ದಿನದ ಸುದ್ದಿ
ಜುಮ್ಮೆನಿಸುವ ಚಮ್ಮಟೀರ ಕೋಲ
ಸುದ್ದಿದಿನ ಡೆಸ್ಕ್: ಹಳ್ಳಿಗಟ್ಟು ಚಮ್ಮಟೀರ ಕುಟುಂಬಸ್ಥರ ಬಲ್ಯ ಮನೆಯಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಪಾಷಣ ಮೂರ್ತಿ ಕೋಲ ಮೊನ್ನೆ ವಿಜೃಂಭಣೆಯಿಂದ ನಡೆಯಿತು. ನೂರಾರು ವರ್ಷಗಳ ಇತಿಹಾಸ ಇರುವ ಕೋಲದಲ್ಲಿ ಚಮ್ಮಟೀರ ಕುಟುಂಬಸ್ಥರು, ತವರುಮನೆ ಹೆಣ್ಣುಮಕ್ಕಳು, ನೆಂಟರು, ಊರಿನವರು ಕೂಡಿಯಾಡಿದ್ದರು. ತುಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಈ ಕೋಲವನ್ನು ಹಳ್ಳಿಗಟ್ಟು ಮೂಲದ ಚಮ್ಮಟೀರ ಕುಟುಂಬಸ್ಥರು ಒಟ್ಟು ಸೇರಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿಂದಿನ ಕಾಲದಲ್ಲಿ ಆಚರಿಸಿಕೊಂಡು ಬಂದ ಪದ್ದತಿಯನ್ನು ಇದೀಗಲೂ ಪಾಲಿಸಿಕೊಂಡು ಬರುತ್ತಿದ್ದು, ಕೋಲದಲ್ಲಿ ಧರ್ಮ ದೇವತೆ, ಪಂಜೂರ್ಲೀ, ಪಾಷಣ ಮೂರ್ತಿ, ಗುಳಿಗ ಸೇರಿದಂತೆ ವಿವಿಧ ದೇವತೆಗಳು ಆವಾಹನೆಗೊಂಡು ವಿಶ್ಮಯ ಮೂಡಿಸಿತು, ತುಳು ಮಾತನಾಡುತ್ತಾ ಬೆಂಕಿ ಕೊಂಡದ ಮೇಲೆ ಬೀಳುವ ದೃಶ್ಯ ಭಯಾನಕ ಎನಿಸಿದರು ಭಕ್ತರಲ್ಲಿ ಭಕ್ತಿ ಹೆಚ್ಚಿಸುವಂತೆ ಮಾಡಿತು. ಪಾಷಣ ಮೂರ್ತಿ ದೇವರಿಗೆ ಅಕ್ಕಿಯನ್ನು ಕೆಂಪು ಬಟ್ಟೆಯಲ್ಲಿ ತುಂಬಿಸಿ ಜೋಳಿಗೆ ಮಾಡಿ ಕೊಡಲಾಯಿತು. ಇದಕ್ಕೆ ಬೆಂಕಿ ಕೊಟ್ಟರು ಬಟ್ಟೆಗೆ ಬೆಂಕಿ ತಾಕಲಿಲ್ಲ, ಯಾವುದೇ ಮಾಯ ಜಾದು ಮೋಡಿ ಇಲ್ಲದೆ ಕಣ್ಣಿನ ಮುಂದೆ ನಡೆದ ಇಂತ್ತಹ ಹತ್ತಾರು ದೃಶ್ಯ ಭಕ್ತರಲ್ಲಿ ನಂಬಿಕೆ ಇನ್ನಷ್ಟೂ ಬರುವಂತೆ ಮಾಡಿತು. ರಾತ್ರಿ ಪೂರ್ತಿ ನಡೆದ ವಿವಿಧ ದೈವಗಳ ಅವಾಹನೆ ಹಾಗೂ ಭಕ್ತರ ಕಷ್ಟಕ್ಕೆ ವಿವಿಧ ಪರಿಹಾರವನ್ನು ಸೂಚಿಸಿತು. ಕೋಲದ ಕೊನೆಯಲ್ಲಿ ಗುಳಿಗ ಅವಾಹನೆಯ ವ್ಯಕ್ತಿ ಮರದ ಮೇಲಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕೋಲಕ್ಕೆ ತೆರೆ ಎಳೆಯಲಾಯಿತು.