ದಿನದ ಸುದ್ದಿ
ಚನ್ನಗಿರಿ | ಆಸ್ತಿ ವಿವಾದ : ಹಲ್ಲೆ ಮಾಡಿದ ಆರೋಪಿಗಳಿಗೆ ಶಿಕ್ಷೆ
ಸುದ್ದಿದಿನ,ದಾವಣಗೆರೆ : ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲ್ಲೂಕು ನಲ್ಲೂರು ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದ ಸೋಮಶೆಟ್ಟಿ ಗ್ರಾಮದ 06 ಜನ ಆರೋಪಿಗಳಿಗೆ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಬಿ. ವಿಜಯಾನಂದ ಅವರು ತೀರ್ಪು ನೀಡಿದ್ದಾರೆ.
ಸೋಮಶೆಟ್ಟಿ ಗ್ರಾಮದ ಶಿವು ಹಾಗೂ ಮಹೇಶ್ವರಪ್ಪ ಅವರು ಕಳೆದ 2014 ರ ಫೆಬ್ರವರಿ 18 ರಂದು ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿನ ಮೆಡಿಕಲ್ ಶಾಪ್ ಬಳಿ ಇದ್ದಾಗ, ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸೋಮಶೆಟ್ಟಿ ಗ್ರಾಮದವರೇ ಆದ ಈಶ್ವರಪ್ಪ ವೀರೇಂದ್ರ ಪಾಟಿ, ಎಸ್.ಜಿ. ನಾಗೇಂದ್ರಪ್ಪ, ನಾರೇಂದ್ರ, ನವೀನ್ ಎಸ್ ಪಂಚರಾಕ್ಷಪ್ಪ, ಕುಬೇರಪ್ಪ ಹಾಗೂ ಶಕುಂತಲಮ್ಮ ಎಂಬ ಆರೋಪಿಗಳು ಗುಂಪು ಕಟ್ಟಿಕೊಂಡು, ಶಿವು ಹಾಗೂ ಮಹೇಶ್ವರಪ್ಪ ಅವರ ಮೇಲೆ ಮಚ್ಚು, ಕಲ್ಲು, ರಾಡು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಪಿಎಸ್‍ಐ ಸತೀಶ್ ನಾಯ್ಕ ಅವರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲ ಆರೋಪಿತರಿಗೆ ಕಲಂ 143 ಐಪಿಸಿಗೆ ತಲಾ 500 ರೂ. ದಂಡ ಅಥವಾ 1 ತಿಂಗಳ ಸಾದಾ ಸಜೆ. ಕಲಂ 148 ಐಪಿಸಿಗೆ ತಲಾ 1000 ರೂ. ದಂಡ ಅಥವಾ 2 ತಿಂಗಳು ಸಾದಾ ಸಜೆ. ಕಲಂ 323 ಐಪಿಸಿಗೆ ತಲಾ 1000 ರೂ. ದಂಡ ಅಥವಾ 02 ತಿಂಗಳು ಸಾದಾ ಸಜೆ. ಕಲಂ 324 ಐಪಿಸಿಗೆ ತಲಾ 1500 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ. ಕೆಂಚಪ್ಪ ಸರ್ಕಾರದ ಪರ ವಾದ ಮಂಡಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243