ದಿನದ ಸುದ್ದಿ

ಚಿಂತಕ ಚಂಪಾ ಇನ್ನಿಲ್ಲ

Published

on

ಸುದ್ದಿದಿನ,ಬೆಂಗಳೂರು: ಕವಿ, ನಾಟಕಕಾರ, ಕನ್ನಡ ಪರ ಹೋರಾಟಗಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆಗಿದ್ದ ಚಂಪಾ ಎಂದೇ ಪ್ರಸಿದ್ದರಾಗಿದ್ದ ಚಂದ್ರಶೇಖರ ಪಾಟೀಲ (83 ) ಅವರು ಇಂದು ನಿಧನರಾದರು.

ವಹೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರ ಪಾಟೀಲ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಚಂಪಾ ಹೆಸರಾಂತ ಸಮಾಜವಾದಿ ಲೇಖಕ, ಚಿಂತಕ, ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸಂಪಾದಕ ಪ್ರೊ.ಚಂದ್ರಶೇಖರ ಪಾಟೀಲ ಅವರ ಅಗಲಿಕೆಗೆ ನಾಡಿನ ಗಣ್ಯರು ಕಂಬನಿ‌ ಮಿಡಿದಿದ್ದಾರೆ.

ಚಂಪಾ ಕಿರು ಪರಿಚಯ

ಚಂದ್ರಶೇಖರ ಪಾಟೀಲರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1939ರ ಜೂನ್‌ 18ರಂದು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ. ಪಾಟೀಲರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು.

ಇಂಗ್ಲಿಷ್ ಎಂ.ಎ. ಪದವಿ ಗಳಿಸಿದ್ದರಲ್ಲದೆ ಬ್ರಿಟಿಷ್‌ ಕೌನ್ಸಿಲ್‌ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡಿನ ಲೀಡ್ಸ್‌ ವಿಶ್ವವಿದ್ಯಾಲಯದಿಂದ ಭಾಷಾ ಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್‌ ಸಂಸ್ಥೆಯಿಂದ ಇಂಗ್ಲಿಷ್‌ ಅಧ್ಯಯನದ ಡಿಪ್ಲೊಮಾ ಪಡೆದರು.

ಚಂದ್ರಶೇಖರ ಪಾಟೀಲರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸಿ ಪ್ರಾಧ್ಯಾಪಕರಾಗಿದ್ದರು.

ಹೊಂಗನಸ ಹಡಗು, ನಾಳಿಗಿದೋ ಸ್ವಾಗತ, ಚರಿಪನಾದವೊ ಹಾಡು ಹಕ್ಕಿಯೋ ಮುಂತಾದ ಕವನಗಳು; ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮುಂತಾದ ನಾಟಕಗಳಿಂದ ಚಂಪಾ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.

ಕನ್ನಡ ಹೋರಾಟ

ಚಂದ್ರಶೇಖರ ಪಾಟೀಲರು ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಧಾರವಾಡದಲ್ಲಿದ್ದಾಗಿನಿಂದಲೂ ಕನ್ನಡ ಪರ ಕಾಳಜಿ ವಹಿಸಿ, ಕನ್ನಡ ಪರ ಹೋರಾಟವನ್ನು ನಡೆಸುತ್ತಾ ಬಂದವರು. ಹಲವಾರು ಸಂಘಟನೆಗಳಲ್ಲಿ ಪ್ರಮುಖ ಪಾತ್ರವಹಿಸಿದವರು.

ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧಾರವಾಡ ನಾಟಕ ಕೂಟದ ಕಾರ್ಯದರ್ಶಿಯಾಗಿ, ಮ್ಯಾಳ ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ನಿಯೋಜಕರಾಗಿ-ಹೀಗೆ ಹಲವು ಹತ್ತು ಸಂಘಟನೆಗಳಲ್ಲೂ, ಗೋಕಾಕ ಚಳವಳಿ ಮುಂತಾದ ಅನೇಕ ಜನಪರ ಚಳವಳಿಗಳಲ್ಲೂ ತಮನ್ನು ತೊಡಗಿಸಿಕೊಂಡವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 26ದಿನ 25 ರಾತ್ರಿ ಜೈಲುವಾಸವನ್ನನುಭವಿಸಿದರು.

ಸಿದ್ದರಾಮಯ್ಯ ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version