ರಾಜಕೀಯ
ಮಾತಲ್ಲೇ ಗುಂಡಿಟ್ಟ ರಕ್ಷಣಾ ಸಚಿವೆಗೆ ಟ್ವಿಟ್ಟಿಗರ ಬಾಣ!
ಸುದ್ದಿದಿನ ಡೆಸ್ಕ್: ರಕ್ಷಣಾ ಸಚಿವೆ ಎಂದ ಮಾತ್ರಕ್ಕೆ ಮಾತಲ್ಲಿ ಮದ್ದು ಗುಂಡು ತುಂಬಿರಬೇಕೇ? ಸಂವಿಧಾನಾತ್ಮಕ ಹುದ್ದೆಯಲ್ಲಿರುವ ನಿರ್ಮಲಾ ಸೀತಾರಾಮನ್ ಅವರು ಡಿಪ್ಲಮಾಟಿಕ್ ಆಗಿ ನಡೆದುಕೊಳ್ಳಬೇಕು.. ಮಹಿಳೆಯೊಬ್ಬರಿಗೆ ರಕ್ಷಣಾ ಖಾತೆ ಸಿಕ್ಕಿರುವ ಬಗ್ಗೆ ಇದ್ದ ಹೆಮ್ಮೆ ಒಂದೇ ಘಟನೆಯಲ್ಲಿ ಭ್ರಮನಿರಸನಗೊಳಿಸಿತು…
ಇವು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಅಭಿಪ್ರಾಯ.
ಕೊಡಗು ನೆರೆ ಸಂತ್ರಸ್ತರ ಪರಿಶೀಲನೆಗೆಂದು ತೆರಳಿದ್ದ ಸೀತಾರಾಮನ್ ಅವರು ಉಸ್ತುವಾರಿ ಸಚಿವರು ನೀಡಿದ್ದ ವೇಳಾಪಟ್ಟಿಯಂತೆ ಕಾರ್ಯಕ್ರಮ ನಡೆಯದ ಬಗ್ಗೆ ಸಿಡಿಮಿಡಿಗೊಂಡರು. ಸಚಿವ ಸಾರಾಮಹೇಶ್ ಹಾಗೂ ಕೊಡಗು ಜಿಲ್ಲಾಧಿಕಾರಿ ಪರಿಸ್ಥಿತಿಯನ್ನು ವಿವರಿಸಿದಾಗಲೂ ಕಟುವಾಗಿ ಮಾತನಾಡಿದರು. ನಾನ್ಯಾಕೆ ಉಸ್ತುವಾರಿ ಸಚಿವರು ಹೇಳಿದಂತೆ ನಡೆಯಬೇಕು ಎಂದು ಕೊಂಕು ತೆಗೆದರು. ಸೇನಾಧಿಕಾರಿಗಳು ಕಾಯುವುದು ಸರಿಯಲ್ಲ ಅವರೊಟ್ಟಿಗೆ ಸಭೆ ನಡೆಸಿ ಎಂದು ಕೋರಿದಾಗಲೂ ಕೇಳಲಿಲ್ಲ. ಇಲ್ಲಿ ನಾನು ನೀವು ಹೇಳಿದಂತೆ ಕೇಳಬೇಕಾ ಎಂದು ದರ್ಪ ತೋರಿದರು. ಇದನ್ನೆಲ್ಲ ಪ್ರಸಾರ ಮಾಡಿದ ವಾಹಿನಿಗಳನ್ನು ನೋಡಿ ಕನ್ನಡಿಗರು ಸಚಿವೆ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಸೀತಾರಾಮನ್ ಅವರಿಗೆ ಇಲ್ಲಿ ಇಗೋ ಹೆಚ್ಚಾಗಿ ಹೋಯ್ತಾ? ಉಸ್ತುವಾರಿ ಸಚಿವರೇ ಕಾರ್ಯಕ್ರಮದ ಪಟ್ಟಿ ತಯಾರಿಸಿ ಕೊಡಬೇಕು ಅದರಂತೆ ಸಚಿವರು, ಶಾಸಕರು ನಡೆಯಬೇಕೆಂಬ ಸಂವಿಧಾನಾತ್ಮಕ ನಡೆ ಇದೆ ಅದನ್ನು ಯಾಕೆ ಅವರು ಅರ್ಥ ಮಾಡಿಕೊಂಡಿಲ್ಲ ಎಂದು ಕೆಲವರು ತಿವಿದಿದ್ದಾರೆ.