ಅಂಕಣ
ಕತೆ | ಚಿಗುರು ಹುಣ್ಣಿಮೆ
~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್,ಕನ್ನಡಕ್ಕೆ: ಡಾ. ಶಿವಕುಮಾರ್ ಕಂಪ್ಲಿ
ಮಳೆಯ ಹನಿಗಳು ಸುರಿಯುತ್ತಲೇ ಇವೆ. ಅರ್ಧ ಕಾಡಿನಲ್ಲೇ ಇರುವ ಈ ನಟ್ಟ ನಡು ಮಧ್ಯಾನ್ಹದಲ್ಲಿ ಹನಿಗಳೇನೋಪಾ. ಎಲ್ಯಾನ ತಟುಗು ನಿಂದ್ರಬೇಕೆಂತಾ… ಸುತ್ತಲೂ ನೋಡಿದೆ. ಕಲ್ಲುಗುಡ್ಡದ ವಿನಾ ಮತ್ತೇನೂ ಕಾಣುತಿಲ್ಲ. ಹಂಗೇ…ಸರ ಸರನೇ ಏರಿ ಗುಡ್ಡದ ಮ್ಯಾಗಳಿಂದ ಕೆಳಾಕ ನೋಡಿದೆ. ನೆಲಕೆ ಅರಿಷಿಣವನ್ನೇ ಚಲ್ಲಿದಂತಿದೆ!
ಚಂಡು ಹೂಗಳ ಹಳದಿ ಬಣ್ಣವು ಹಸುರ ನಡುವೆ ಗೊಂಚಲು ಗೊಂಚಲಾಗಿ ಹರಡಿಕೊಂಡಿದೆ. ನೆಲದ ತುಂಬೆಲ್ಲಾ ಆ ಹೂಗಳ ಪರಿಮಳವೇ… ಸಣ್ಣಗೆ ಹರವಿಕೊಂಡಿದೆ.
ಚಂಡು ಹೂಗಳ ಮೇಲೆ ಮಳೆ ಹನಿಗಳು ಸುರಿಯುತಿದ್ದರೆ ನನ್ನನ್ನು ಹಳೆಯ ಹಳ್ಳಿಯ ಹಾಡುಗಳೆಲ್ಲಾ ಜಲ ಜಲನೇ…ನೀರ ಹರಿವುಗಳಂತೆಯೇ ಕವಿಯುತಿದ್ದವು.
ಗುಡ್ಡದ ಮೇಲಿಂದ ತಣ್ಣಗೆ ಬೀಸೋ… ಗಾಳಿಗೆ ಅಲ್ಲಾಡುತ್ತಾ… ಅಲ್ಲಾಡುತ್ತಾ ಚಂಡು ಹೂವುಗಳು ಮಣ್ಣು ಕಾಣುತ್ತಿವೆ. ಗಿಡಗಳಿಂದ ಕವುಚಿ ಬಿದ್ದು ತೇಲುತಿದ್ದ ಆ… ಹೂ ದಳಗಳು ಮಳೆಯೊಳಗೆ ಹೊರಟ ಪುಟಾಣಿ ದೋಣಿಗಳಂತೆ ಕಣಿವೆಯ ಬಳಿಗೆ ಓಡುತಿದ್ದವು.
“ಈ ಸಲ ಹೂ ಬೆಳೆಯೂ… ಕಡಿಮೆ ಆಗಿದೆ. ಮಳೆ ಗೂಡಾನೂ… ಕಡಿಮೆಯೇ.” ಎಂದುಕೊಂಡು ಗುಡ್ಡ ಇಳಿಯುತ್ತಾ ದೂರಕೆ ನೋಡಿದೆ.
“ ಓ…ಬರ್ತಾ ಅದಾಳಲ್ಲಪ್ಪೋ.. ಹುಡುಗಿ ಶಾಮಲ!”
“ತೋಟದಲ್ಲಿ ಕೊಯ್ದ ಚೆಂಡು ಹೂಗಳ ಪುಟ್ಟಿಯನ್ನು ಶಾಮಲಾಳು ತನ್ನ ನೆತ್ತಿಯ ಮೇಲಿಟ್ಟುಕೊಂಡು ಮಾಲಿಕ ತೋರಿಸಿದ ಜಾಗಕ್ಕೆ ನಡೆಯುತಿದ್ದರೆ… ಆಹಾ… ಆಕೆಯ ನಡಿಗೆಯ ಕಡೆಗೇನೇ…ಹಂಗಾ… ನೋಡಬೇಕೆನಿಸುತ್ತದೆ”
ಆದರೂ ನಮ್ಮ ಅಪ್ಪನಿಗೆ ತಿಳೀದಂತೆಯೇ ಏನಾರ ಮಾಡಬೇಕು.
ತಿಳಿದರೆ ಇನ್ನೇನಕ್ಕಾತಿ!
ಮನಿಯಿಂದ ಹೊರ ದಬ್ಬದೇ ಸುಮ್ಮಕಿರತಾನೇನು?
ಮೊನ್ನೆ ಪೀರಮ್ಮವ್ವನ ಕೂಡ ಆಕಿಯನ್ನು ಕರಕೊಂಡು ಬಾ ಅಂತ ಹೇಳಿಕಳಿಸಿದರೆ ʼ ನಾನು ಅಂತವಳಲ್ಲಪ್ಪೋ… ಅಂತೇಳು ʼ ಎಂದು ಹೇಳಿಕಳಿಸಿದಳಂತೆ.
ಇನ್ನ ಮಾಡೋದೇನೈತಿ?
ಆಕಿಯ ರೂಪವೇ… ನನ್ನನ್ನ ಅದುಮಿ ಅದುಮಿ ಕೊಲ್ಲುತ್ತಿರುವಾಗ ನನ್ನ ಗಂಡುತನವಾದರೂ ಸುಮ್ಮಕಾ ನಿದ್ದಿ ಮಾಡೀತಾ? ಆಕಿನ್ನ ಪಡಕೊ ತನಕ ಆಕಿಯ ರೂಪವೇ ….ಗುರ್ತಿಗೆ ಬಂದು..ಬಂದೂ… ಸಾಯಿಬಡಿತಿರತೈತಿ….
ಮಳೆಹನಿಗಳಲ್ಲಿ ಉಸುರುಗಟ್ಟುವಂತೆ ಮೈಯೆಲ್ಲಾ ಹೂ ಗಂಧದ ಪರಿಮಳವ ತುಂಬಿಕೊಂಡು. ಆ… ತೊಯ್ದ ಬಟ್ಟೆಗಳಲ್ಲಿ ಬಳುಕುತ್ತಾ… ಮೈದೋರುತ್ತಾ…..ಬರುತಿದ್ದರೆ ಆಕಿನಾ..ಮುಟ್ಟದೇ… ಹೆಂಗಿರಲಿ?
ಅವಳ ಮೈ ನನ್ನ ಉಸಿರುಗಟ್ಟಿಸಿದೆ.
ಆಕಿಯ ಹಿಂದೆ ಆ ಕೂಲಿಯ ಹೆಂಗಸರು ಇರದೇ ಇದ್ದರೆ ಆ ಸುದ್ಧಿಯೇ… ಬೇರೆ ಇತ್ತು.
ಅವನೌನ್ ತಪ್ಪಿಸಿಕೊಂಡಳು!
ಅಲ್ಲಾ…
ʼನನ್ನ ನೋಡಿಯೂ ನೋಡದಂಗ ಹೊಕ್ಕಾಳಲ್ಲ…!ʼ
ನಾನೂ…
ಅವಳು ಹ್ವಾದ ಕಡೆಗೇ ತಿಕ್ಕಲೆದ್ದು ನೋಡುತಿರುವೆ.
***
ರಾತ್ರಿ ಮಲಗಿದೆನಾದರೂ ನಿದ್ದಿ ಬರಲಿಲ್ಲ.
ಆಕಿಯ ಆಲೋಚನೆಯೊಳಗೇ ಮುಣುಗಿದ್ದಾಗ ನನ್ನ ಪಕ್ಕಕ್ಕೆ ಬಂದು ಕುಂತ ಸಾಂಬಶಿವ.
ಆ ಮಾತು, ಈ ಮಾತೂ ಮಾತಾಡಿದಮೇಲೆ… ಸಣ್ಣಗೆ ಗುಡಿಸಲುಗಳ ಕಡಿಗೆ ಇರುವ ಶ್ಯಾಮಲ ಸುದ್ದಿಯನ್ನು ತೆಗೆದಿಟ್ಟೆ.
ಸಾಂಬ ಬಿದ್ದು ಬಿದ್ದು ನಗತೊಡಗಿದ.
“ ಹಂಗ್ಯಾಕ್ ನಗತೀಯಾ… ನಿನ್ನಾಪ್ನಿ!
ಏನಾನ ಇದ್ದರ ವದರಿ ಬಿಸಾಕು.
ಸುಮಕಾ… ಆ ಪಾಟಿ ನಕ್ಕರೆ ನಾ ನೇನ್ ಅನಕಾಬೇಕಲೇ…ಬೆಪ್ಪಗಾ” ಅಂತ ಮುಖ ಗಂಟಾಕಿಕೊಂಡೆ.
ಸಾಂಬ ನನ್ನ ಮಾತನ್ನ ಲೆಕ್ಕಕ್ಕೂ.. ತಗಳದಲೇ.. ನಗುತ್ತಲೇ ಇದ್ದ.
ಸಾಂಬಶಿವ ನಮ್ಮ ಮನಿಮಗ.
ನನಗಿಂತಲೂ ಎರಡು ಮೂರು ವರ್ಷ ದೊಡ್ಡಾನು.
ಇಬ್ಬರೂ ಒಂದೇ ಕುಲದವರು.
ನಾ ಸಣ್ಣವನಿದ್ದಾಗ…..
ನಮ್ಮಪ್ಪರು ಗವಿ ಸಿದ್ದೇಶ್ವರನ ಜಾತ್ರೆಗೆ ಹೋಗಿ ಬರುವಾಗ ಹುಲಿಗೆಮ್ಮನ ಗುಡಿಯ ಛತ್ರದೊಳಗ ಈ… ಸಾಂಬ ಕಂಡನಂತೆ. “ ಯಾರೂ ದಿಕ್ಕಿಲ್ಲಯ್ಯಾ.. ನಾನೂ ನಿಮ್ಮ ಎತ್ತಿನ ಬಂಡಿ ಜೊತಿಗೇ ಬರ್ತೀನಯ್ಯ…” ಎಂದು ಬೆನ್ನು ಬಿದ್ದನಂತೆ.ಆಗ ಕರಕ ಬಂದು ಬೆಳಸಿದರು. ಆ ಕೆಲಸ ಈ ಕೆಲಸ ಮಾಡಿಸುತ್ತಾ ಸಾಕಿದರು. ಮನುಸಾ ಒಳ್ಳೆಯವನೇ. ಬಲು ಸೌಮ್ಯ. ನಮ್ಮ ಊರಿನೊಳಗಾ ನನಗೆ ಅಗ್ದೀ…ಇಷ್ಟದವ ಕೂಡಾ. ಹೊಲದ ಕಡೆಯೇ ಇದ್ದು ಹೊಲ ಕಾಯುತ್ತಾನೆ. ಬೆಳೆಗೆ ನೀರುಣಿಸುತ್ತಾನೆ. ಯಾವ ಕೆಲಸ ಹಿಡದ್ರೂ… ಅದು ಆಗುವ ತನಕ ಬಿಡಲಾರ.
ಊರೊಳಗ ಎಲ್ಲರೂ ʼ ತಿಕ್ಕ ಸಾಂಬ” ಅಂತಾರೆ. ಯಾರು ಏನಂದ್ರೂ… ಯಾವುದನ್ನೂ ಮನಸಿಗೆ ತಗಳ್ಳಲಾರ.
ಸಾಂಬನ ಕಥೆ ಸಾಂಬನದೇ.ಆತನ್ನ ಕೆಲಸ ಏನೋ.. ಆಟೇ…!
ಸಾಂಬ ಇನ್ನಾ… ನಗುತ್ತಲೇ ಇದ್ದಾನೆ.
ನನಗೆ ಉರಿಯಿತು.
“ ಥೂ… ನಿನ್ನವೌನ್ ನಿಲಸಾ!” ಗದರಿದೆ.
“ ಇರ್ಲಿ ಹೋಗ್ ಸಾಮೀ…. ನಿನ್ ಯವಾರ ನನಗೇ ತಿಳೀದೇನು? ಆ ಯವ್ವನ ಸುದ್ದೀ… ತಗದೀ ಅಂದ್ರ ಆ ಗದ್ದಲೇನು ನನಗೆ ಗೊತ್ತಾಗದಾ” ತರಿ…ನಾ..ನಾ…ನಾ.. ಕಣ್ಣೆಗರಿಸುತ್ತಾ ಸ್ವರವೆತ್ತಿದನು ಸಾಂಬ.
“ ಹೌದು.. ಬಿಡಾ ಆಕಿಗೂ ನನಗೂ ದೊಡ್ಡ ರಂಪಾಟ ಐತಿ ” ಅಂದೆ ವ್ಯಂಗ್ಯವಾಗಿ.
“ ಓ…ರಂಪಾಟದ ತನಕಾ ಹೋಗೇತಿ ಅಂದಮ್ಯಾಕ ಕತಿ ದೊಡ್ಡದಾ ಐತಿ ಅನ್ನು, ಇಲ್ನೋಡು ಯಣ್ಣಾ…. ಚೊಲೋತನಂಗ ಸರಿಮಾಡ್ಕಾ!” ಬೀಡಿಗೆ ಬೆಂಕಿ ಇಡುತ್ತಾ ಹೇಳಿದ.
“ ಸರಿ ಮಾಡ್ಕಂಬಾಕ ಹೋಗಲಿಲ್ಲ ಆಂದ್ರ, ನೀ.. ಹೇಳಿ ಸರಿ ಮಾಡಸೋ ಸೂರ” ಎಂದೆ.
ತತ್ತರಗೊಂಡ ಸಾಂಬ “ ಸ್ವಾಮೀ ನಮಪ್ಪಾ… ಏನೋ ಕಣದ ಹತ್ರ, ಹೊಲದ ಹತ್ರ, ಸಿವನೇ ದೇವ್ರೇ ಅಂತಾ, ಬಡವ ನೀ ಮಡಿಗದಂಗಿರು ಅಂದುಕಂಡು, ನಾ…ದುಡಕಂಡಿರೋನು. ನನ್ನನ್ಯಾಕಪೋ ಇರಕಸ್ತೀಯ, ನೋಡಪ್ಪಾ…ನಿನಗ ಸಿಟ್ಟಿದ್ದರ ನಾಕು ಹೊಡದು ಹೊಂಟು ಬಿಡು.ಇಗಾ…ಇಲ್ನೋಡು… ಒಂದು ದೊಡ್ಡ ನಮುಸ್ಕಾರನಪ್ಪೋ” ಎಂದ.
“ ಅಲ್ಲಲೇ ಸಾಂಬಾ ನನಗೇನೋ ಆಕಿದಾ… ಚಿಂತಿ ಹಿಡದು ಬುಟ್ಟಾತಿ. ಆಕಿ ಮನಸು ನೋಡಾನಾ ಅಂದ್ರ …ಎಂಗೈತೋ ಏನೋ ನಾ ಕಾಣೆ!” ಎಂದು ನಿಟ್ಟುಸಿರಿಟ್ಟು ಹೊರಳಿಕೊಂಡೆ.
***
ಬೆಳಕಾಯಿತು.
ಯಾವದೋ ಹಾಡು ಕಿವಿಗೆ ಬಡೀತಿತ್ತು.
“ ರಕ್ಕಸ ನಾಶಕನಿಗೆ ಶರಣೆನ್ನಿರೋ…
ಯದುಕುಲ ನಂದನನಿಗೆ ಶರಣೆನ್ನಿರೋ…
ಬೆಟ್ಟವಾ ಹಿಡಿದೆತ್ತಿ ಭಕುತರ ಭಗುತಾರಾ ಉಳಿಸೀದ…
ಗೋವರ್ಧನ ಸಾಮಿಗೆ ಶರಣು…ಶರಣೆನ್ನಿರೋ..”
ಆ… ದನಿಯನ್ನ, ಎಲ್ಲೋ… ಚಲೋತನಾಗಿ, ಕೇಳಿದಂಗೇ…ಕಾಣುತೈತಿ! ಮನಿ ಮಾಡಿಯಿಂದ ಇಳಿದು ಕಿಟಕಿ ಹತ್ರ ಬಂದು ಬಗ್ಗಿ ಕೆಳಗೆ ನೋಡಿದೆ. ಹೆಂಸರೆಲ್ಲಾ… ಮಣ್ಣಿನ ಮಡಕೆಗಳಿಟ್ಟುಕೊಂಡು ಸುತ್ತಲೂ ಕುಂತು ಹಾಡುತಿದ್ದಾರೆ. ಹೌದು ಇವರೆಲ್ಲಾ ಚಿಗುರು ಹುಣ್ಣಿಮೆಗಾಗಿ ಮನೆ ಮನೆಗೆ ಬಂದು ಬೀಜಗಳನ್ನು ಎತ್ತಲು ಬಂದವರು.
ಚಿಗುರ ಹುಣ್ಣಿಮಿಯ ಹಾಡೆಂದರೆ ನನಗೆ ಸಣ್ಣವನಿದ್ದಾಗಿನಿಂದಲೂ ಬೊಲು ಖುಷಿ.
ಚಿಗುರ ಹುಣ್ಣಿಮೆಯು ಒಂದು ಸೊಗಸಾದ ಪ್ರಕೃತಿ ಹಬ್ಬ. ಅದು ವಿಶಿಷ್ಟವಾದ ಅಪ್ಪಟ ಮಹಿಳೆಯರ ಹಬ್ಬ.ರಾಯಲ ಸೀಮೆಯ ವೈಭೋಗದ ಹಬ್ಬ.ಕೃಷಿ ಪರವಾದ ಸಂಪ್ರದಾಯವನ್ನು ಸೂಸುವ ಈ ಸಾಂಸ್ಕೃತಿಕ ಹಬ್ಬವು ಪಾರಂಪರಿಕ ಬೀಜಗಳನ್ನು ತಲೆ ತಲೆಮಾರುಗಳಿಂದ ರಕ್ಷಿಸುವ ಮನೆಗೂ ಲೋಕಕ್ಕೂ ಹಂಚುವ ಪೂರ್ವಿಕರ ಪ್ರೀತಿಯ ಹಬ್ಬ.
ಇಲ್ಲಿ ಹುಣ್ಣಿಮೆಗೂ ಮೊದಲು ಮಹಿಳೆಯರು ಮನೆ ಮನೆ ಸುತ್ತಿ ಹನ್ನೆರಡು ಬೀಜಗಳನ್ನು ಸಂಗ್ರಹಿಸುತ್ತಾರೆ. ಹಸುವಿನ ಸಗಣಿ,ಗೋಮೂತ್ರ,ಮಡಕೆಗಳಲ್ಲಿ ಕೆಂಪು ಮಣ್ಣು ,ಕಪ್ಪು ಮಣ್ಣು, ಉಸುಗು ಬೆರಸಿ ಬೀಜಗಳನ್ನು ಬೆಳೆಸುತ್ತಾರೆ.
ಹುಣ್ಣಿಮೆ ಪೂಜೆಯ ದಿನ ಗೊರಚಿಯನ್ನ ಮಾಡಿ ಗುಲಗಂಜಿಗಳ ಕಣ್ಣನ್ನು ಇಟ್ಟು, ಕಣಗಿಲೆ ಹೂ , ಗರುಕೆ, ಹರಿಷಿಣ ಕುಂಕುಮದೊಂದಿಗೆ ಪೂಜೆಗಳನ್ನು ಮಾಡಿ, ಈ ಮೊದಲು ಮಡಿಕೆಗಳಲ್ಲಿ ಬೆಳೆದ ಬೀಜದ ಸಸಿಗಳನ್ನು ತಲೆಮೇಲೆ ಹೊತ್ತುಕೊಂಡು ಅದ್ದೂರಿಯ ಮೆರವಣಿಗೆಯಲ್ಲಿ ಹತ್ತಿರದ ಕೆರೆ ಅಥವಾ ದೇವಾಲಯಗಳ ನೀರಿನ ಬಾವಿಗಳ ಬಳಿ ಇಟ್ಟು ಪೂಜಿಸುತ್ತಾರೆ.
ಇದು ಮಳೆಯ ಮತ್ತು ಫಲವಂತಿಕೆಗಾಗಿ ದೇವತೆಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ. ದುಡಿವ ಭಕ್ತರು ತಮ್ಮ ಭಕಿಯನ್ನು ಪ್ರಕೃತಿಗೆ ಸಮರ್ಪಿಸುವ ಒಂದು ವಿಧಿ ವಿಧಾನ.
ನಾನು ಚಿಕ್ಕಂದಿನಲ್ಲಿ ಬೀಜಗಳ ಎತ್ತಲು ಮನೆ ಮನೆ ತಿರುಗೋ ಹೆಣ್ಣು ಹುಡುಗಿಯರ ಹಿಂದೆಯೇ ತಿರುಗುತಿದ್ದೆ. ನಮ್ಮಮ್ಮ ಬೈತಿದ್ದಳು.
“ ನೀನೇನರಾ… ಹುಡುಗಿಯಾನಾ? ಹಂಗ ಬರತೀ…” ಅಂದು ಸುತ್ತ ಮುತಲವರೆಲ್ಲಾ ನಗಚಾಟಿಕಿ ಮಾಡ್ತಿದ್ರು.
ಈ…. ನೆನಪಿನ ಅಲೆಯೊಳಗ ನಾನು ಮುಳುಗಿರುವಾಗ ದೂರದಿಂದ ಇನ್ನೊಂದು ಹಾಡು ಕೇಳಿಸಿತು…
“ ಪಾಪ ನಿಧಿ ಶಿಶುಪಾಲನು ಬೈಯ್ಯಲು
ಕೋಪ ಕೆರಳಿ ಹತಗೈದ ಮುರಾರಿಗೆ ಶರಣೆನ್ನಿರೋ..
ಹಿಡಿ ಹಿಡಿದು ಸೀಳುವ ಜರಾಸಂಧನ ಮುಗಿಸಿದ
ಲೋಕ ಪಾಲಕ ಗೋಪಾಲನಿಗೆ ಶರಣೆನ್ನಿರೋ”
ಹೌದು ಈ ದನಿ ಆಕಿಯದೇ.. ಹಾಡುವ ಚಿಕ್ಕ ದೊಡ್ಡ ಹೆಣ್ಣು ಮಕ್ಕಳ ಆ… ಗುಂಪಿನಲ್ಲಿ ಈ… ಹುಡುಗಿಯೂ ಇದ್ದಾಳ.
ಚಕ ಚಕನೇ ಮೆಟ್ಟಿಲುಗಳ ಇಳಿಯಬೇಕು ಅನಿಸುತ್ತಿದೆ.
ಆಕಿಯ ಸುದ್ಧಿ ಏನೋ… ನೋಡಬೇಕು.
ಆದರೂ… ಅದು ಆಗದ ಕೆಲಸವೇ….
ನಮ್ಮಪ್ಪ ಅಲ್ಲಿಯೇ ನೋಡಾಕತ್ಯಾನ!
ನಮಮ್ಮ ಮರದೊಳಗೆ ಜೋಳ ತಂದು ಅವರ ಪುಟ್ಟಿಗೆ ಸುರುವಿದಳು. ನಮ್ಮಪ್ಪಪ ಚಂಡು ಹೂವು, ಮಲ್ಲಿಗೆ ಹೂಗಳನ್ನು ತಂದುಕೊಟ್ಟ. ಆ… ಹೆಣ್ಣುಮಕ್ಕಳೆಲ್ಲಾ ಅವುಗಳನ್ನು ತಲಾಕೊಬ್ಬರು ಹಂಚಿಕೊಂಡು ತಮ್ಮ ತಮ್ಮ ಪುಟ್ಟಿಗಳಲ್ಲಿ ಇಟ್ಟುಕೊಂಡರು.
***
ಈಕೆ ಕೊಯ್ದು ತಂದ ದುಂಡು ಚಂಡುಹೂನಂತಹ ಸಂಜೆ ಸೂರ್ಯನ ಹಾಗೆಯೇ ಕುಳಿತಿದ್ದಳು.
ಆಕೆಯ ಬಣ್ಣಕೆ ಚಂಡುಹೂ ಬೆಳಗು ಪಸಂದಾಗಿ ಹೋಲುವಂತಿದೆ.
ಹಂಗೇ… ನೋಡುತ್ತಾ ಹ್ವಾದೆ.
ಅಷ್ಟರೊಳಗೆ ನಮ್ಮ ಸಾಂಬನೂ ಕೂಡ ಚಿಟ್ಟೆಯ ಹಾಗೆ ಅವರೊಳಗೆ ಸೇರಿ ಬೀಜಗಳನ್ನು ಮಣ್ಣ ಮಡಕೆಗಳಿಗೆ ಹಾಕುತ್ತಾ ತಟ್ಟುತ್ತಾ….ಕುಳಿತ. ಇವನೊಬ್ಬ ಹುಚ್ಚರಾಯ ಅಂದುಕೊಂಡೆ.
ಅವರ ಜೊತೆಗೆ ಹಕ್ಕಿಗೆ ಹಕ್ಕಿಗಳು ಕಲೆತು ಕೊರಳೆತ್ತುವಂತೆಯೇ…..ಸಾಂಬನೂ ಸ್ವರವೆತ್ತಿದನು.
“ಗೋಪಿಕೆಯರ ರಾಜನಿಗೆ ಶರಣೆನ್ನಿರೋ…
ಗೋಪಾಲ ಬಾಲನಿಗೆ ಶರಣೆನ್ನಿರೋ…
ರಾಸಲೀಲೆಗಳ ಕಲಿಸಿದ ರಮಣಿ ರಾಧೆಗೆ ಶರಣೆನ್ನಿರೋ..
ಮುರಳಿಗಾನದ ಮಹಾ ಮಹಿಮನಿಗೆ ಶರಣೆನ್ನಿರೋ”
ಸಾಂಬನ ಹಾಡು ಕೇಳಿ ನನಗೆ ನಗು ತಡೆಯಲಾಗಲಿಲ್ಲ. ಹೆಣ್ಣುಮಕ್ಕಳು ಕೂಡಾ ಅವನ ಜೊತೆಗೂಡಿ ಜಿಂಕೆಗಳಂತೆ ಹೆಜ್ಜೆ ಹಾಕುತಿದ್ದಾರೆ. ನಮ್ಮಪ್ಪ ನಾಲ್ಕು ರೂಪಾಯಿಗಳನ್ನು ತೆಗೆದು ನಗು ನಗುತ್ತಲೇ ಸಾಂಬನ ಕೈಗಳಿಗಿಟ್ಟ.
***
ಸಂಜೆಯಲ್ಲಿ ಸಣ್ಣಕ ಚಾವಡಿ ತಾವಿಂದಾ ಕುರುಬರು, ಬ್ಯಾಡರ ಓಣಿ ದಾಟಿಕೋಂತಾ…ನಾನು ಸುಡಗಾಡ ಬೇಲಿ ದಾರಿ ಹಿಡಿಯೋದೇ ಗುಡಿಸಲ ಹತ್ರಕ್ಕ. ನಾಳೆ ಮುಂಜಾನಿ ಗುಡಾ ಹಂಗಾ ಹೊಂಟು ಅವರನ್ನ ಕೂಲಿ ಕೆಲಸಕ್ಕೆ ಬರ್ರೆಂದು ಕರೀಬೇಕಂತ ಅದೀನಿ. ಅಂದುಕೊಂಡಗಾ.. ಕೆಲಸ ಆತ ಅಂದ್ರ ಆ ಗುಡಿಸಲ ಹತ್ರನಾ.. ಆ ನೆರಕಿಯೊಳಗಾ… ಆಕಿ ಜೊತಿ ಕಲತು ಒಂದು ಗಿಲ್ಲಿನ.. ಗಿಲ್ಲಿಕೊಂಡು ಬರಬೇಕಂತನಾ ಐತಿ.
ಪೀರಮ್ಮವ್ವಗ ಕಡ್ಡಿಪುಡಿ ಕಟ್ಟಿಸಿಕೊಂಡೆ. ಆಯವ್ವನಿಗೆ ಅದಂದ್ರ ಅದೇಟು ಆಸಿನೋ. ಯವಾಗನಾ ನೋಡು ಎಲಿ ಅಡಕಿ ಜೊತಿಗೆ ಸುರಿವಿಕೊಂಡು ಸ್ವಾಟಿತುಂಬಾ ತುಂಬಿಕೊಂಡು ನಮಲುತಾನಾ ಇರ್ತಾಳ. ಇಕೀನಾ ಹೆಂಗಾನಾ… ಮಾಡಿ ಆ ಹುಡುಗಿತಾಗ ಮಾತಾಡಿ ಬಾ ಅಂತ ಕಳಿಸಿದ್ರಾ…. ಆ ಹುಡುಗಿ ಒಪ್ಪಿಕ್ಯಂತಾಳೋ ಇಲ್ಲೋ…
ಮತ್ತೇ… ನನ್ನ ಚಿಂತಿ ನನಗಾ…
ನಾನು ಗುಡಿಸಲ ಹತ್ರಕ್ಕ ಹೆಜ್ಜಿ ಇಟ್ನೋ ಇಲ್ಲೋ ಅಲ್ಲಿರೋ ನಾಯಿಗುಳು ಬೊವ್…ಅಂತಾನಾ ಮುಗಿಬಿದ್ವು. ದಿಗಿಲು. ಓಡಿ ಹ್ವಾದರಾ… ಬೆನ್ನ ಹತ್ತುತಾವು. ಹೆಂಗ ಮಾಡೋದಪ್ಪಾ…ಅಂತಾ… ಅಡ್ಡಬಿದ್ದು ಸಂದಿ ತೂರಿ ತಡಿಕೆಗಳನ್ನ ದಬ್ಬಲು ಹೋಗಿ ನೀರ ತೊಟ್ಟಿಯೊಳಗೆ ದುಬುಕ್ಕನೇ ಬಿದ್ದೆ!
ತೊಟ್ಟಿಯ ಮುಂದೆ ನಿಂತ ನಾಯಿಗಳು ಬೋ….ವ್… ಎಂದು ವೊದರಾಟ ಏರಿಸಿದವು..
ತಟುಗಾ… ಎದ್ದು ಹಂಗಾ..ಅಣುಕಿ ನೋಡಿದೆ.
ಎದುರಲ್ಲೆ… ಈಕಿ!
ಈಕೀನಾ… ಶ್ಯಾಮಲ.
ತೊಟ್ಟಿಯೊಳಗ ಬಿದ್ದ ನನ್ನ ನೋಡಿ ಬಿದ್ದು ಬಿದ್ದೂ ನಗುತಿದ್ದಾಳೆ!
“ಛೇ” ಹೋಗಿ ಹೋಗಿ ಈಕಿ ಕಣ್ಣಮುಂದೇ ಬಿದ್ನಲ್ಲೋ ಥತ್…ಇವನೌವ್ನ್ ಹಡಿಬಿಟ್ಟಿ ಹೊಲಸು ನಾಯಿಗಳ್ನಾಢ…ಛಾ…” ಬೈಕೊಂಡೆ.
“ ಮೆಲ್ಲಕ ಏಳ್ರೀ ಸಾಮಿ.” ಎಬ್ಬಿಸಲು ಬಂದಳು ಆ ಹುಡುಗಿ. ನಾನೇ ರೋಷದಿಂದ ಗಡಬಡಿಸಿ ಮ್ಯಾಕ ಎದ್ದೆ.
ಅಲ್ಲಿಗೇ ಪೀರಮ್ಮವ್ವ ಗೂಡಾನು ಬಂದಳು.
“ ಏನ್ ಸಾಮಿ… ಹೇಳಿ ಕಳಿಸಿದ್ದರೆ ನಾವೇನು ಬರತ್ತಿರಲಿಲ್ಲವೇ…” ಅಂದಳು.
ತಂದಿದ್ದ ಆ ಚೀಟಿಯ ಕಡ್ಡಿಪುಡಿಯನ್ನು ಆಕಿ ಕೈಗೆ ಕೊಡತ್ತಾ “ಅಯ್ಯಾ…ತಟುಗು ನೋಡಿಕ್ಯಂಡು ಹೋಗಾನಾ ಅಂತನಾ ಬಂದನೇಳಬೇ… ಈ ಹಡಬೀ… ನಾಯಿಗಳ ಕಡೀಂದನಾ..ಕಡಕಂಡು ಬಿದ್ದೆ” ಎಂದೆ.
“ ಯಪ್ಪಾ…ಬಂಗಾರದಂತಾ.. ಬಟ್ಟಿಗಳೆಲ್ಲಾ ತೊಯ್ದು ಹೋಗ್ವಾವಲ್ಲೋ ಸಾಮಿ. ತರಾಪ್ಪೋ… ಬಿಸಿಲಿಗೆ ಹಾಕಿ ಅರಿಸಿಕೊಡುತೀನಿ” ಅಂತ ಇಸಗೊಂಡಳು.
ನಾ..ಆ ಹುಡುಗಿಯ ಕಡಿಗೇ ಕಣ್ಣ ಬಡಿಯದಂತೆ ನೋಡಿದೆ.
ಆಕಿ ಹಂಗಾ… ತಲೆಬಗ್ಗಿಸಿಕೊಂಡು ಗಡಿಸಲೊಳಗೆ ಹ್ವಾದಳು.
ಮತ್ತೆ ಸ್ವಲ್ಪೊತ್ತು ಬಿಟ್ಟು ಹೊರಾಗ ಬಂದು ಗಂಗವ್ವನ ಗುಡಿ ಹತ್ರ ಕಾರ್ತೀಕದ ದೀಪ ಹಚ್ಚೋದೈತಿ ಅಂತ ಸರಸರನೆ ಹ್ವಾದಳು.
ನಾ… ಆಕೆಯ ನಡಿಗೆಯ ಗತ್ತನ್ನು ನೋಡುತ್ತುಲೇ ಇದ್ದೆ.
“ ದೀಪಾರತಿ ಯದಕ್ಕವೋ…?”ಪೀರಮ್ಮವ್ವನನ್ನು ಕೇಳಿದೆ.
“ ಗಂಗಮ್ಮ ತಾಯಿಗೆ ಸಾಮಿ. ಆಕಿ ತಣ್ಣಗಿರಬೇಕಲ್ಲ. ಅಲ್ಲೇ ಅಜ್ಜಯ್ಯ ಅದಾನ. ಕೋಲಾಟ, ಭಜನೆ, ತತ್ವಪದ ಎಲ್ಲನೂ ಕಲಿಸುತಾನ. ಪರುವಿಗೆ ನಾವೆಲ್ಲ ಅಲ್ಲಿಗೇ ಹೊಕ್ಕಿವಿ. ಹಟ್ಟಿಯೊಳಗ ಚಿಕ್ಕರು,ದೊಡ್ಡರೂ ಎಲ್ಲಾ… ಅಲ್ಲಿಗೇ ಬರತಾರ. ಬಲು ಚಂದಾಗೈತೆ ಹೊಸ ಮೂರ್ತಿ” ಹೇಳಿದುಳು.
ಮಾತುಗಳ ನಡುವ ನೇತು ಹಾಕಿದ್ದ ಹಲಗಿ ಜಾರಿ ಗುಡಿಸಲ ಮೂಲೆಗೆ ತಾಗಿದ ಹಂಚಿನ ಮೇಲಿಂದ ನೆಲಕ್ಕ ಜಿಗಿದು ಬಿತ್ತು.
“ ಇದುನ್ನ ಯಾರು ಬಡಿತಾರ ಬೇ…?” ಕೇಳಿದೆ.
“ ನನ್ನ ಮಗ. ಕೊಂಡಯ್ಯ ಹೊಡಿತಾನ ಬಿಡಪ್ಪೋ….” ಗೊಣಗುತ್ತಾ ಅದನ್ನು ಎತ್ತಿಕೊಳ್ಳುತ್ತಾ ಹೇಳಿದಳು. ಹಲಿಗೆಯ ನಾದವೆಂದರೆ ನನಗಿಷ್ಟ ಕಣವ್ವ. ಚಿಗುರು ಹುಣ್ಣಿಮೆಯ ಮೆರವಣಿಗೆಯೊಳಗ ನಾನ್ಯಾವಾಗಲೂ ನೋಡೋದು ಅದ್ನೇ. ಬೆಂಕಿಗೆ ಹಲಗಿ ಕಾಸಿ ಭುಜಕ್ಕೆ ಹಾಕ್ಕೊಂಡು ಗಣಿಗೋಲುಗಳಿಂದ ಸುಮ್ಕಕಾ…ಹೊಡದರೆ ಅದು ಎಬಿಸೋ ನಾದಕ್ಕೆ ಯಾದು ಸಮ ಹೇಳು? ಕಿವಿಗೆ ಆನಂದವೇ ಬುಡು. ರೋಷ, ಆವೇಶಕ್ಕೆ,ಕುಣಿತಕ್ಕೆ ತಕ್ಕನಾದ ನಾದ ಅದು.
ಪೀರಮ್ಮವ್ವನ ಜೊತಿಗೆ ಮಾತಾಡುತ್ತಿರುವಾಗಲೇ ಗಂಗಮ್ಮನ ಗುಡಿ ಒಳಗಿನ ಸದ್ದು ಶುರುವಾಯಿತು. ಆ ಹುಡುಗಿಯ ದನಿ ಕೇಳುತಿದೆ.
“ಹರಿಕೆಯ ಕಟ್ಟಿಕೊಳ್ಳುತೇವೆ ಗಂಗಮ್ಮಾ ತಾಯಿ.
ಬೆಳ್ಳಿ ಮುಖವಾಡ ಮಾಡಿ ನೀಡುತ್ತೇವೆ ಗಂಗಮ್ಮಾ ತಾಯಿ”
ಬೆಳ್ಳಿ ಮೀಸೆಗಳ ಮಾಡಿಸಿಕೊಡುತೇವೆ ಗಂಗಮ್ಮಾ ತಾಯೀ
ಚಂದಾಗಿ ನಮ್ಮನ್ನು ನೋಡು ಗಂಗಮ್ಮಾ ತಾಯಿ..”
ನಾ ಬಂದ ಕೆಲಸ ಇನ್ನ ಕಲಸವಾಗದ ಕೆಲಸ ಅಂತಾ ಅರ್ಥವಾಯಿತು. ನಾ… ಅಲ್ಲಿಂದ ಹೊಂಟೆ. ತಾಯಿ ತನ್ನ ಮಗ ಕೊಂಡಯ್ಯನನ್ನು ಕರಕೊಂಡು ಹೊಂಟಳು. ದೂರದ ಗುಡಿಯಾಗ ಆಕಿಯ ಹಾಡು ಕೇಳುತ್ತಲೇ ಇತ್ತು.
“ ಮತ್ತೆ ತಪ್ಪಿಸಿಕೊಂಡಳು ಇವಳವೌನ್” ಅಂದುಕೊಂಡೆ.
***
ಮನೆಗೆ ಬಂದು ಮಲಗಿದಾಗಲೇ ಆ ಹುಡುಗಿ ನೆನಪಾಗಿದ್ದು. ಅಲ್ಲ….ನೆನಪಲ್ಲ…ನನ್ನ ನಿದ್ದಿಯ ಗಳಲ ತುಳಿಯುತಿದ್ದಾಳೆ. ಅಂದಕಂಡು ಮನಶ್ಯಾಂತಿಗಾಗಿ ಸಾಂಬನ ಹತ್ತಿರಕ್ಕ ಹ್ವಾದೆ.
“ ಏನ್ ಸಾಮಿ.. ಇಟು ರಾತ್ರಿಯೊಳಗಾ… ಬಂದಿರಿ” ಅನ್ನುತ್ತಲೇ ಹಾಸಿಗೆಯಿಂದ ಎದ್ದು ಕುಳಿತ.
“ ಮನಿ ಹತ್ರ ನಿದ್ದಿ ಹತ್ವದೇ..ಬಂದೆ ಬಿಡಾ.. ಆದ್ರೇ… ಆ ನಗೆಚಾಟಿಕೆಯ ಮಾತುಗಳ, ಯಾದೋ ಒಂದು ಕತೆ ಹೇಳೋ…ಪಾ…” ಅಂದೆ ಹಾಸಿಗೆ ಮೇಲೆ ಉರುಳುತ್ತಾ.
ನಿದ್ದೆ ಬರದಾಗಲೆಲ್ಲಾ ಸಾಂಬನ ಹತ್ತರಕ್ಕೆ ಬಂದು ಯಾವುದೋ ಒಂದು ಕತೆ ಕೇಳುತ್ತಾ ನಿದ್ದೆ ಹೋಗೋದು ನನಗ ಹಳೇ ಚಾಳಿ.
ಸಾಂಬ ಕತೆ ಹೇಳಾಕ ಶುರು ಮಾಡಿದ.
ಹಂಗಾನಂಗಾ…. ಒಂದು ಚೋಳರ ರಾಜ್ಯ. ಆ ರಾಜ್ಯದ ರಾಜನಿಗೆ ಒಂದು ಸಮಸ್ಯೆ ಬಂದಿತು. ಊರೊಳಗೆ ಬೇವಿನ ಮರ, ಅರಳೀ ಮರ ಕೂಡಿ ಹೆಣಕೊಂಡಿದ್ದವು ಆ…ಮರಗಳ ಹತ್ತಿರ ನಡುರಾತ್ರಿಯಲ್ಲಿ ಯಾವುದೋ ಹೆಣ್ಣು ದೆವ್ವ ಬಂದು ಕುಳಿತು ಬೋರೆಂದು ಅಳುತ್ತಾ ಇರುತ್ತದೆಂದು ಜನ ಬಂದು ಹೇಳಿದರು. ರಾಜನಿಗೆ ಆಶ್ಚರ್ಯವಾಯಿತು. ರಾಜ ಆ… ಹೆಣ್ಣು ದೆವ್ವ ಯಾರೋ, ಅದಕ್ಕೆ ಬಂದ ಕಷ್ಟವೇನೋ ತಿಳಿದುಕೊಳ್ಳಬೇಕು ಎಂದುಕೊಂಡನು.
ಒಂದು ರಾತ್ರಿ ಒಂಟಿಯಾಗಿ ಕುದುರೆಯ ಮೇಲೇರಿ ಆ ಹಾಳು ಬಿದ್ದ ಹಳೆ ಬಾವಿಯ ಮರದ ಕೆಳಗೆ ಬಂದನು. ಸ್ವಲ್ಪ ದೂರವಿರುವಾಗಲೇ ರಾಜನಿಗೆ ಹೆಣ್ಣು ದೆವ್ವದ ಅಳು ಕೇಳಿಸಿತು. ಊರು ಜನ ಹೇಳುವುದು ನಿಜವೇ ಅಂದು ಕೊಂಡು… ಕುದುರೆಯನ್ನು ಅದರ ಮುಂದಕ್ಕೆ ಓಡಿಸಿದನು. ಸಣ್ಣಗೆ ರಾಜನ ಮನವೂ ಕೂಡಾ ಹೆದರಿತು. ಕಾಲುಗಳು ನಡುಗಿದವು. ಆದರೂ ದೆವ್ವದ ಕಥೆ ಏನೋ ಎಂದು ನೋಡಬೇಕೆನಿಸಿತು.
ಕುದುರೆ ಓಡತೊಡಗಿತು. ಹೆಣ್ಣು ದೆವ್ವದ ಹತ್ತಿರ ಬಂದು ನಿಂತಿತು. ಉದ್ದನೆಯ ಕಪ್ಪು ಕೂದಲುಗಳನ್ನು ತಲೆತುಂಬಾ ಹರಡಿಕೊಂಡು ಅಳುತ್ತಿರುವ ಹೆಣ್ಣು ದೆವ್ವ ತಲೆಯೆತ್ತಿ ಓಮ್ಮೆಲೇ…..ರಾಜನ ಕಡೆ ನೋಡಿತು!
ರಾಜನಿಗೆ ಅದನ್ನು ನೋಡುವ ಧೈರ್ಯವೆಲ್ಲಿಯದು? ತಲೆ ಬಗ್ಗಿಸಿಕೊಂಡೇ.. ಕೇಳಿದನು.
“ ಹೆಣ್ಣು ದೆವ್ವವೇ… ಏನು ನಿನ್ನ ಸಮಸ್ಯೆ ? ನನ್ನ ರಾಜ್ಯಕ್ಕೆ ಏಕೆ ಬಂದೆ!”
ಹೆಣ್ಣು ದೆವ್ವ ದುಃಖದಿಂದಲೇ ಬಾಯಿ ಬಿಟ್ಟಿತು.
“ ರಾಜನೇ… ತಲೆ ತಲಾಂತರಗಳಿಂದ ನಮ್ಮ ಹೆಣ್ಣುಜಾತಿ ಗಂಡಸರ ಕೈಯೊಳಗೆ ಸಿಕ್ಕು ಮೋಸಹೋಗುತ್ತಿದೆ. ಆದರೂ ನಮ್ಮ ಕಣ್ಣೀರನ್ನ ಯಾರೂ ಅಳಸಲಾಗಲಿಲ್ಲ. ನಮ್ಮ ಕಷ್ಟಗಳು ತೀರಲಿಲ್ಲ” ಎಂದು ಬೋರೆಂದು ಮತ್ತೆ ಅಳತೊಡಗಿತು.
ಆ ಕೆಲಸಕ್ಕೆ ಬಾರದ ರಾಜನಿಗೆ “ದೆವ್ವವಾದರೂ ಹೆಣ್ಣೇ ಅಲ್ಲವೇ?” ಎಂದು ತಿನ್ನೋ ಅನ್ನವ ಹಾಳುಮಾಡೋ…ಬುದ್ಧಿ ಹುಟ್ಟಿತು.
ರಾಜ ಸ್ವಲ್ಪ ಧೈರ್ಯದಿಂದಲೇ “ ನಿನ್ನ ದುಃಖವನ್ನು ನೋಡಲಾಗದು ಬಿಡು. ಆದರೆ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ” ಎಂದನು.
“ ಇದೇ ಮಾತ ಇಂದಿಗೂ ಕಳಿಂಗ ರಾಜ್ಯದ ಕಡೆಯಿಂದ ಚೋಳ ರಾಜ್ಯದ ತನಕ ಇರುವ ರಾಜರೆಲ್ಲರೂ ಹೇಳಿದರು. ನನ್ನ ಪಾಡಿಗೆ ನಾನು ಅಳುತ್ತಲೇ ಇರಬೇಕೆಂದರೂ ತಮ್ಮ ಹಾಳು ಬುದ್ಧಿಯಿಂದಲೇ ಅಳು ಆರದಂತೆಯೇ ನೋಡುತಿದ್ದಾರೆಂದು ದೆವ್ವ ವಾಗಿದ್ದರೂ ಈ ಹೆಣ್ಣು ಜನ್ಮವಾಗಿ ಇರಬಾರದೆಂದು ಅದು ಅಳುತ್ತಾ…” ಮಾಯವಾಗಿಹೋಯಿತಂತೆ.
ಸಾಂಬಶಿವಾ ಕಥೆ ಮುಗಿಸಿ ನಗತೊಡಗಿದನು. ಅವನ ನಗು ನೋಡಿ ನನಗೂ ನಗುಬಂದಿತು.
“ ಈ ಕಥೆ ನನ್ನ ಮೇಲೆಯೇ… ಹೇಳಿಯಲ್ಲವೇ ಸಾಂಬ” ಅವನನ್ನು ಕೇಳಿದೆ.
“ ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡಿದ್ನಂತೆ ಹಂಗಾತು ನೋಡಪ್ಪ ನೀನು ಕೇಳೋದು.” ಎಂದನು ಸಾಂಬ.
ನಗುತ್ತಲೇ ನಿದ್ದೆಯೊಳಗೆ ಜಾರಿಹೋದೆನು.
ಮುಂಜಾನೆಯೇ ಅಪ್ಪ ಕರೆಯಾಕ ಹತ್ಯಾರೆಂದು ಹೊಂಟೆ.
ದೊಡ್ಡ ಶರಣಪ್ಪ ಬಂದಿದ್ದಾನೆ.
“ ಆ ಭೂಮಿಗಳ ಪಟ್ಟ ಕಾಗದಗಳನ್ನು ಸ್ವಲ್ಪ ನೋಡು ಎಂದು ಹೇಳಿದ” ಅಪ್ಪ.
ಮಾಡಿಮೇಲೇರಿ ಬೀರುವಿನೊಳಗೆ ಹುಡುಕಿ ಬಟ್ಟೆ ಚೀಲದಲ್ಲಿ ಇಟ್ಟಿದ್ದ ಕಾಗದಗಳ ಕಟ್ಟುಗಳನ್ನು ತಗೊಂಬಂದು ಕೂತೆ. ಒತ್ತೆ ಇಟ್ಟ ಭೂಮಿಗಳು, ಮಾರಿದ ಭೂಮಿಗಳು, ಛತ್ರದ ಹತ್ತಿರದ ಬೀಳು ಭೂಮಿಗಳು ಎಲ್ಲವುಗಳ ಬಗ್ಗೆ ಮಾತಾಡತೊಡಗಿದೆವು.
“ ಕಲ್ಲು ಗುಡ್ಡದ ಕಡೆಯ ಚಂಡು ಹೂ ತೋಟ ಮಾರೆಂದು “ ಮಾತುಗಳ ಮದ್ಯೆ ಕೇಳಿದ ದೊಡ್ಡ ಶರಣ.
“ ನಿನಗೆ ಎಲ್ಲಿ ಬೇಕಂತಿಯೋ ಅದನ್ನ ತಗ ಹೋಗಾ…” ಎಂದನು ಅಪ್ಪ.
ನಾನೇನೂ ಮಾತಾಡಲಿಲ್ಲ.
“ ಏನ್ ತಮ್ಮ …ಸುಮ್ಮಕದೀಯಾ” ಎಂದ ಶರಣಪ್ಪ.
ಅಪ್ಪ ನನ್ನ ಕಡೆ ನೋಡಿದ.
ನಾ ತಲೆಬಾಗಿಸಿಕೊಂಡೆ.
ಇಷ್ಟರೊಳಗೆ ಓಡು ಓಡುತ್ತಲೇ ತೋಟದ ಮನಿಕಡಿಗೆ ಓಬಳೇಸು ಓಡಿ ಬಂದ.
“ ಏನಾ ಏನ್ ಸುದ್ದಿ? ಹಿಂಗ್ ಓಡಿಬರಕತ್ತಿಯಲ್ಲ.” ಕೇಳಿದ ಆತುರವಾಗಿ.
“ ಅಣಾ! ತ್ವಾಟದ ಹತ್ರ ನಮ್ಮ ಸಾಂಬುನ್ನ ಕರಿ ನಾಗರಾವು ಕಡುದು ಬುಟ್ಟತಿ” ತತ್ತರ ಬಿತ್ತರ ಮಾಡುತ್ತಾ ಹೇಳಿದನವ.
“ ಅಯ್ಯಯ್ಯೋ….ಈಗ ಎಂಗೈತೋ…” ಗಬಕ್ಕನೇ ಎದ್ದು ಕೇಳಿದೆ.
ಓಬಳೇಶ “ ಇನ್ನೆಂಗೈತನ್ನಾ. ಅವನು ಅಲ್ಲೇ ವಿಲವಿಲ ವದ್ದಾಡಿ ಬಿಳಿ ಬುರುಗು ತಂದುಕಂಡು ಹ್ವಾಗಿ ಬಿಟ್ಟಾನೋ” ಅಂದು ಅಳತೊಡಗಿದ.
ಎಲ್ಲರೂ ತೋಟದ ಕಡಿಗೆ ಓಡಿದಿವಿ.
ಆ.. ತೋಟದೊಳಗೆ ಕೆಲಸ ಮಾಡೋರೆಲ್ಲರೂ ಬಂದು ಗುಂಪುಗೂಡಿದ್ದರು. ಏನೇನೋ ಮಾತಾಡಿಕೊಳ್ಳುತಿದ್ದರು.
ಅಳುತಿದ್ದರು.
ಮುತ್ತಿಕೊಂಡರು.
ಸಾಂಬ ಚೆಂಡು ಹೂ ಗಿಡಗಳ ನಡುವೆಯೇ ಶವವಾಗಿಬಿಟ್ಟಿದ್ದನು. ಶರೀರವೆಲ್ಲಾ ಕರ್ರಗಾಗಿತ್ತು. ಬಾಯೊಳಗಿನ ನೊರೆ ಇನ್ನೂ ಹಸಿಯಾಗಿತ್ತು.
ನನಗೆ ಅಳು ತಡೆಯಲಾಗಲೇ ಇಲ್ಲ.
ನಮಮ್ಮ ಕಣ್ಣು ಸುತ್ತಿ ಬಂದು ಬಿದ್ದುಹೋದಳು.
ಜನರ ಕಡಿಗೆ ನೋಡಿದೆ.
ಪೀರಮ್ಮವ್ವ, ಶ್ಯಾಮಲ ಇನ್ನಾ ಗುಡಿಸಲ ಕೂಲಿಗಳೆಲ್ಲರೂ ಅಳುತಿದ್ದಾರೆ.
ಶರಣಪ್ಪ “ ಎಲ್ಲಾರೂ ಯಾವಾಗೋ ಒಂದು ಸಲ ಹ್ವಾಗಾರೇ ಅಲ್ಲವಾ. ತಟಗು ಹಿಂದೂ ಮುಂದೂ ಅಟೇಯಾ” ವೇದಾಂತ ಹೇಳಿದನು.
ಅಪ್ಪ “ ಮುಂದೇನು ಮಾಡಬೇಕೋ ನೋಡ್ರೀ. ಆ ಕಾರ್ಯಗಳನ್ನು ಎಲ್ಲಾ ಘನವಾಗಿ ಮಾಡಿ. ಇಲ್ಲೇ ಗುಣಿ ತೆಗೆದು ಊತು. ಸಮಾಧಿ ಕಟ್ಟರಿ.” ಎಂದು ಹೇಳಿದನು.
ಕೆಲಸದವರು ರಂಗದೊಳಕ್ಕೆ ಇಳಿದರು.
ನನಗೇನೋ ಅಳುವಿನ ಜೊತಿಗೆ ನೋವು ಬಾಧಿಸುತಿತ್ತು.
ನೋಡಲಾಗದೇ ಹೋದೆ.
ಹಂಗೇ ಅಲ್ಲಿಂದ ಬಂದುಬಿಟ್ಟೆ.
***
ದಿನಗಳು ಕಳೆಯುತ್ತಲೇ ಇವೆ….
ಸಾಂಬನಿಲ್ಲದ ನೋವು ಹಾಗೇ ಇದೆ.
ರಾತ್ರಿಗಳು ನಿದ್ದೆ ಕೂಡಾ ಬಾರದಾದವು. ನನ್ನೊಳಗೆ ನಾನೇ ಕನವರಿಸುತ್ತಿರುವೆ.
ಆ ಚಂಡು ಹೂವಿನ ತೋಟಕ್ಕೂ ಕೂಡಾ ಸರಿಗೆ ಹೋಗಲಾಗಲಿಲ್ಲ. ತೋಟ ಕಾಯುತ್ತಿರುವ ಓಬಳೇಸಿಯೇ.. ಎಲ್ಲಾ ನೋಡಿಕೊಳ್ಳುತಿದ್ದಾನೆ.
ಶರಣನಿಗೆ ಆ ಜಾಗದ ಮೇಲೆ ಕಣ್ಣು ಬಿದ್ದಿದೆ.
ದಿನವೂ ನಮ್ಮ ಮನೆಯ ಕಡೆ ತಿರುಗುತಾ ಇದ್ದಾನೆಂದು ತಿಳಿದಿದೆ.
ಅಮ್ಮನಿಗೆ “ಆ ಚೆಂಡು ಹೂತೋಟದ ಜಾಗವನ್ನು ಶರಣನಿಗೆ ಮಾರಿದರೆ ನಂದೇನೂ ತಕರಾರಿಲ್ಲ” ಅಂತಾ ಅಪ್ಪನಿಗೆ ಹೇಳೆಂದು ಹೇಳಾನ.
ಅಮ್ಮ ಸುಮ್ಮಗದಾಳ.
“ಮಾರೋದು ನಿನಿಗಿಷ್ಟ ಇಲ್ಲೇನವ್ವಾ?” ಅಂತ ಕೇಳಿದೆ.
“ ಆ ತೋಟ ಅಂದ್ರೆನೇ ನನಗಿಷ್ಟ ಕಣ್ ಮಗನೇ. ಅದನ್ನ ಮಾರಬ್ಯಾಡರಪ್ಪಾ…..” ಅಂತ ಕಣ್ಣೀರಿಟ್ಟಳು.
ತಿರಗದಿನ ನಾನೇ ಶರಣಪ್ಪನ ಕಂಡು “ ಆ ತೋಟವನ್ನ ಮಾರೋ ಮಾತೇ ಇಲ್ಲಪ್ಪೋ” ಅಂತ ಕಡ್ಡಿ ಮುರದಂಗ ಹೇಳಿ ಬಂದು ಬಿಟ್ಟೆ.
ಮಧ್ಯಾನ್ಹ ಕಣದ ಕೆಲಸಕ್ಕೆ ಪೀರಮ್ಮವ್ವ ಬಂದಳು. ಈ ತಿಂಗಳ ಒಳಗೇ ʼಚಿಗುರು ಹುಣ್ಣಿಮೆʼ ಹಬ್ಬವೆಂದು ಹೇಳಿದಳು. ಅರ್ಧ ಚೀಲ ಅಕ್ಕಿ, ಹಸಿ ಶೇಂಗಾವನ್ನು ತಗಂಡೋಗು ಎಂದು ನೀಡಿದೆ. ಅಷ್ಟು ದೂರ ಹೋಗಿ ಮತ್ತೆ ಹಿಂದಕ್ಕೆ ಬಂದಳು. ಹಬ್ಬಕ್ಕೆ ನನ್ನನ್ನೂ ಕೂಡಾ ಬಾ ಎಂದು ಹೇಳಿದಳು.
“ ಎದಕ್ಕ ಹೇಳವ್ವೋ..” ಅಂತ ಅಂದೆ.
“ ಹಂಗಂದ್ರ ಎಂಗಯ್ಯೋ. ಮದುವೆಗೆ ಬಂದ ಹುಡುಗ. ಚಿಗುರು ಹುಣ್ಣಿಮಿಯೆಲ್ಲಾ ನಿಮ್ಮದೇ ಅಲ್ಲವಾ. ಶಾಮಲಾ ಕೂಡಾ ಇರ್ತಾಳೆ. ಗಂಗಮ್ಮ ದೇವರ ಮೆರವಣಿಗೆ ಬಲು ಬೇಷಿ ನಡಿತಾತಿ. ಮರೀದಂಗ ಬಾರಯ್ಯೋ” ಅಂತ ಹೇಳಿ ಮಾಯವಾಗಿ ಹೋದಳು.
ಪೀರಮ್ಮವ್ವ ʼಶಾಮಲಾʼ ಅನ್ನೋ ಹೆಸರಿನ ನೆನಪು ಹೇಳೋಸರಿಗೆ ಮತ್ತೆ ಒಡಲೊಳಗೆ ನಿದ್ದೆಹೋಗಿದ್ದ ನರಗಳೆಲ್ಲಾ ಒಂದು ಸಾರ್ತಿ ಜುಮುಕ್ಕು ಅಂದವು.
ಸ್ವಲ್ಪ ಕತ್ತಲಾದಮೇಲೆ ಹೊರಟೆ ʼಅದು ರಾತರಿ ಮಾಡೋ ಹಬ್ಬವಾದ್ದರಿಂದ ಆಕಿ ಸಿಕ್ಕರೂ ಸಿಗುತ್ತಾಳೆ.ʼ ಅನಿಸುತ್ತದೆ.
ಗುಡಿಸಲ ದಾರಿಯ ಕಡೆ ಸಣ್ಣಗೆ ಹೆಜ್ಜೆ ಹಾಕತಿದ್ದೆ.
ಶಾಮಲಳ ಚಲುವು ನೆನಪಾದಂಗೆಲ್ಲಾ… ಹೆಜ್ಜೆಗಳು ಇನ್ನೂ ಜೋರಾಗಿ ಬೀಸತೊಡಗಿದವು.
ಬೆಳುದಿಂಗಳು ಮಲ್ಲಿಗೆ ಹೂಗಳ ಕಂಪನ್ನು ಸೂಸುತ್ತಿದೆ.
ಗಂಗಮ್ಮನ ಗುಡಿಯ ಬಳಿ ದೊಡ್ಡದಾಗಿ ಹಲಗೆಗಳು ಮೊರೆಯುತ್ತಿವೆ.
ಭಜನೇ ಪದಗಳ ಗುರುಸಾಮಿಯ ಏರು ದನಿ ಕೇಳುತ್ತಿದೆ.
ಕಾಲುದಾರಿ ಗುಂಟಾ ಹೆಜ್ಜೆಗಳು ಸರಿದಂಗೆಲ್ಲಾ….
ಯಂಗಾನ ಆಗಲಿ, ಈ… ಸಾರಿ ಆಕಿಯನ್ನ ಅನುಭವಿಸಲೇ ಬೇಕೆಂಬ ಮತ್ತು ಮುರಿದೆದ್ದು ನಡಿಗೆ ವೇಗವನ್ನು ಹೆಚ್ಚಿಸಿದೆ.
ಗುರುಸಾಮಿಯ ದನಿ “ ಕನ್ನೆ ಹುಡುಗಿಯರೆಲ್ಲಾ ಬಲು ಚಂದವಾಗಿ ಈ ಚಿಗುರು ಹುಣ್ಣಿಮೆಯ ದಿನ ನವಧಾನ್ಯಗಳ ಮೊಳಕೆ ಸಸಿಗಳನ್ನು ಹೊತ್ತಿದ್ದಾರೆ. ತುಂಬಾ ಚನ್ನಾಗಿದೆ. ನೀವು ಪಟ್ಟ ಶ್ರಮವೆಲ್ಲಾ ತಿಳಿದಿದೆ. ನಿಮಗೆ ಒಳ್ಳೆಯ ಗಂಡಂದಿರು ಸಿಗಲಿ ಎಂದು ಆ ಗಂಗಮ್ಮ ತಾಯಿಯ ಸಾಕ್ಷಿಯಾಗಿ ಕೋರಿಕೊಳ್ಳುತ್ತೇನೆ. ನಾನ ಕೊಟ್ಟ ಅಕ್ಕಿಯೊಳಗೆ ಬೆಲ್ಲ, ಕರಿ ಎಳ್ಳು ಕಲೆಸಿದ ಪ್ರಸಾದ ತೆಗೆದುಕೊಳ್ಳಿ. ನಿಮಗಿಷ್ಟವಾದವರಿಗೆ ನೀಡಿರಿ. ಇಲ್ಲಿ ಮಣ್ಣ ಹಣತೆಯೊಳಗೆ ಬೆಳಗೋ ದೀಪಗಳನ್ನು ನಿಮಗಿಷ್ಟವಾದವರಿಗೆ ನೀಡಿ ಆ ಗುಡ್ಡದ ಕೆರಿಯೊಳಗೆ ಬಿಟ್ಟುಬಿಡಿ. ನಿಮ್ಮ ಕೋರಿಕೆ ತೀರುತ್ತದೆ.” ಎಂದದ್ದು ಇನ್ನೂ….ಗಟ್ಟಿಯಾಗಿ ಕೇಳಿಸುತ್ತಿದೆ.
ಭಜನೆ ಪದವು ಮತ್ತೆ ಶುರುವಾಯಿತು. ಗುರುಸಾಮಿ ಹಾಡು ಆರಂಭಿಸಿದನು.
“ ರಾವಣಾ ನಿನ್ನ ಉರುಮೆಯನ್ನು ಸಾಕುಮಾಡಯ್ಯ
ಅಗ್ನಿಯಂತಹ ಸೀತೆಯ ಮೇಲೆ ಮನಸು ನಿನಗೆ ಯಾಕಯ್ಯಾ
ತದ್ದಿಂಕಿ ತಾಂತೈ… ತದ್ದಿನಕ ತಾಂತೈ…”
ಇನ್ನು ಇದೇ ಸರಿಯಾದ ಸಮಯ.
ಅಕೆಯು ಕೂಡಾ ದೀಪ ತೆಗೆದುಕೊಂಡು ಕೆರೆಯ ಕಡೆಗೆ ಹೋಗುತ್ತಿರುತ್ತಾಳೆ. ಆ ಗುಡ್ಡದ ದಾರಿ ಮಧ್ಯೆ ಕಾವಲು ಕಾದು ಮರಗಳ ಕಡೆಗೆ ಎತ್ತಿಕೊಂಡೊಯ್ದರೆ ಆ ಹುಡುಗಿ ಇನ್ನೇನು ಮಾಡ್ತದೆ?
ಅಡ್ಡದಾರಿಯ ಗುಂಟಾ ಜೋರಾಗಿ ನಡೆಯತೊಡಗಿದೆ.
ಬೆಳದಿಂಗಳು ಮಳೆಯಂತೆ ಸುರಿಯುತ್ತಿದೆ.
ಏನಾನ ಆಗಲಿ ಈ ಸಲ ಆ ಹುಡುಗಿಯ ಅಂದವನ್ನ ಅನುಭವಿಸಲೇ ಬೇಕು.
ಮನಸು ಉಕ್ಕಿಹರಿಯುತ್ತಿದೆ.
ಹುಣಿಸಿ ಮರದ ಕಡೆಯಿಂದ ಅಡ್ಡ ತೂರಿ ಕೆರೆಯ ಕಡೆಗೇ ಕಣ್ಣು ನೆಟ್ಟು ಕಾವಲು ಕಾಯತೊಡಗಿದೆ.
ದೂರದಲ್ಲಿ …..
ಹುಡುಗಿಯರು ಕೈಗಳಲ್ಲಿ ದೀಪಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ.
ಆ… ಹುಡುಗಿಯೂ ಕೂಡಾ …
ಇವಳವ್ವನ್… ದಾರಿಮೇಲೆ ಈ ದಿನ….! ಅಂದುಕೊಂಡೆ.
ಆಕೆ ಬರತಾ ಅದಾಳ.
ಹತ್ತರಾ… ಇನ್ನಾ ಹತ್ತರಾ…
ದೀಪದ ಬೆಳಕಿನೊಳಗೆ ಆಕೆಯ ಅಂದ ಇನ್ನೂ ಚಲುವಾಗಿ ಉಕ್ಕಿಹರಿಯುತ್ತಿದೆ.
ಹತ್ತರಕ್ಕೆ ಬರಕತ್ಯಾಳ…
ಬರ್ತಾ ಅದಾಳ…
ಕೆರಿ ಇನ್ನೇನು ತಲುಪಿದಳು ಎಂಬುವುದರೊಳಗೇ ಆಕಿಯ ದಾರಿ ಬದಲಾಯಿತು!
ಆ ಪಕ್ಕದ ಬಾರಿ ಹಣ್ಣಿನ ಪೊದೆಯ ಹತ್ತಿರದ ಗುಡ್ಡದ ಹಾದಿ.
ಆ… ದಾರಿ ಹಿಡಿದಳು!
ನಡಿಗೆ ಜೋರಾಯಿತು.
ಕೈಯೊಳಗಿನ ದೀಪ ಆರಿಹೋಗದಂತಾ ಅವಳು ನಡಿಗೆಯನ್ನ ಇನ್ನಾ ಜೋರು ಮಾಡಿದಳು.
ಒಂಟಿಯಾಗಿ ಹೋಗುತಿದ್ದಾಳೆ.
ನನಗೇನೂ ಅರ್ಥವಾಗುತ್ತಿಲ್ಲ.
ಆಕೆಯ ಜೊತೆಗೆ ಬಂದ ಹುಡುಗಿಯರೆಲ್ಲಾ ಕೆರೆಯೊಳಗೆ ದೀಪಗಳನ್ನು ಬಿಡುತಿದ್ದಾರೆ.
ನಾನು ಹುಣಿಸೇ ಮರದ ಪೊದೆಯೊಳಗಿಂದ ಮೇಲೆ ಎದ್ದು ಆ ಹುಡುಗಿ ಹೋಗುತ್ತಿರುವ ದಾರಿಯ ಕಡೆಗೆ ಹೊರಟೆ.
ಆಕೆ ಕಲ್ಲು, ಮುಳ್ಳು , ಹಳ್ಳ ಏನನ್ನೂ ನೋಡದಂತೆ ಹೋಗುತಿದ್ದಾಳೆ.
ನಾನೂ ಆಕೆಯ ಹಿಂದೆಯೇ ಹೋಗತೊಡಗಿದೆ.
ಆ ಹುಡುಗಿ ಕಲ್ಲಿನ ಗುಡ್ಡ ಏರಿದಳು.
ನನ್ನ ತಲೆ ಗಿಮಗುಟ್ಟಿ ದಿಕ್ಕು ತಿಳಿಯದಂಗಾತು.
ಆ ಹುಡಗಿಯನ್ನ ಹಿಡಿದು ಅನುಭವಿಸಬೇಕೂ ಅನ್ನೋ ಉರುಕಾಟ ಉರಿಯ ಹಾಗೆ ಏಳತಾ ಇದೆ.
ಗುಂಡಿಗೆ ಕುಣಿದಾಡುತ್ತಿದೆ.
ಆ ಹುಡುಗಿ “ ಬೀಸುವ ಗಾಳಿಯೊಳಗೂ ಕೈಗಳೊಳಗಿನ ದೀಪ ಆರಿಹೋಗದಂತೆ ಏರುತಾನೇ ಅದಾಳ”.
ನನಗೇನೋ ಎಲ್ಲಿಲ್ಲದ ಭಯ ಹಿಡಕೊಂಡಿತು.
ಆದರೂ…. ಏರುತೊಡಗಿದೆ.
ಕಾಲಿಗೆ ನೆಗ್ಗಲಿ ಮುಳ್ಳು ಚುಚ್ಚಿತು.
ಪಕ್ಕದ ಬಂಡೆಯ ಮೇಲೆ ಕುಂತು ಕಿತ್ತೆ. ಮುಳ್ಳಿನ ಜೊತಿಗೆ ರೈತವೂ ಕೂಡಾ ಹೊರಕ್ಕೆ ನುಗ್ಗಿತು!
ಅಷ್ಟೊತ್ತಿಗೇ ಆ ಹುಡುಗಿ ಕಲ್ಲುಗುಡ್ಡವನ್ನ ಇಳಿದಳು.
ಪಕ್ಕದಲ್ಲೇ ಇರೋ ಕಾಡಿನ ಕಡಿಗೆ ಹೊಂಟಳು.
ನಾನೂ ಕುಂಟುತ್ತಾ ಕುಂಟುತ್ತಾ ಇಳಿಯ ಹತ್ತಿದೆ.
ಹುಡುಗಿಯ ಚಂಡು ಹೂಗಳ ವಾಸನಿ ನನ್ನನ್ನು ಸುತ್ತಿಕೊಂಡಿತು.
ಆ ಹುಡುಗಿ ಹೋಗುತಾ…ಹೋಗುತಾ… ನಿಂತುಬುಟ್ಟಳು!
ಎದೆ ಒಡೆದವಳಂತೆ ಅಳತೊಡಗಿದಳು.
ಕೈಯೊಳಗಿನ ದೀಪವನ್ನು ಕೆಳಗೆ ಇಟ್ಟಳು.
ಸಮಾಧಿ!
ನಮ್ಮ ಸಾಂಬನ ಸಮಾಧಿ!
ನನಗೆ ಕಾಲೂ ಕೈಯಿ ಆಡದಾಯಿತು.
ಶಿಲೆಯಂಗೆ ಅಲ್ಲೇ ನಿಂತುಬಿಟ್ಟೆ.
ಆ ಹುಡುಗಿ ಅಳುತ್ತಲೇ ಇದ್ದಳು.
ಕೈಗಳಲ್ಲಿರುವ ಬಳೆಗಳ ಹೊಡೆದುಕೊಂಡಳು.
ಹಣೆಯ ಕುಂಕುಮ ಅಳಿಸಿಕೊಂಡಳು.
ಬಿದ್ದು ಬಿದ್ದು ಅಳತೊಡಗಿದಳು.
ಪೈಟದ ಚುಂಗಿನಿಂದ ಬೆಲ್ಲದ ಉಂಡೆಯನ್ನು ತೆಗೆದು ತನ್ನ ಇಷ್ಟದವರಿಗೆ ತಿನಿಸುವಂತೆಯೇ…. ಸಮಾಧಿಗೆ ಎಡೆ ಹಿಡಿದಳು!
ನಾನು ನಿಂತಿರುವ ಜಾಗದಲ್ಲೇ ಕುಸಿದು ಕುಂತೆ.
ಮತ್ತೆ ಮಳೆಹನಿಗಳು ಸುರುವಾದವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243