ದಿನದ ಸುದ್ದಿ
ಶಿಕ್ಷಣ ನೀಡುವ ಜವಾಬ್ದಾರಿಯನ್ನು ಕೈ ಬಿಟ್ಟುಕೊಟ್ಟ ಸರಕಾರ ; ಇದು ಶಿಕ್ಷಣ ವಿರೋಧಿ ಬಜೆಟ್ : ಎಸ್ ಎಫ್ ಐ ಖಂಡನೆ
ಸುದ್ದಿದಿನ ಡೆಸ್ಕ್ : ದೇಶದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಉಚಿತ ಮತ್ತು ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕಾಗಿರುವುದು ಯಾವುದೇ ನಾಗರೀಕ ಸರ್ಕಾರಗಳ ಜವಾಬ್ದಾರಿ. ಆದರೆ ಇಂತಹ ಜವಾಬ್ದಾರಿಯಿಂದ ನುಣುಚಿಕೊಂಡಿರುವ ಸರ್ಕಾರಗಳು ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸಿಕೊಡುವ ಮೂಲಕ ವ್ಯಾಪಾರೀಕರಣ ಮಾಡಿದ್ದಾರೆ.
ಇದರಿಂದಾಗಿ ಸಾಕಷ್ಟು ಮಂದಿ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ದೇಶಪ್ರೇಮದ ಬಗ್ಗೆ ದೊಡ್ಡದಾಗಿ ಮಾತನಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಮೂಲಕ ದೇಶದ ಕೋಟ್ಯಂತರ ಮಂದಿ ಬಡವರು ಹಿಂದುಳಿದವರಿಂದ ಶಿಕ್ಷಣವನ್ನು ಕಸಿದುಕೊಳ್ಳಲು ಹೊರಟಿದೆ. ಇದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಕರ್ನಾಟಕ ರಾಜ್ಯ ಸಮಿತಿಯು ಖಂಡಿಸುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ರವರು ಮಂಡಿಸಿರುವ ಬಜೆಟ್ ನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಪ್ರಸ್ಥಾಪಿಸಿರುವುದು ಮೆಚ್ಚುಗೆಯ ವಿಷಯ. ಆದರೆ ವಿದೇಶಿ ನೇರ ಬಂಡವಾಳವನ್ನು ಶಿಕ್ಷಣ ಕ್ಷೇತ್ರವನ್ನು ಕಾರ್ಪೊರೇಟ್ ಗಳಿಗೆ ತೆರೆದಿಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಹೊಸ ರಾಷ್ಟ್ರೀಯ ಶಿಕ್ಷಣ ಕಾಯ್ದೆಯಲ್ಲಿ ಅನೇಕ ದೋಷಗಳಿವೆ ಎಂದು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಅಭಿಪ್ರಾಯ ನೀಡಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದಿರುವುದು ಸಹ ಸರಿಯಿಲ್ಲ. ಎಂಜನೀಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ ಶಿಪ್ ಹೆಸರಿನಲ್ಲಿ ಪುಕ್ಕಟ್ಟೆ ದುಡಿಸಿಕೊಳ್ಳುವ ಅಪಯಾಕಾರಿ ಹೆಜ್ಜೆಯನ್ನು ಈ ಬಜೆಟ್ ನಲ್ಲಿ ಸೂಚಿಸಲಾಗಿದೆ.
ಶಿಕ್ಷಣ ವಂಚಿತರಿಗೆ ಶಿಕ್ಷಣಕ್ಕೆ ಕರೆ ತರುವ ಪ್ರಮುಖ ಯೋಜನೆ ರೂಪಿಸುವ ಬದಲಿಗೆ ಅವರಿಗೆ ಆನ್ ಲೈನ್ ನಲ್ಲಿ ಪದವಿ ಶಿಕ್ಷಣಕ್ಕೆ ಪ್ರಸ್ಥಾಪ ಮಾಡಲಾಗಿದೆ. ಈ ಮೂಲಕ ಶಿಕ್ಷಣದ ಮಹತ್ವವನ್ನು ಕೊಲ್ಲಲು ಅವರು ತೀರ್ಮಾನಿಸಿದ್ದಾರೆ. ಸರಕಾರಿ ಶಾಲಾ- ಕಾಲೇಜ್- ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಈ ಬಜೆಟ್ ನಲ್ಲಿ ಗಮನ ನೀಡಿಲ್ಲ.
ದೇಶದಲ್ಲಿ ಯುವಜನರು ಎದುರಿಸುತ್ತಿರುವ ನಿರುದ್ಯೋಗ ನಿವಾರಣೆಗೆ ಸ್ಪಷ್ಟ ಮಾರ್ಗಸೂಚಿಯನ್ನು ಬಜೆಟ್ ಸೂಚಿಸದೆ ಯುವಜನರಿಗೆ ವಂಚನೆ ಮಾಡಲಾಗಿದೆ. ಇದರಿಂದಾಗಿ ಇನ್ನಷ್ಟು ನಿರುದ್ಯೋಗ ಹೆಚ್ಚಳವಾಗಲಿದೆ. ಒಟ್ಟಾರೆ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಶಿಕ್ಷಣ ಕ್ಷೇತ್ರವನ್ನು ನಾಶಪಡಿಸುವ ಬಜೆಟ್ ಇದಾಗಿದೆ ಎಂದು ಎಸ್ ಎಫ್ ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್, ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243