ದಿನದ ಸುದ್ದಿ
ಚನ್ನಗಿರಿ | ಕೆ ಹೊಸಳ್ಳಿ ಗ್ರಾಮದ ಶಾಲೆ ಎದುರೇ ಕೆರೆ ; ಸಾವಿನ ಸನಿಹ ಮಕ್ಕಳ ಕಲಿಕೆ : ಕಾಂಪೌಂಡ್ ನಿರ್ಮಿಸಲು ಗ್ರಾಮಸ್ಥರ ಮನವಿಗೆ ಕಿವಿಗೊಡದ ಅಧಿಕಾರಿಗಳು
ಸುದ್ದಿದಿನ,ಚನ್ನಗಿರಿ:ತಾಲೂಕಿನ ಕೆ ಹೊಸಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಡೆಗೋಡೆ (ಕಾಂಪೌಂಡ್) ಕಾಣದೇ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪ್ರತಿ ದಿನವೂ ಅಪಾಯದ ನಡುವೆಯೇ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಆಟ-ಪಾಠ ಕಾಣುವಂತಾಗಿದೆ ಎಂಬ ಆರೋಪದ ಜೊತೆಗೆ ಕಾಳಜಿಯ ಒತ್ತಾಯ ಕೇಳಿ ಬರುತ್ತಿದೆ.
ಶಾಲೆಯ ಎದುರೇ ಕೆರೆ ಮತ್ತು ಗ್ರಾಮದ ಸಂಪರ್ಕಿಸುವ ರಸ್ತೆ ಜೊತೆಗೆ ವಿದ್ಯುತ್ ಸಂಪರ್ಕವುಳ್ಳ ಟ್ರ್ಯಾನ್ಫರ್ಮರ್ ಹಾಗೂ ಬೋರ್ವೆಲ್ ಇದೆ. ಅಲ್ಲದೇ ತೆರೆದ ಒಳಚರಂಡಿ ಸಹ ಇದೆ. ಹೀಗೆ ಅಪಾಯಕ್ಕೆ ಕಾದು ಕುಳಿತು ಜೀವ ಬಲಿ ಪಡೆಯುವಂತಹ ಪರಿಸ್ಥಿತಿ ಇದ್ದು, ಶಾಲೆಗೆ ತಡೆಗೋಡೆ ಇಲ್ಲದೇ ಮಕ್ಕಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿ 20 ರಿಂದ 30 ವಿದ್ಯಾರ್ಥಿಗಳ ಜೀವದ ಪ್ರಶ್ನೆಯಾಗಿ ಉಳಿದಿದೆ.
ಹೀಗೆ ವಿದ್ಯಾರ್ಥಿಗಳು ಆಟದ ವೇಳೆಯಲ್ಲಾಗಲೀ ಅಥವಾ ಶಾಲೆಗೆ ಬರುವಾಗ, ಮನೆಗೆ ಹೋಗುವಾಗ ಈ ಯಾವುದಾದರೂ ಅಪಾಯಕ್ಕೆ ಸಿಲುಕಿದರೆ ಅಮೂಲ್ಯ ಜೀವ ಬಲಿಯಾಗಲಿದೆ. ಅಕ್ಷರ ಜ್ಞಾನ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಶಾಲೆಯೇ ಭವಿಷ್ಯ ಕಟ್ಟಿಕೊಡುವ ಬದಲು ಜೀವ ಬಲಿಪಡೆಯುವ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಹೊಸದಾಗಿ ನಿರ್ಮಾಣವಾಗಬೇಕಿರುವ ಶಾಲಾ ಕಾಂಪೌಂಡ್ 4 ವರ್ಷಗಳೇ ಕಳೆದರೂ ನಿರ್ಮಾಣ ಕಾಣದಂತಾಗಿದೆ ಎಂಬುದು ಈ ಶಾಲೆಯ ಕೆಲ ಹಳೇ ವಿದ್ಯಾರ್ಥಿಗಳ ಮುತುವರ್ಜಿಯಾಗಿದೆ.
ಈ ಶಾಲೆಗೆ ಹಿಂದೆ ಶಾಲಾ ಕಾಂಪೌಂಡ್ ದುರಸ್ತಿಯಲ್ಲಿದ್ದ ಕಾರಣ ಹೊಸ ಕಾಂಪೌಂಡ್ ನಿರ್ಮಾಣಕ್ಕಾಗಿ 2021-22ರ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ -2005 ರ ಮಹಾತ್ಮ ಗಾಂಧಿ ನರೇಗಾ ಕಾಮಗಾರಿಯಡಿ 4 ಲಕ್ಷ ರೂ. ಮಂಜೂರು ಆಗಿತ್ತು. ಸುಮಾರು ನಾಲ್ಕು ವರ್ಷಗಳೇ ಕಳೆದರೂ ಇನ್ನೂ ಈ ಶಾಲೆಗೆ ಕಾಂಪೌಂಡ್ ಮರೀಚಿಕೆಯಾಗಿದೆ ಎನ್ನುತ್ತಾರೆ ಹಳೇ ವಿದ್ಯಾರ್ಥಿ ಮಂಜುನಾಥ್ ಆರ್.
“ರಸ್ತೆಯ ಸಂಪರ್ಕಕ್ಕೆ ಹತ್ತಿರವಾಗಿದ್ದು, ಮಕ್ಕಳಿಗೆ ಅಪಘಾತ ಆಗುವ ಸಂದರ್ಭ ಇದೆ ಮತ್ತು ಶಾಲೆಯ ಮುಂಭಾಗದಲ್ಲಿ ಗ್ರಾಮದ ಕೆರೆ ಇದ್ದು ಕೆರೆವು ಸಂಪೂರ್ಣವಾಗಿ ನೀರಿನಿಂದ ತುಂಬಿದೆ ಇದರಿಂದ ಮಕ್ಕಳ ಜೀವಕ್ಕೆ ತೊಂದರೆ ಆಗುವ ಸಂಭವ ಸಹ ಇದೆ. ಈ ಎಲ್ಲ ತೊಂದರೆಗಳಿಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ನಿರ್ಲಕ್ಷತನ ಎಂದು ಹೇಳಬಹುದು. ಶಾಸಕರು ಸಹ ಇದರ ಬಗ್ಗೆ ಹೆಚ್ಚಿನ ಗಮನವಹಿಸಬೇಕಾಗಿದೆ.”
|ಹಳೇ ವಿದ್ಯಾರ್ಥಿ ಮಂಜುನಾಥ್
“ಶಾಲೆಯ ಕಾಂಪೌಂಡ್ ನಿರ್ಮಾಣ ವಿಚಾರವಾಗಿ ನಾನೂ ಸಹ ಪಿಡಿಓಗೆ ಸಾಕಷ್ಟು ಮನವಿ ಸಾಕಾಗಿದೆ. ಯಾವುದೇ ಸರಿಯಾದ ಸ್ಪಂದನೆ ಇಲ್ಲ. ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಹಿಂದೆ ಅಡೆ-ತಡೆಯೂ ಉಂಟಾಯಿತು. ಹೀಗಾಗಿ ನರೇಗಾ ಯೋಜನೆಯ ಕಾರ್ಮಿಕರು ನಿರ್ಮಾಣಕ್ಕೆ ಮುಂದಾಗದಂತಾಯಿತು. ಶಾಲೆಗೆ ಕಾಂಪೌಂಡ್ ಇಲ್ಲದೇ ಅಪಾಯದ ವಾತಾವರಣವಿರುವ ಕಾರಣ ಯಾವುದೇ ಪಠ್ಯೇತರ ಚಟುವಟಿಕೆಗಳು ನಡೆಸಲು ಆಗುತ್ತಿಲ್ಲ. ಮಕ್ಕಳ ಜೀವವನ್ನು ನಾನು ಕಾವಲುಗಾರನಾಗಿ ಕಾಯುತ್ತಿದ್ದೇನೆ. ಶಾಲೆಗೆ ಕಾಂಪೌಂಡ್ ಇಲ್ಲದೇ ತೆರೆದ ಪ್ರದೇಶವಾಗಿರುವ ಕಾರಣ ಮದ್ಯ ವ್ಯಸನಿಗಳ ತಾಣವಾಗಿದ್ದು, ದಿನವೂ ಮದ್ಯದ ಬಾಟಲ್, ಪೌಚ್ಗಳ ಸ್ವಚ್ಚಗೊಳಿಸಿ ಶಾಲೆಯೊಳಗೆ ಕರ್ತವ್ಯಕ್ಕೆ ತೆರಳುವಂತಾಗಿದೆ.”
| ಜಯರಾಜ್, ಮುಖ್ಯೋಪಾದ್ಯಾಯರು
“ಇನ್ನೆರಡು ದಿನಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಗೆ
ನರೇಗಾ ಯೋಜನೆಯಡಿಯ ಈ ಕಾಮಗಾರಿ ಕೈಗೊಳ್ಳಲು ಉದ್ಯೋಗ ಖಾತ್ರಿ ಕಾರ್ಡ್ವುಳ್ಳ ಕಾರ್ಮಿಕರು ಮುಂದಾಗುತ್ತಿಲ್ಲ. ಕಾಂಪೌಂಡ್ ನಿರ್ಮಾಣದಲ್ಲಿ ತಡವಾಗುತ್ತಿರುವುದಾಗಲೀ, ಅಡೆ-ತಡೆ ಬಗ್ಗೆಯಾಗಲೀ ನನಗೆ ಯಾವುದೇ ಮಾಹಿತಿ ಇಲ್ಲ. ಇದೀಗ ಶಾಲೆಯ ಹಳೇ ವಿದ್ಯಾರ್ಥಿಗಳು ಸಹಕಾರ ನೀಡಲು ಮುಂದಾಗಿದ್ದು, ಇನ್ನೆರಡು ದಿನಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಗೆ ಬರಲಿದೆ”
| ರಶ್ಮಿ, ಪ್ರಭಾರ ಪಿಡಿಓ
ಸುದ್ದಿದಿನ.ಕಾಂ|ವಾಟ್ಸಾಪ್|9980346243