ದಿನದ ಸುದ್ದಿ
ಮಂಡ್ಯ ಜಿಲ್ಲೆಗೆ ಕೇಂದ್ರ ತಂಡ ಭೇಟಿ ; ಮನ್ರೇಗಾ ಯೋಜನೆಯ ಕಾಮಗಾರಿ ಪರಿಶೀಲನೆ
ಸುದ್ದಿದಿನ ಡೆಸ್ಕ್ : ಕೇಂದ್ರ ಸಚಿವಾಲಯದ ಆರ್ಥಿಕ ಇಲಾಖೆಯ ಉಪಕಾರ್ಯದರ್ಶಿ ಸೂರ್ಜಿತ್ ಕಾರ್ತಿಕೇಯನ್ ನೇತೃತ್ವದ ಕೇಂದ್ರ ತಂಡವು ಇಂದು ಮಂಡ್ಯ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮನ್ರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ನಿರ್ಮಾಣಗೊಂಡಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮಂಡ್ಯ ತಾಲ್ಲೂಕಿನ ತೂಬಿನಕೆರೆ, ಗೋಪಾಲಪುರ, ಬೇಬಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ತಂಡವು ಜಲಶಕ್ತಿ ಅಭಿಯಾನದಡಿ ಮಳೆ ನೀರು ಕೊಯ್ಲಿ ಕಾಮಗಾರಿ, ಅಮೃತ ಸರೋವರ ಅಭಿಯಾನಕ್ಕೆ ಆಯ್ಕೆಯಾಗಿರುವ ಕೆರೆ, ಕಟ್ಟೆ ಕಾಮಗಾರಿ, ಮನ್ರೇಗಾ ಯೋಜನೆಯ ಒಗ್ಗೂಡಿಸುವಿಕೆಯಡಿ ಕೃಷಿ ಇಲಾಖೆ ವತಿಯಿಂದ ನಿರ್ಮಾಣಗೊಂಡಿರುವ ಕಾರೆಕಟ್ಟೆ ಚೆಕ್‌ಡ್ಯಾಂ ಹಾಗೂ ಬಿದರಕಟ್ಟೆ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿಯನ್ನು ಪಡೆದುಕೊಂಡರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಹಕಾರ್ಯದರ್ಶಿ ಸುಬ್ರಮಣ್ಯ ಶರ್ಮ, ದೇಶಕ್ಕೆ ಸ್ವಾತ್ರಂತ್ರ್ಯ ಬಂದು 75 ವರ್ಷಗಳಾಗಿದ್ದು, ಅಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಲಶಕ್ತಿ ಅಭಿಯಾನದ ಮೂಲಕ ಪ್ರತಿ ಜಿಲ್ಲೆಯಲ್ಲಿ 75 ಕೆರೆ ನಿರ್ಮಾಣ ಮಾಡಲು ಪ್ರಧಾನಮಂತ್ರಿಗಳ ಆದೇಶ ಮೇರೆಗೆ ಯೋಜನೆ ರೂಪಿಸಲಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243