ದಿನದ ಸುದ್ದಿ
ಕೊರೋನಾ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ | ಕೇಂದ್ರ ಸಚಿವ ಪ್ರಲ್ಹಾದ ಜೋಷಿ
ಸುದ್ದಿದಿನ,ಧಾರವಾಡ : ಕೋವಿಡ್ 19 ರ ಎರಡನೇ ಅಲೆಯು ಬಹಳ ವೇಗವಾಗಿ ಹರಡುತ್ತಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ಕಿಮ್ಸ್,ಜಿಲ್ಲಾಸ್ಪತ್ರೆ ,ಎಸ್‌ಡಿಎಂ ಹಾಗೂ ಇತರ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಕೋಟಾದಡಿ ಹೆಚ್ಚು ಹಾಸಿಗೆಗಳನ್ನು ಒದಗಿಸಲು ಮುಂದಾಗಿರುವುದರಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಷಿ ಹೇಳಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಕೋವಿಡ್ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರವು ನಿನ್ನೆ ರಾಜ್ಯಕ್ಕೆ ಅಂದಾಜು 800 ಮೆಟ್ರಿಕ್ ಟನ್ ವೈದ್ಯಕೀಯ ಆಕ್ಸಿಜನ್ ಹಾಗೂ 1 ಲಕ್ಷ 22 ಸಾವಿರ ವಯಲ್ಸ್ ರೆಮೆಡಿಸಿವರ್ ಚುಚ್ಚುಮದ್ದು ಕಳಿಸಿದೆ ಏರ್‌ಲಿಫ್ಟ್ ,ವಿಶೇಷ ರೈಲಿನ ಮೂಲಕವೂ ಆಕ್ಸಿಜನ್ ಸರಬರಾಜು ಕಾರ್ಯ ನಡೆಯುತ್ತಿದೆ.ಮೊಬೈಲ್ ಆಕ್ಸಿಜನ್ ಘಟಕಗಳನ್ನು ಜರ್ಮನಿಯಿಂದ ತರಿಸಲಾಗುತ್ತಿದೆ.
ಕೇಂದ್ರ ಸರ್ಕಾರವು ಕೋವಿಡ್ ಸುರಕ್ಷಾ ಸಾಮಗ್ರಿಗಳು ಹಾಗೂ ಔಷಧಿಗಳ ಮೇಲೆ ಕಸ್ಟಮ್ ತೆರಿಗೆಯನ್ನು ಮುಂದಿನ ಆರು ತಿಂಗಳ ಅವಧಿಗೆ ಈಗಾಗಲೇ ಸಂಪೂರ್ಣ ವಿನಾಯಿತಿ ನೀಡಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಮದುವೆ,ಜಾತ್ರೆ,ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳಿಂದ ದೂರ ಇರಬೇಕು.
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ರಾಷ್ಟೀಯ ಆರೋಗ್ಯ ಅಭಿಯಾನದಡಿ 26 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಎಂ.ಸಿ.ಹೆಚ್.ಕಟ್ಟಡ ಬಹುತೇಕ ಪೂರ್ಣಗೊಂಡಿದೆ.ಇನ್ನೊಂದು ವಾರದಲ್ಲಿ ಅಲ್ಲಿ ಆಕ್ಸಿಜನ್ ಸಂಪರ್ಕ ಹೊಂದಿರುವ ಒಂದು ನೂರು ಹಾಸಿಗೆಗಳನ್ನು ಸಿದ್ಧಪಡಿಸಿ,ಕೋವಿಡ್ ಚಿಕಿತ್ಸೆಗೆ ನೀಡಲಾಗುತ್ತಿದೆ ಎಂದು ಸಚಿವ ಜೋಷಿ ಮನವಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243