ರಾಜಕೀಯ

‘ಛತ್ರಪತಿ ಶಿವಾಜಿ ನಿಜವಾದ ಸಮಾಜವಾದಿ’ಯಾಗಿದ್ದರು : ಸಿದ್ದರಾಮಯ್ಯ

Published

on

ಸುದ್ದಿದಿನ ಡೆಸ್ಕ್ : ಛತ್ರಪತಿ ಶಿವಾಜಿ ಜಾತ್ಯಾತೀತ, ಧರ್ಮಾತೀತ ನಾಯಕ. ಮೊಗಲರು ಮತ್ತು ಇಂಗ್ಲೀಷರು ಮಾತ್ರವಲ್ಲ ಹಿಂದೂ ಅರಸರು ಕೂಡಾ ಅವನ ವೈರಿಗಳಾಗಿದ್ದರು. ಆ ಕಾಲದ ಯುದ್ಧ ಧರ್ಮಗಳ ನಡುವೆ ನಡೆಯುತ್ತಿರಲಿಲ್ಲ. ಇದನ್ನು ಅರ್ಥಮಾಡಿಕೊಳ್ಳದೆ ಶಿವಾಜಿಯನ್ನು ಹಿಂದೂ ಧರ್ಮದ ರಕ್ಷಕನಂತೆ ಬಿಂಬಿಸುವುದು ಸರಿಯಲ್ಲ ಎಂದು ಭಾನುವಾರ ನಡೆದ ಬೆಳಗಾವಿ ಜಿಲ್ಲೆ ಯಮಕನಮರಡಿ ವಿಧಾನಸಭೆ ಕ್ಷೇತ್ರದ ಕಡೋಲಿ ಗ್ರಾಮದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ನಂತರ ಮಾತನಾಡಿದ ಅವರು, ಶೂದ್ರಾದಿ ಶೂದ್ರ ಸಮುದಾಯದಲ್ಲಿ ಹುಟ್ಟಿ, ಬುಡಕಟ್ಟು ಜನರನ್ನು, ಹಿಂದುಳಿದ ವರ್ಗದವರು ಮತ್ತು ಮುಸ್ಲಿಮರನ್ನು ಕೂಡಾ ಒಗ್ಗೂಡಿಸಿ ಸೈನ್ಯ ಕಟ್ಟಿ, ಮೊಗಲ ಸಾಮ್ರಾಟ ಔರಂಗಜೇಬನ ವಿರುದ್ಧ ಮಾತ್ರವಲ್ಲ ಹಿಂದೂ ಪಾಳೆಗಾರರ ವಿರುದ್ಧವೂ ಯುದ್ಧವನ್ನು ಮಾಡಿದವರು ಶಿವಾಜಿ ಎಂದರು.

ಶಿವಾಜಿ ನಿಜವಾದ ಸಮಾಜವಾದಿಯಾಗಿದ್ದರು. ಭೂಮಾಲೀಕ ಪದ್ಧತಿಯನ್ನು ರದ್ದುಗೊಳಿಸಿ ರೈತರು ನೇರವಾಗಿ ಸರಕಾರಕ್ಕೆ ಕಂದಾಯವನ್ನು ಕೊಡುವ ಪದ್ಧತಿಯನ್ನು ಹುಟ್ಟುಹಾಕಿದ್ದರು. ಭೂಮಾಲೀಕರ ಶೋಷಣೆಯನ್ನು ತಡೆಗಟ್ಟಲು ಅಧಿಕಾರಿಗಳನ್ನು ನೇಮಿಸಿ, ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ಬೆಳೆ ನಾಶವಾದರೆ ಪರಿಹಾರ ಧನ, ಆಹಾರ ಧಾನ್ಯ ಕೊಡುವ ವ್ಯವಸ್ಥೆ ಮಾಡಿದ್ದರು‌ ಎಂದು ಹೇಳಿದರು.

ಹುಟ್ಟುತ್ತಾ ಪ್ರತಿ ಮಗುವು ವಿಶ್ವ ಮಾನವ, ಬೆಳೆಯುತ್ತಾ ಅದನ್ನು ನಾವು ಅಲ್ಪಮಾನವನಾಗಿ ಮಾಡುತ್ತೇವೆ ಎಂದು ಕುವೆಂಪು ಹೇಳಿದ್ದರು. ನಮ್ಮ ಮಕ್ಕಳು ಜಾತಿವಾದಿಯಾಗಿ, ಧರ್ಮಾಂಧನಾಗಿ ಬೆಳೆಯದಂತೆ ನಿಜವಾದ ಧರ್ಮದ ಅರಿವು ಅವರಲ್ಲಿ‌ ಮೂಡಿಸುವುದು ಹಿರಿಯರ ಜವಾಬ್ದಾರಿಯಾಗಿದೆ ಎಂದು ಎಚ್ಚರಿಕೆ ನೀಡಿದರು.

ಸಂವಿಧಾನದ ಮುಂದೆ ಎಲ್ಲ ಜಾತಿ, ಧರ್ಮಗಳು ಸಮಾನ. ರಾಜಕೀಯ ಸ್ವಾರ್ಥಕ್ಕಾಗಿ ಪಕ್ಷಗಳು ಯಾವುದೋ ಒಂದು ಧರ್ಮದ ಪರವಾಗಿ ನಿಲ್ಲುವುದು ತಪ್ಪು.ಬಸವಣ್ಣನವರು ಹೇಳಿದ್ದ ದಯೆಯಿಂದ ಕೂಡಿರುವ ಧರ್ಮ ನಮ್ಮದಾಗಬೇಕು. ಆಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version