ದಿನದ ಸುದ್ದಿ
ಚಂದ್ರಶೇಖರ್ ಆಜಾದ್ ಗೆಲುವು ಮತ್ತು ದಲಿತ ರಾಜಕಾರಣ 3.0..?
- ವಿಕಾಸ್ ಆರ್ ಮೌರ್ಯ
ಉತ್ತರಪ್ರದೇಶದ ನಾಗಿನ ಲೋಕಸಭಾ ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರದಿಂದ ಚಂದ್ರಶೇಖರ್ ಆಜಾದ್ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಲಿತ ರಾಜಕಾರಣದ ಭವಿಷ್ಯಕ್ಕೆ ಬೇರೆಯದ್ದೇ ಆದ ಮುನ್ನುಡಿ ಬರೆದಿದ್ದಾರೆ.
ನಾಗಿನ ಮೀಸಲು ಕ್ಷೇತ್ರವು ಈ ಹಿಂದೆ ಬಾಬು ಜಗಜೀವನ್ ರಾಮ್ ಜಿ ಅವರ ಮಗಳು ಮೀರಾಕುಮಾರಿ ಹಾಗೂ BSP ಯ ಮಾಯಾವತಿಯವರನ್ನೂ ಗೆಲ್ಲಿಸಿತ್ತು. ಈಗ ಆಜಾದ್ ಆ ಸಾಲಿಗೆ ಸೇರಿಕೊಂಡಿದ್ದಾರೆ. ಈ ಕ್ಷೇತ್ರದ ವಿಶೇಷತೆ ಎಂದರೆ ಶೇ.60 ರಷ್ಟು ದಲಿತರು ಹಾಗೂ ಮುಸ್ಲಿಂ ಮತದಾರರಿರುವುದು. ಆಜಾದ್ ಈ ಬಾರಿ ಈ ಎರಡೂ ಸಮುದಾಯದ ನೆಚ್ಚಿನ ನಾಯಕರಾಗಿದ್ದರು.
ಮತ್ತೊಂದು ಗಮನಾರ್ಹ ವಿಚಾರವೆಂದರೆ ಆಜಾದ್ ಅವರನ್ನು INDIA ಮೈತ್ರಿಕೂಟವೂ ಸಹ ಒಳಗೊಂಡಿರಲಿಲ್ಲ. ಆಜಾದ್ ಎದುರಿಗೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸಿ ಒಂದು ಲಕ್ಷಕ್ಕೂ ಅಧಿಕ ಮತ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಬಿಎಸ್ಪಿಯೂ ಸಹ ಸ್ಪರ್ಧಿಸಿ 3000 ಮತ ಗಳಿಸಿದೆ.
ಇಲ್ಲಿ ಆಜಾದ್ ಅವರು ಪೂನಾ ಒಪ್ಪಂದದ ಮಿತಿಯನ್ನು ದಾಟುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಹಿಂದೂ ಮೇಲ್ಜಾತಿಗಳು ಯಾವಾಗಲೂ ತಮ್ಮ ಆಜ್ಞೆಗೆ ತಲೆಯಾಡಿಸುವ ದಲಿತ ನಾಯಕರನ್ನೇ ಆರಿಸುವ ಪರಿಪಾಠವನ್ನು ಬೆಳೆಸಿಕೊಂಡಿರುವಾಗ ಆಜಾದ್ ಗೆಲುವು ದಲಿತ ರಾಜಕಾರಣದ ಬೇರೆಯದೇ ದಾರಿಯನ್ನು ತೆರೆದಿಟ್ಟಿದೆ. ಇದು ಆರಂಭಿಕ ಕಾನ್ಶಿರಾಮ್ ಅವರ ಬಹುಜನ ಹಿತಾಯ ಬಹುಜನ ಸುಖಾಯ BSP ರಾಜಕಾರಣವನ್ನು ನೆನಪಿಗೆ ತರುತ್ತದೆ. ಆದರೂ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆಜಾದ್ ದಲಿತ ರಾಜಕಾರಣ ಭರವಸೆ ಮೂಡಿಸುತ್ತಿದೆ.
ಕೇವಲ ಒಂದು ಸ್ಥಾನದಿಂದ ದೊಡ್ಡ ಕನಸು ಕಾಣಲು ಸಾಧ್ಯವಿಲ್ಲವಾದರೂ ದಲಿತ ರಾಜಕಾರಣವೇ ಇಲ್ಲದ ಸಂದರ್ಭದಲ್ಲಿ ಹೊಸ ಬೆಳಕು ಮೂಡಿಸಿದೆ. ಇತರೆ ರಾಜ್ಯಗಳಿಗೂ ಈ ದಲಿತ-ಮುಸ್ಲಿಂ ಮೈತ್ರಿ ವಿಸ್ತರಿಸಬೇಕಿದೆ. ಈ ಮೈತ್ರಿಗೆ ಅತಿ ಹಿಂದುಳಿದ ಜಾತಿಗಳು ಕೈಜೋಡಿಸಿದರೆ ಅದು ಮತ್ತೊಂದು ಲೆವೆಲ್ ತಲುಪುವುದು ಖಂಡಿತ. ದಲಿತ ರಾಜಕಾರಣ ಮತ್ತೊಂದು ಸದಾವಕಾಶಕ್ಕಾಗಿ ಕನಸು ಕಾಣಲು ಇದು ಪಕ್ವವಾದ ಕಾಲ ಎನಿಸುತ್ತಿದೆ.
ಅಂದಹಾಗೆ ಈ ಬಾರಿ INDIA ಮೈತ್ರಿಕೂಟದಂತೆ ಆಜಾದ್ ಸಹ ಸಂವಿಧಾನ ಉಳಿಸುವ ಘೋಷಣೆಯೊಂದಿಗೆ ಮತ ಯಾಚಿಸಿದ್ದರು. ಜೊತೆಗೆ 2024 ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಎಸ್ಸಿ/ಎಸ್ಟಿ ಮೀಸಲು ಕ್ಷೇತ್ರಗಳು ಇಂಡಿಯಾ ಮೈತ್ರಿಕೂಟಕ್ಕೆ ದಕ್ಕಿದೆ.
(ಬಾಬಾಸಾಹೇಬ್ ಅಂಬೇಡ್ಕರ್ ಸ್ಥಾಪಿತ ILP,SCF, RPI – ದಲಿತ ರಾಜಕಾರಣ 1.0
BSP – ದ.ರಾ 2.0
ಆಜಾದ್ ಮಾದರಿ – 3.0 ಆಗಬಹುದೆ?) ಬರಹ -ಪೇಸ್ಬುಕ್ ಕೃಪೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243