮಾತ್ರವಲ್ಲ ತಾವು ಸಂಪೂರ್ಣ ಶುದ್ದರೆಂದು ಭ್ರಮಿಸಿಕೊಂಡಿರುವ ಬ್ರಾಹ್ಮಣರಲ್ಲೂ ಕೂಡ ಪರಕೀಯ ರಕ್ತಸಂಕರವಾಗಿದೆ ” , ವಂಶ ಸಂಕರವನ್ನು ತಡೆಯುವ ಅಥವಾ ರಕ್ತಶುದ್ದಿಯನ್ನು ರಕ್ಷಿಸಿಕೊಳ್ಳುವ ಮಾರ್ಗವಾಗಿಯೇ ಜಾತಿಪದ್ಧತಿ ಬೆಳೆಯಿತೆಂದು ಹೇಳಲಾಗದು ವಾಸ್ತವವಾಗಿ ನೋಡಿದರೆ ಭಾರತದ ವಿವಿಧ ಜನಾಂಗಗಳಲ್ಲಿ ಪರಸ್ಪರ ರಕ್ತಸಂಬಂಧ ಹಾಗೂ ಸಂಸ 3 ಸಮನ್ವಯ ನಡೆದುಹೋಗಿ ಎಷ್ಟೋ ಕಾಲದ ನಂತರ ಜಾತಿಪದ್ಧತಿ ಹುಟ್ಟಿಕೊಂಡಿತು .

ಜಾತಿ ಭೇದಗಳನ್ನು, ಜನಾಂಗ ಭೇದಗಳೆಂದು ಭ್ರಮಿಸಿ ಹಾಗೆ ನಡೆದುಕೊಳ್ಳುವುದೆಂದರೆ ವಸ್ತುಸ್ಥಿತಿಯ ವಿಪರ್ಯಾಸ. ಪಂಜಾಬ್ ಬ್ರಾಹ್ಮಣನಿಗೂ ಮದ್ರಾಸಿ ಬ್ರಾಹ್ಮಣನಿಗೂ ನಡುವೆ ಯಾವ ವಂಶ ಸಂಬಂಧವಿದೆ ? ಬಂಗಾಳದ ಅಸ ಶನಿಗೆ ಮದ್ರಾಸಿ ಅಸ್ಪಶ್ಯನೊಡನೆ ಯಾವ ವಂಶೀಯ ಸಂಬಂಧವಿದೆ ? ಪಂಜಾಬದ ಬ್ರಾಹ್ಮಣನಿಗೂ ಪಂಜಾಬದ ಚಮಾರನಿಗೂ ಯಾವ ವಂಶೀಯ ಭೇದವಿದೆ ? ಮದ್ರಾಸಿ ಬ್ರಾಹ್ಮಣನಿಗೂ ಮದ್ರಾಸಿ ಚಂಡಾಲನಿಗೂ ಯಾವ ವಂಶಭೇದವಿದೆ ? ಪಂಜಾಬದ ಬ್ರಾಹ್ಮಣ ಹಾಗೂ ಚಮ್ಮಾರ ಇಬ್ಬರೂ ಒಂದೇ ವಂಶಕ್ಕೆ ಸೇರಿದವರು . ಇದೇ ಮಾತು ಮದ್ರಾಸಿಗಳಿಗೂ ಅನ್ವಯಿಸುತ್ತದೆ. ಜಾತಿಪದ್ಧತಿ ವಂಶಭೇದವನ್ನು ಗುರುತಿಸುವುದಿಲ್ಲ . ಒಂದೇ ವಂಶದವರಲ್ಲಿ ಸಾಮಾಜಿಕ ಭೇದಗಳನ್ನು ಮಾತ್ರ ಜಾತಿಪದ್ಧತಿ ಉಂಟುಮಾಡಿದೆ.

ಒಂದು ವೇಳೆ ಜಾತಿಭೇದ ವಂಶಭೇದವೆಂದೇ ಇದ್ದಿತೆಂದು ಭಾವಿಸೋಣ . ಹಾಗಿದ್ದಾಗ ಅಂತರ್ಜಾತೀಯ ವಿವಾಹಗಳ ಮೂಲಕ ವಂಶಗಳು ಸಂಕರವಾದರೆ ತಪ್ಪೇನಾಯಿತು ? ಮನುಷ್ಯರಿಗೂ ಇತರ ಪ್ರಾಣಿಗಳಿಗೂ ಇರುವ ಅಂತರ ತುಂಬ ದೊಡ್ಡದು . ಆದುದರಿಂದ ವಿಜ್ಞಾನಿಗಳು ಮನುಷ್ಯರನ್ನು ಹಾಗೂ ಪ್ರಾಣಿಗಳನ್ನು ಎರಡು ಪ್ರತ್ಯೇಕ ವರ್ಗಗಳಾಗಿ ವಿಂಗಡಿಸಿದ್ದಾರೆ . ಜನಾಂಗದವು ಜೀವಿಗಳ ವರ್ಗಭೇದವೆಂದು ವಿಜ್ಞಾನಿಗಳು ಒಪ್ಪುವುದಿಲ್ಲ . ವಿವಿಧ ಜನಾಂಗಗಳು ಒಂದೇ ವರ್ಗದ ವಿವಿಧ ಶಾಖೆಗಳು ಮಾತ್ರ . ಹೀಗಿರುವುದರಿಂದ ಈ ವಿವಿಧ ಜನಾಂಗಗಳು ರಕ್ತಸಂಬಂಧ ಮಾಡಿದ್ದಲ್ಲಿ ಹುಟ್ಟುವ ಜೀವಿಗಳು ವಂಶಾಭಿವೃದ್ದಿಗೆ ಸಮರ್ಥವಾಗಿ ಇರುವುವಲ್ಲದೆ ನಪುಂಸಕವಾಗಲಾರವು . ಜಾತಿಪದ್ಧತಿಯನ್ನು ಸಮರ್ಥಿಸುವುದಕ್ಕಾಗಿ ವಂಶಪರಂಪರೆ , ಉತ್ತಮ ಸಂತಾನ ಮುಂತಾಗಿ ಹೇರಳವಾದ ಹುಚ್ಚು ಮಾತುಗಳನ್ನು ಆಡಲಾಗುತ್ತಿದೆ . ಜಾತಿಪದ್ಧತಿ ಉತ್ತಮ ಸಂತಾನ ತತ್ವಕ್ಕೆ ಬದ್ದವಾಗಿಯೇ ಇದ್ದ ಪಕ್ಷದಲ್ಲಿ ಅದನ್ನು ಯಾರೂ ವಿರೋಧಿಸಲಾರರು . ಆದರೆ ಜಾತಿಪದ್ಧತಿ ಉತ್ತಮ ಗಂಡು ಹಾಗೂ ಉತ್ತಮ ಹೆಣ್ಣುಗಳ ದಾಂಪತ್ಯಕ್ಕೆ ಸಹಾಯಕವಾಗಿದೆಯೆ ?

ಜಾತಿಪದ್ಧತಿ ನಿಷೇಧಾತ್ಮಕವಾಗಿದೆ, ಅಂತರ್ಜಾತಿಯ ದಾಂಪತ್ಯವನ್ನು ಅದು ಪ್ರತಿಬಂಧಿಸುತ್ತದೆ . ಜಾತಿಯೆಂಬುದು ಉತ್ತಮ ಸಂತಾನ ದೃಷ್ಟಿಯಿಂದ ಹುಟ್ಟಿದ್ದಲ್ಲ . ಜಾತಿ ಜನಾಂಗವೆಂದಾದರೆ , ಉಪಜಾತಿಗಳು ಜನಾಂಗಭೇದಗಳಾಗವು ; ಏಕೆಂದರೆ ಒಂದೇ ಜನಾಂಗದ ಉಪಭೇದಗಳಾದುದರಿಂದ ಅದು ಅದೇ ಜನಾಂಗಕ್ಕೆ ಸೇರಿರುತ್ತದೆ . ಹೀಗಿರುವುದರಿಂದ ಅಂತರ್ಜಾತೀಯ ವಿವಾಹಕ್ಕೆ ಹಾಗೂ ಅಂತರ್ಜಾತೀಯ ಭೋಜನಕ್ಕೆ ಪ್ರತಿಬಂಧವೇಕೆ ? ಜನಾಂಗದ ಅಥವಾ ವಂಶದ ಶುದ್ದಿಯನ್ನು ಕಾಪಾಡುವುದು ಇದರ ಉದ್ದೇಶವಲ್ಲ ಎಂದಾಯಿತು . ಜಾತಿ ಉಪಜಾತಿಗಳ ಸಹಭೋಜನವನ್ನು ಪ್ರತಿಬಂಧಿಸುವ ಉದ್ದೇಶವೇನು ? ಸಹಭೋಜನದಿಂದ ವಂಶ ಹಾಳಾಗಲಾರದು , ಉತ್ತಮವೂ ಆಗಲಾರದು . ಇದನ್ನೆಲ್ಲ ನೋಡಿದಾಗ ಜಾತಿಭೇದ ವೈಜ್ಞಾನಿಕವಲ್ಲವೆಂದು ಸಿದ್ದವಾಗುತ್ತದೆ . ಉತ್ತಮ ಸಂತಾನ ತತ್ವವನ್ನು ಬಳಸಿಕೊಂಡು ಜಾತಿಯನ್ನು ಸಮರ್ಥಿಸುವುದೆಂದರೆ ಅವೈಜ್ಞಾನಿಕ ವಿಷಯಕ್ಕೆ ವೈಜ್ಞಾನಿಕ ಸಮರ್ಥನೆಯನ್ನು ನೀಡಿದಂತೆಯೇ ಸರಿ . ವಂಶದಲ್ಲಿ ಪಿತ್ರಾರ್ಜಿತ ಅಂಶ ಯಾವ ನಿಯಮಗಳನ್ನು ಅನುಸರಿಸುತ್ತದೆಂಬುದು ನಿಖರವಾಗಿ ನಮಗೆ ಇನ್ನೂ ತಿಳಿದಿಲ್ಲ . ಆದುದರಿಂದ ಉತ್ತಮ ಸಂತಾನದ ಯೋಜನೆ ವ್ಯವಹಾರ ಯೋಗ್ಯವೆಂದು ಹೇಳಲಾಗದು .
‘ ಮಂಡಲ್ಲನ ಆನುವಂಶಿಕಾ ತತ್ವಗಳು ‘ ಎಂಬ ಗ್ರಂಥವನ್ನು ಕುರಿತು ಬೇಟ್ಟನ್ ಹೀಗೆನ್ನುತ್ತಾರೆ , “ ಉಚ್ಚ ತರಗತಿಯ ಮಾನಸಿಕ ಗುಣಗಳು ಅನುವಂಶಿಕವಾಗಿ ಬಂದರೆ ಅವು ಯಾವುದೇ ಒಂದು ನಿಯಮಕ್ಕೆ , ಅರ್ಥಕ್ಕೆ , ಕ್ರಮಕ್ಕೆ ಒಳಪಟ್ಟು ಬರುತ್ತವೆ ಎಂದು ತೋರುವುದಿಲ್ಲ . ದೈಹಿಕ ವೈಶಿಷ್ಟ್ಯಗಳೂ ಮಾನಸಿಕ ಗುಣಗಳೂ ಅನೇಕ ಘಟಕಗಳ ಯೋಗಾಯೋಗದಿಂದ ಉತ್ಪನ್ನವಾಗುವುದೇ ಹೊರತಾಗಿ , ಒಂದು ನಿರ್ದಿಷ್ಟ ಸಂತಾನ ಮೂಲದಿಂದಲೇ ಆದುವೆಂದು ಹೇಳಲಾಗದು.

ಜಾತಿಪದ್ಧತಿ ಉತ್ತಮ ಸಂತಾನಶಾಸ್ತ್ರ ದೃಷ್ಟಿಯಿಂದ ನಿರ್ಮಿತವಾಯಿತೆಂದು ಹೇಳಿದರೆ ಇಂದಿನ ವಿಜ್ಞಾನಿಗಳಿಗೆ ಕೂಡ ಇಲ್ಲದ ಜ್ಞಾನವನ್ನು ಈಗಿನ ಹಿಂದೂಗಳ ಪೂರ್ವಜರು ಪಡೆದಿದ್ದರೆಂದು ಹೇಳಿದಂತಾಗುತ್ತದೆ . ಹಣ್ಣುಗಳನ್ನು ನೋಡಿ ಮರದ ಬೆಲೆ ಕಟ್ಟಬೇಕು . ಸಂತಾನಶಾಸ್ತ್ರಕ್ಕನುಸಾರವಾಗಿ ಜಾತಿಪದ್ಧತಿ ಇರುವುದಾಗಿದ್ದರೆ ಅದು ಎಂತಹ ಉತ್ಕೃಷ್ಟ ಜನಾಂಗವನ್ನು ಹುಟ್ಟಿಸಬೇಕಾಗಿತ್ತು ? ವಾಸ್ತವಿಕವಾಗಿ ನೋಡಿದರೆ ಹಿಂದೂಗಳು ಸಿ3 ವರ್ಗಕ್ಕೆ ಸೇರಿದ ಜನರು . ಮೈಕಟ್ಟಿನಲ್ಲಿ ದುರ್ಬಲರಾದ ಮತ್ತು ದೈಹಿಕವಾಗಿ ತ್ರಾಣವಿಲ್ಲದ ಕುಬ್ದರ ವರ್ಗಕ್ಕೆ ಇವರು ಸೇರಿದ್ದಾರೆ . ನೂರಕ್ಕೆ ತೊಂಬತ್ತರಷ್ಟು ಮಂದಿ ಸೈನಿಕ ಸೇವೆಗೆ ಅನರ್ಹರಾದ ಜನರ ರಾಷ್ಟ್ರ ನಮ್ಮದು . ಹೀಗಾದರೆ ಉತ್ತಮ ಸಂತಾನ ತತ್ವ ಎಲ್ಲಿ ಬಂದಿತು ? ಸ್ವಾರ್ಥಿಗಳೂ ದುರಹಂಕಾರಿಗಳೂ ಆದ ಕೆಲವರು ಹಿಂದೂಗಳು ತಮ್ಮ ಸಾಮಾಜಿಕ ಸ್ಥಾನಬಲದಿಂದ ಈ ಜಾತಿಭೇದಗಳನ್ನು ನಿರ್ಮಿಸಿ ದುರ್ಬಲ ವರ್ಗಗಳ ಮೇಲೆ ಅವುಗಳನ್ನು ಒತ್ತಾಯದಿಂದ ಹೇರಿದರು .

-ಡಾ . ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಇದನ್ನೂ ಓದಿ

https://suddidina.com/column/bahiranga/the-first-public-speech-made-by-dalit-mother-ramabai-ambedkar/

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version