ದಿನದ ಸುದ್ದಿ

ಸಿಡಿ ಪ್ರಕರಣ | ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ‌ : ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು : ಸಿಡಿ ಪ್ರಕರಣದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ‌ ಎಂದು‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಕಾನೂನುಬದ್ಧವಾದ ಅವಳ ಹಕ್ಕನ್ನು ಚಲಾಯಿಸದಂತೆ ತಡೆಯುತ್ತಿರುವವರು ಯಾರು? ಎಂದಿದ್ದಾರೆ.

ಸಿಡಿಯಲ್ಲಿರುವ ಯುವತಿ ಅಜ್ಞಾತ ಸ್ಥಳದಿಂದ ನಿರಂತರವಾಗಿ ತನ್ನ ಹೇಳಿಕೆಗಳ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾಳೆ, ತನ್ನ ವಕೀಲನ ಮೂಲಕ ಪೊಲೀಸರಿಗೆ ದೂರು ಕಳುಹಿಸಿಕೊಡುತ್ತಿದ್ದಾಳೆ, ತಂದೆ-ತಾಯಿ ಜೊತೆ ಮಾತನಾಡುತ್ತಿದ್ದಾಳೆ. ಹೀಗಿದ್ದರೂ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ ಎಂದರೆ ಏನು ಅರ್ಥ?

ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗಿರುವ ಯುವತಿಯದ್ದೆನ್ನಲಾದ ಹೇಳಿಕೆಗಳನ್ನು ಗಮನಿಸಿದರೆ ಆಕೆಗೆ ರಾಜ್ಯ ಸರ್ಕಾರದ ಮೇಲಾಗಲಿ, ಪೊಲೀಸರ ಮೇಲಾಗಲಿ ನಂಬಿಕೆ ಇಲ್ಲ. ಪೊಲೀಸರು ತನ್ನ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಅರ್ಥದಲ್ಲಿ ಯುವತಿ ಮಾತನಾಡುತ್ತಿದ್ದಾಳೆ. ಗೃಹಸಚಿವರು ಈ ಬಗ್ಗೆ ತಕ್ಷಣ ಗಮನಹರಿಸಬೇಕು.

ರಾಜ್ಯದ ಪೊಲೀಸ್ ಇಲಾಖೆಯೂ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಈ ಸಿಡಿ ಹಗರಣ ಸಾಕ್ಷಿ. ಸಾಮಾನ್ಯ ಕುಟುಂಬದಿಂದ ಬಂದಿರುವ ಯುವತಿಯನ್ನು ಇಷ್ಟು ದಿನಗಳ ನಂತರವೂ ಪತ್ತೆ ಹಚ್ಚಲಾಗಿಲ್ಲವೆಂದರೆ ಏನು ಅರ್ಥ? ಆಕೆಯೇನು ವಿಜಯಮಲ್ಯನೋ ಇಲ್ಲವೇ ನೀರವ್ ಮೋದಿಯೋ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version