ದಿನದ ಸುದ್ದಿ

ಚಂದ್ರಯಾನ-3 | ಇಸ್ರೋದಲ್ಲಿ ದೇಶದ ಸಾವಿರ ವಿಜ್ಞಾನಿಗಳ ಪೈಕಿ ರಾಜ್ಯದ 500 ಮಂದಿ ವಿಜ್ಞಾನಿಗಳ ಶ್ರಮ ; ರಾಜ್ಯ ಸರ್ಕಾರದಿಂದ ಸನ್ಮಾನ

Published

on

ಸುದ್ದಿದಿನ, ಬೆಂಗಳೂರು : ಚಂದ್ರಯಾನ-3 ಯಶಸ್ಸಿಗೆ ಶ್ರಮಿಸಿದ ಇಸ್ರೋ ವಿಜ್ಞಾನಿಗಳನ್ನು ಕರ್ನಾಟಕ ಸರ್ಕಾರ ಗೌರವಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ರೋ ಇಸ್ಟ್ರ್ಯಾಕ್ ಕೇಂದ್ರಕ್ಕೆ ಅವರು ಭೇಟಿ ನೀಡಿ, ಯೋಜನೆಯ ಯಶಸ್ಸಿಗೆ ಶ್ರಮಿಸಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ವಿಜ್ಞಾನಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿ ಈ ವಿಷಯ ತಿಳಿಸಿದರು.

ಚಂದ್ರಯಾನ-3ರ ಕಾರ್ಯಾಚರಣೆ ಬಗ್ಗೆ ವಿಜ್ಞಾನಿಗಳಿಂದ ಮುಖ್ಯಮಂತ್ರಿ ಮಾಹಿತಿ ಪಡೆದುಕೊಂಡರು. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಭಾರತದ ಹಲವು ವರ್ಷಗಳ ಕನಸು ನನಸಾಗಿದೆ. ದೇಶದ ಸುಮಾರು ಒಂದು ಸಾವಿರ ವಿಜ್ಞಾನಿಗಳು ಇದರಲ್ಲಿ ತೊಡಗಿಸಿಕೊಂಡಿದ್ದು, ಈ ಪೈಕಿ ರಾಜ್ಯದ 500 ಮಂದಿ ಸೇರಿದ್ದಾರೆ ಎಂದು ತಿಳಿಸಿದರು.

ಚಂದ್ರಯಾನ – 3ರ ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಸಂಚಾರ ಆರಂಭಿಸಿದೆ. ಲ್ಯಾಂಡರ್‌ನಿಂದ ಹೊರಗಿಳಿದು ರೋವರ್ ಚಂದ್ರನ ಮೇಲೆ ಸಂಚರಿಸಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದು ಇಸ್ರೋ ಹೇಳಿದೆ.

ಹೀಗೆ ರೋವರ್ ಚಂದ್ರನ ಮೇಲೆ ಉರುಳುತ್ತಾ ಭಾರತದ ತ್ರಿವರ್ಣ ಧ್ವಜ ಮತ್ತು ಇಸ್ರೋದ ಲೋಗೋವನ್ನು ಚಂದ್ರನ ಮೇಲೆ ಅಚ್ಚಿಳಿಸಿದ್ದು, ಭಾರತ ದಕ್ಷಿಣ ಧ್ರುವದಲ್ಲಿ ನೆಲೆ ನಿಂತ ಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ಸಾರಿದೆ ಎಂದು ಇಸ್ರೋ ಹೇಳಿದೆ.

ಚಂದ್ರಯಾನದ ಯಶಸ್ಸಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಭಾರತವನ್ನು ಅಭಿನಂದಿಸಿದ್ದಾರೆ. ಚಂದ್ರಯಾನ- 3 ನೌಕೆಯನ್ನು ಸುರಕ್ಷಿತವಾಗಿ ಇಳಿಸಿದ ಭಾರತದ ಸಾಧನೆಗೆ ಯುಎಇ ಅಧ್ಯಕ್ಷ ಶೇಖ್ ಮೊಹಮದ್ ಬಿನ್ ಝೈಯದ್ ಅಭಿನಂದನೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version