ದಿನದ ಸುದ್ದಿ
ವಂಶವಾಹಿ ರೋಗಗಳ ತಡೆಯಲು ಗರ್ಭಿಣಿಯರಿಗೆ ಜೆನೆಟಿಕ್ ಸ್ಕ್ರೀನಿಂಗ್ ಕಡ್ಡಾಯ; ಹೊಸ ಯೋಜನೆ ಜಾರಿಗೆ ಕೇಂದ್ರ ಚಿಂತನೆ
ಸುದ್ದಿದಿನ ಡೆಸ್ಕ್: ವಂಶವಾಹಿ ರೋಗಗಳ ನಿಯಂತ್ರಣ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ಯೋಜನಾ ಕರಡು ಪ್ರತಿ ರಚಿಸಿದ್ದು, ಗರ್ಭಿಣಿಯರು ಜೆನೆಟಿಕ್ ಪರೀಕ್ಷೆಗೊಳಗಾಗುವುದು ಕಡ್ಡಾಯಗೊಳಿಸುವ ಚಿಂತನೆ ನಡೆಸಿದ್ದು, ಈ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು 30 ಕಾಲಾವಕಾಶ ನೀಡಿದೆ. ಥಲಸ್ಸೆಮಿಯಾ ಮತ್ತು ಸಿಕ್ಕಲ್ ಸೆಲ್ ಅನಿಮಿಯಾ ರೋಗಗಳ ಹತೋಟಿ ಮಾಡಲು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ನೀಡಲು ಮುಂದಾಗಿದೆ.
ಈ ಯೋಜನೆಯು ವಂಶವಾಹಿ ಕಾಯಿಲೆಗಳಿಗೆ ತುತ್ತಾದ ಬಡ ಕುಟುಂಬಗಳಿಗೆ ರೋಗಗಳಿಗೆ ಔಷಧ ಸೇರಿ ಉಚಿತ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದೆ. ಮೇಕ್ ಇನ್ ಇಂಡಿಯಾ ಸಹಯೋಗದಲ್ಲಿ ಕೈಗೊಳ್ಳುತ್ತಿರುವ ಯೋಜನೆಗೆ ಪೂರಕವಾದ ಸಾಧನ ಸಲಕರಣೆಗಳನ್ನು ಉತ್ಪಾದಿಸಲು ಉತ್ತೇಜನ ನೀಡಲಾಗುತ್ತಿದೆ. ಚಿಕಿತ್ಸಾ ವೆಚ್ಚದ ಮೇಲೆ ವಿಧಿಸುವ ಜಿಎಸ್‌ಟಿ, ಕಸ್ಟಮ್ ಡ್ಯೂಟಿಗೆ ವಿನಾಯಿತಿ ನೀಡಿದೆ. ದೇಶಾದ್ಯಂತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನೂ ಈ ಪರೀಕ್ಷೆಗೊಳಪಡಿಸಲು ಚಿಂತನೆ ನಡೆಸಿದೆ.
ಸರ್ಕಾರ ಈಗ ಸಿದ್ಧಪಡಿಸಿರುವ ಕರಡು ಪ್ರತಿ ಪ್ರಕಾರ ಭಾರತದಲ್ಲಿ 3.6ರಿಂದ 3.9 ಕೋಟಿ ಥಲಸ್ಸೆಮಿಯಾ ವಾಹಕರಿದ್ದಾರೆ. ಪ್ರತಿ ವರ್ಷವೂ 10,000ರಿಂದ 15,000 ಮಕ್ಕಳು ಥಲೆಸ್ಸೆಮಿಯಾಕ್ಕೆ ತುತ್ತಾಗುತ್ತಿದ್ದಾರೆ. 25,00,000 ಮಂದಿ ಸಿಕಲ್ ಸೆಲ್ ವಾಹಕರಿದ್ದು, 1,25,000 ರೋಗಿಗಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಚಿಕಿತ್ಸಾ ಕೇಂದ್ರ ಆರಂಭಿಸಲು ಉದ್ದೇಶಿಸಿದ್ದು, ಇವುಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸಿ ಥಲೆಸ್ಸೆಮಿಯಾ, ಸಿಕಲ್ ಸೆಲ್ ಅನೆಮಿಯಾ ರೋಗಿಗಳಿಗೆ ಸಮಗ್ರ ಚಿಕಿತ್ಸೆ ನೀಡುವ ಚಿಂತನೆ ಹೊಂದಿದೆ. ಬೋನ್ ಮ್ಯಾರೋ ಟ್ರಾನ್ಸಪ್ಲಾಂಟ್ ಘಟಕ ಮತ್ತು ಪ್ರಸವಪೂರ್ವ ರೋಗನಿರ್ಣಯ ಕೇಂದ್ರ ಆರಂಭಿಸಲಿದೆ. ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿ, ಶಿಕ್ಷಣ ನೀಡಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401