ಬಹಿರಂಗ
ಜಾತಿನಿರ್ಮೂಲನೆ: ಪ್ರತಿಕ್ರಿಯಿಸಬೇಕಾದವರು ಪ್ರತಿಕ್ರಿಯಿಸಲಿಲ್ಲ..!
- ರಘೋತ್ತಮ ಹೊ.ಬ
1936 ರಲ್ಲಿ ಲಾಹೋರ್ ನ ಜಾತಿಪಥ ನಿರ್ಮೂಲನ ಮಂಡಳಿಯು ಡಾ.ಬಿ.ಆರ್.ಅಂಬೇಡ್ಕರ್ ರನ್ನು ಜಾತಿ ನಿರ್ಮೂಲನೆ ಕುರಿತಾದ ಸಮ್ಮೇಳನವೊಂದಕ್ಕೆ ಅಧ್ಯಕ್ಷರನ್ನಾಗಿ ಆರಿಸಿ ಸುದ್ದಿ ಕಳಿಸುತ್ತದೆ. ಹಾಗೆಯೇ ತಮ್ಮ ಅಧ್ಯಕ್ಷೀಯ ಭಾಷಣವನ್ನು ಬರೆದು ಕಳುಹಿಸಿದರೆ ಮಂಡಳಿ ಮುದ್ರಿಸಿ ಪ್ರಕಟಿಸಲು ಅನುಕೂಲವಾಗುತ್ತದೆ ಎಂದು ಮಂಡಳಿ ಅಂಬೇಡ್ಕರರಿಗೆ ಹೇಳುತ್ತದೆ.
ಅದರಂತೆ ಡಾ.ಅಂಬೇಡ್ಕರರು ಜಾತಿ ನಿರ್ಮೂಲನೆ ಎಂಬ ಹೆಡ್ಡಿಂಗ್ ಇಟ್ಟು ಮಂಡಳಿಯ ಆಶಯದಂತೆ ಅಧ್ಯಕ್ಷೀಯ ಭಾಷಣ ಸಿದ್ಧಪಡಿಸಿ ಲಾಹೋರ್ ಗೆ ಕಳುಹಿಸುತ್ತಾರೆ ಅಂದಹಾಗೆ ಮಂಡಳಿ ಅಂಬೇಡ್ಕರರ ಆ ಭಾಷಣ ಒಪ್ಪುವುದಿಲ್ಲ ಸಮ್ಮೇಳನವೇ ರದ್ದುಗೊಳ್ಳುತ್ತದೆ. ಯಾಕೆ? ಏನು? ಎಂಬುದು ಅದೇ ಬೇರೆಯೇ ಕತೆ.
ತಾವು ಸಿದ್ದಪಡಿಸಿದ ಆ ಭಾಷಣವನ್ನು ಸ್ವತಃ ತಾವೇ ಮುದ್ರಿಸಿ ಡಾ.ಅಂಬೇಡ್ಕರ್ ರವರು ಪುಸ್ತಕ ರೂಪದಲ್ಲಿ “Annihilation of caste” ಟೈಟಲ್ ನಲ್ಲಿ ಪ್ರಕಟಿಸುತ್ತಾರೆ. ಇತಿಹಾಸದಲ್ಲಿ ಹೊಸ ಹಾದಿ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಅಂದಹಾಗೆ ಕಳೆದ ಒಂದು ತಿಂಗಳಿಂದ ನಾನು ವಯಕ್ತಿಕವಾಗಿ ಅಂಬೇಡ್ಕರರ ಆ ಕೃತಿಯನ್ನು ಓದಲು ಆರಂಭಿಸಿದೆ. ಇದೇ ಜುಲೈ 4 ಕ್ಕೆ ಪೂರ್ಣಗೊಳಿಸಿದೆ.
ಅಕ್ಷರಶಃ ಹೇಳುತ್ತೇನೆ ನನಗೆ ಜ್ಞಾನೋದಯವಾಯಿತು. ಜಾತಿ ನಿರ್ಮೂಲನೆ ಹೇಗೆ? ಎತ್ತ? ಎಂಬುದಕ್ಕೆ ಉತ್ತರ ಸಿಕ್ಕಿತು. ನನಗೊಬ್ಬನಿಗೆ ಅಲ್ಲ, Annihilation of caste ಅದನ್ನು ಓದಿದ ಯಾರಿಗೆ ಆಗಲಿ ಅಂತಹ ಜ್ಞಾನೋದಯ ಆಗುತ್ತದೆ ಮತ್ತು ಅದು ಬಾಬಾಸಾಹೇಬ್ ಅಂಬೇಡ್ಕರರ ಬರವಣಿಗೆಯ ಯಶಸ್ಸಾಗಿದೆ.
ಆ ಕೃತಿ ಓದಿ ದ ನಂತರ ನಿನ್ನೆ ನಾನು ಜಾತಿ ನಿರ್ಮೂಲನೆಯ ಒಂದು ಸಣ್ಣ ಪ್ರಯೋಗ ಫೇಸ್ ಬುಕ್ ನಲ್ಲಿ ನಡೆಸಿದೆ. ಫೇಸ್ ಬುಕ್ ನಲ್ಲಿ ತಮ್ಮ ಪ್ರೊಫೈಲ್ ನಲ್ಲಿ ಯಾರು ಜಾತಿ ಹೆಸರು ಇಟ್ಟುಕೊಳ್ಳುತ್ತಾರೋ ಅವರನ್ನು ಅನ್ ಫ್ರೆಂಡ್ ಮಾಡುತ್ತೇನೆ ಎಂದು ಪ್ರಕಟಿಸಿದೆ.
ದುರಂತ ಎಂದರೆ ಅದಕ್ಕೆ ಪ್ರತಿಕ್ರಿಯಿಸಿದವರು ಬಹುತೇಕ ಜಾತಿ ನಿರ್ಮೂಲನೆ ಈ ಪ್ರಶ್ನೆಗೆ ಸಂಬಂಧಪಡದ ಶೋಷಿತ ಸಮುದಾಯಗಳ ವ್ಯಕ್ತಿಗಳು ಮತ್ತು ಇತರರು! so called ಹಿಂದೂಗಳು ಇದಕ್ಕೆ ಪ್ರತಿಕ್ರಿಯಿಸಬೇಕು ಎಂದು ನಾನು ಬಯಸಿದ್ದೆ ಆದರೆ ಅವರು ಬಹುತೇಕ ಮೌನವಾಗಿದ್ದರು. ಯಾಕೆಂದರೆ ಡಾ.ಅಂಬೇಡ್ಕರ್ ರವರು ಈ ಪುಸ್ತಕ ಬರೆದದ್ದು ಹಿಂದೂಗಳಿಗೆ ಹೊರತು ಅಸ್ಪೃಶ್ಯ ವರ್ಗದವರಿಗಲ್ಲ! ಆದರೆ ನನ್ನ ಈ ಸ್ಟೇಟಸ್ ಗೆ ಉತ್ತರಿಸುತ್ತಿರುವವರು ಅಸ್ಪೃಶ್ಯ ವರ್ಗದವರು. ಇದರರ್ಥ?
ಒಟ್ಟಾರೆ ನಾನು ಯಾರು ಉತ್ತರ ನೀಡಲಿ ಎಂದು ಬಯಸಿದ್ದೇನೋ ಅವರು ಮೌನವಾಗಿದ್ದಾರೆ. ಅಂಬೇಡ್ಕರರು ಹೇಳಿರುವ ರೀತಿಯಲ್ಲೇ ಯಥಾವತ್ ಅವರು ಮೌನವಾಗಿದ್ದಾರೆ. ಇದರರ್ಥ ಜಾತಿ ಬೇರು ಇನ್ನೂ ಎಷ್ಟು ಆಳವಿದೆ, ಅದು 1936 ಇರಬಹುದು 2020 ಇರಬಹುದು ಪರಿಸ್ಥಿತಿ “ಜಾತಿ ನಿರ್ಮೂಲನೆ” ಕೃತಿಯಲ್ಲಿ 84 ವರ್ಷಗಳ ಹಿಂದೆ ಡಾ.ಅಂಬೇಡ್ಕರ್ ಹೇಗೆ ಹೇಳಿದ್ದಾರೋ ಹಾಗೆಯೇ ಇದೆ. ವ್ಯಂಗ್ಯವೆಂದರೆ ಡಾ.ಅಂಬೇಡ್ಕರರಿಂದ ಅನುಕೂಲ ಪಡೆದಿರುವ ಅಸ್ಪೃಶ್ಯ ವರ್ಗದವರು ಕೂಡ ಇದರಲ್ಲಿ ಅಂದರೆ ಅಂಬೇಡ್ಕರರ ಚಿಂತನೆ ಅರಿಯುವುದರಲ್ಲಿ ಸೋತಿದ್ದಾರಲ್ಲ!
ಜಾತಿ ನಿರ್ಮೂಲನೆಯ ಡಾ.ಅಂಬೇಡ್ಕರರ ಕನಸನ್ನು ನನಸು ಮಾಡುವ ಪ್ರಯತ್ನ ಮುಂದುವರೆಯುತ್ತಲೇ ಇರುತ್ತದೆ. ಸಣ್ಣದಿರಲಿ ದೊಡ್ಡದಿರಲಿ ಪ್ರಯತ್ನ ಪ್ರಯತ್ನವೇ. ಯಾಕೆಂದರೆ ಜಾತಿ ಅದು ನಿರ್ಮೂಲನೆಯಾಗದಿದ್ದರೆ ಸಮ ಸಮಾಜ ಕಟ್ಟುವ ಪ್ರಯತ್ನ ಸಾಧ್ಯವೇ ಇಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243