ಕ್ರೀಡೆ
ಚನ್ನಗಿರಿ | ಥ್ರೋಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿತಂದ ಯುವತಿರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ
ಸುದ್ದಿದಿನ ಡೆಸ್ಕ್ : ಮೇ 21 ರಿಂದ 25 ರವರೆಗೆ ನೇಪಾಳದಲ್ಲಿ ನಡೆದ ಇಂಡೋ-ನೇಪಾಳ್ ಥ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿತಂದಿದೆ.
ಥ್ರೋಬಾಲ್ ನ ಈ ತಂಡದಲ್ಲಿ ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲೂಕಿನ ಕಗತೂರು ಗ್ರಾಮದ ಸುಜಾತ, ಹೊದಿಗೆರೆ ಗ್ರಾಮದ ರೂಪ ಅವರು ಪ್ರಮುಖ ಪಾತ್ರ ವಹಿಸಿದ್ದು, ಭಾರತಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಯಶಸ್ವಿ ಆಗಿದ್ದಾರೆ.
ರೂಪ ಮತ್ತು ಸುಜಾತ ಅವರು ರೈತರ ಮಕ್ಕಳಾಗಿದ್ದು ಅವರ ಸಾಧನೆಗೆ ಗ್ರಾಮಸ್ಥರು ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. ಗ್ರಾಮೀಣ ಪ್ರತಿಭೆಗಳಾದ ನಮಗೆ ಸರ್ಕಾರವು ಇದುವರೆಗು ಯಾವುದೇ ಸಹಾಯ ನೀಡದೆ ನಿರ್ಲಕ್ಷ್ಯ ತೋರಿದೆ ಎಂದು ಯುವತಿಯರು ‘ಸುದ್ದಿದಿನ.ಕಾಂ‘ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ರೂಪಾ ಥ್ರೋಬಾಲ್ ನ ರಾಜ್ಯ ತಂಡಕ್ಕೆ ಆಯ್ಕೆ ಆಗಿ ಪಂಜಾಬ್ ಹಾಗೂ ತಮಿಳುನಾಡಿನ ದ್ರೋಬಾಲ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆದ್ದು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದರು. ಚನ್ನಗಿರಿಯ ಶಿವಲಿಂಗೇಶ್ವರ ಕಾಲೇಜಿನಲ್ಲಿ ಬಿಬಿಎಂ ಓದಿರುವ ರೂಪಾ ಪೊಲೀಸ್ ಅಧಿಕಾರಿ ಆಗಬೇಕೆಂಬ ಗುರಿ ಇಟ್ಟು ಕೊಂಡ ಪಿಎಸ್‌ಐ ಹುದ್ದೆಗಾಗಿ ಧಾರವಾಡದಲ್ಲಿ ಕೋಚಿಂಗ್ ಅನ್ನು ಪಡೆಯುತ್ತಿದ್ದಾರೆ.
ಇನ್ನು ಸುಜಾತಾ ಅವರು ಚನ್ನಗಿರಿಯ ಶಿವಲಿಂಗೇಶ್ವರ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಿಇಡಿ ಕೂಡಾ ಮಾಡಿರುವ ಇವರು ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಅಥಿತಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಕೂಡ ಧಾರವಾಡದಲ್ಲಿ ಪಿಎಸ್‌ಐ ಹುದ್ದೆಗಾಗಿ ಕೋಚಿಂಗ್ ಪಡೆಯುತ್ತಿದ್ದು, ಐಎಎಸ್ ಅಧಿಕಾರಿಯಾಗುವ ಗುರಿಹೊಂದಿದ್ದಾರೆ. ಸುಜಾತ ಭರತನಾಟ್ಯ ಪಟು,ಫ್ಯಾಶನ್ ಡಿಸೈನರ್ ಹಾಗೂ ಬ್ಯೂಟಿಷಿಯನ್ ಕೂಡ ಹೌದು.
ಇದನ್ನೂ ಓದಿ : ಚನ್ನಗಿರಿ | ಅಂತಾರಾಷ್ಟ್ರೀಯ ಥ್ರೋಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಶಿವಲಿಂಗೇಶ್ವರ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಸಮಯದಲ್ಲಿ ಇವರಿಬ್ಬರಿಗೆ ಸ್ಪರ್ಧೆಗೆ ಹೋಗಲು ಹಣಕಾಸಿನ ಸಮಸ್ಯೆ ಇತ್ತು. ಈ ಸಂದರ್ಭದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಎಸ್ ಐ ಮಹೇಶ್ ಸೇರಿದಂತೆ, ತುಮ್ಮೋಸ್ ಸಂಸ್ಥೆ ಹಾಗೂ ಶಾಸಕ ಮಾಡಾಳ್ ವಿರುಪಾಕ್ಷಪ್ಪ ತಲಾ ಹತ್ತು ಸಾವಿರ ಹಣ ಕೊಟ್ಟಿದ್ದಾರೆ. ಅದು ಬಿಟ್ಟರೆ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ ಎನ್ನುತ್ತಾರೆ ರೂಪ, ಸುಜಾತ.
ಬೇಕಿದೆ ಸಹಕಾರ
ಸೆಪ್ಟೆಂಬರ್ ನಲ್ಲಿ ಮಲೇಶಿಯಾದಲ್ಲಿ ನಡೆಯುವ ಇಂಟರ್ ನ್ಯಾಶನಲ್ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಇವರಲ್ಲಿ ಹಣದ ಅವಶ್ಯಕತೆ ಇದ್ದು ಸರ್ಕಾರ ಮತ್ತು ಕ್ರೀಡಾಸಕ್ತರು ಇವರಿಗೆ ಸಹಾಯ ಹಸ್ತ ಚಾಚುವುದರ ಮೂಲಕ ಗ್ರಾಮೀಣ ಪ್ರತಿಭೆಗಳ ಬೆಳವಣಿಗೆಗೆ ಸಹಕಾರಿಯಾಗ ಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243