ಬಹಿರಂಗ

ಪ್ರಗತಿಪರರು ಜಾತಿವಾದಿ ಸಾಹಿತ್ಯ ಪರಿಷತ್ತನ್ನು ಬೆಂಬಲಿಸಿದ್ದು ದುರ್ದೈವದ ಸಂಗತಿ

Published

on

ರ್ನಾಟಕದ ಪ್ರಗತಿಪರ ಬುದ್ಧಿಜೀವಿಗಳು ಸಾಮಾಜಿಕ ಜವಾಬ್ದಾರಿಯುಳ್ಳವರು ಮತ್ತು ವಿವೇಕವುಳ್ಳವರು ನಿಜ; ಆದರೆ ಇವರು ಅನೇಕ ಸಲ ಸಂದರ್ಭದ ಒತ್ತಡದ ಕೂಸಾಗಿ ಮೋಸ ಹೋಗುತ್ತಾರೆ. ಇದಕ್ಕೆ ಪ್ರಮುಖವಾಗಿ 3 ಕಾರಣಗಳಿವೆ.

1. ಮಾಹಿತಿಗಳ ಕೊರತೆ

2. ತಮ್ಮ ರೆಡಿಮೇಡ್ ತೀರ್ಮಾನದ ಮೂಲಕ ಹೊರಗಿನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವುದು.

3. ಪಕ್ಷರಾಜಕಾರಣದ ಹಿತಾಸಕ್ತಿಯನ್ನು ಪ್ರಶ್ನೆಯಿಲ್ಲದೆ ಬೆಂಬಲಿಸುವುದು.

ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಪ್ರಗತಿಪರರು ಪ್ರತಿಕ್ರಿಯಿಸಿರುವ ವಿಧಾನ ಈ ರೀತಿಯದು.

  1. ಚಿಕ್ಕಮಗಳೂರು ಜಿಲ್ಲೆಯ ಪ್ರಗತಿಪರರು ಈ ಹಿಂದಿನ 2 ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಬಹಿಷ್ಕರಿಸಿ ಪರ್ಯಾಯ ಸಮ್ಮೇಳನ ನಡೆಸಿದ್ದು ಯಾಕೆ?
  2. ಶೃಂಗೇರಿಯ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸುವುದಿಲ್ಲ; ಆದರೆ ಕಲ್ಕುಳಿ ವಿಠಲ ಹೆಗಡೆ ಅಧ್ಯಕ್ಷ ಆಗುವುದನ್ನು ವಿರೋಧಿಸುತ್ತೇವೆ ಎಂದು ಒಂದು ಗುಂಪು ಪ್ರತಿಭಟಿಸಲು ಕಾರಣವೇನು?
  3. ಜಿಲ್ಲೆಯಲ್ಲಿ ಬೆಳವಾಡಿ ಮಂಜುನಾಥ ಎಂಬಾತ ಯಾವ ದೊಡ್ಡ ಸಾಹಿತಿ?
  4. ಸಮ್ಮೇಳನದಲ್ಲಿ ಹಾಸ್ಯಗೋಷ್ಠಿಗಳ ಅವಶ್ಯಕತೆ ಇತ್ತೆ? ಸಮ್ಮೇಳನದಲ್ಲಿ ಸಿ.ಎ.ಎ. ಮತ್ತು ಎನ್‍.ಆರ್.ಸಿ. ಬಗ್ಗೆ ಯಾಕೆ ಚರ್ಚೆ ಇರಲಿಲ್ಲ?
  5. ಜಿಲ್ಲಾಧ್ಯಕ್ಷ ಕುಂದೂರು ಅಶೋಕ ಯಾವ ದೊಡ್ಡ ಸಾಹಿತಿ?

1. ನಾಡಿನ ಬೇರೆ ಯಾವ ಜಿಲ್ಲೆಯಲ್ಲೂ ಜಿಲ್ಲಾ ಸಮ್ಮೇಳನವನ್ನು ಬಹಿಷ್ಕರಿಸಿ ಪರ್ಯಾಯ ಸಮ್ಮೇಳನ ನಡೆದಿಲ್ಲ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಕಳೆದ 2 ಸಮ್ಮೇಳನಗಳನ್ನು ಪ್ರಗತಿಪರರು ಬಹಿಷ್ಕರಿಸಿ ಪರ್ಯಾಯ ಸಮ್ಮೇಳನ ನಡೆಸಿದ್ದಾರೆ. ಆ ಸಮ್ಮೇಳನದಲ್ಲಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಎ. ಮುರಿಗೆಪ್ಪ, ಪ್ರೊ. ರಾಮಸ್ವಾಮಿ, ಪ್ರಗತಿಪರ ಚಿಂತಕರಾದ ವಿ.ಎನ್. ಲಕ್ಷ್ಮಿನಾರಾಯಣ, ಶಿವಸುಂದರ್, ಆರ್. ಮಾನಸಯ್ಯ, ಎಚ್.ಡಿ. ಉಮಾಶಂಕರ್ ಮತ್ತು ರಮೇಶಚಂದ್ರ ದತ್ತ ಮುಂತಾದವರು ವಿಚಾರ ಮಂಡಿಸಿದ್ದಾರೆ. ಜಿಲ್ಲೆಯ ಸಾಹಿತ್ಯ ಪರಿಷತ್ತು ಸಂಪೂರ್ಣ ಒಕ್ಕಲಿಗರದ್ದಾಗಿದೆ. ಇವರು ತಮ್ಮ ಜಾತಿಯ ವರ್ಗ ಹಿತವನ್ನು ಕುರಿತು ಮಾತ್ರ ಚರ್ಚೆ ಮಾಡುತ್ತಾರೆ. ತಮ್ಮ ಜಾತಿಯವರನ್ನು ಮಾತ್ರ ಸಮ್ಮೇಳನದಲ್ಲಿ ಭಾಷಣ ಮಾಡಲು ಕರೆಯುತ್ತಾರೆ. ಇದರಿಂದಲೇ ಈ ಹಿಂದಿನ ಎರಡು ಸಮ್ಮೇಳನಗಳನ್ನು ಇಲ್ಲಿಯ ಪ್ರಗತಿಪರರು ಬಹಿಷ್ಕರಿಸಿ ಪರ್ಯಾಯ ಸಮ್ಮೇಳನ ನಡೆಸಿದರು.

2. ಒಕ್ಕಲಿಗ ಜಾತಿಯ ಜಾತಿವಾದಿ ವೇದಿಕೆಯಾಗಿರುವ ಜಿಲ್ಲಾ ಕ.ಸಾ.ಪ. ವಿಠಲ ಹೆಗಡೆಯವರನ್ನು ಒಕ್ಕಲಿಗ ಜಾತಿಯವರು ಎಂಬ ಕಾರಣಕ್ಕೆ ತನ್ನ ಪ್ರತಿಯೊಂದು ಸಮ್ಮೇಳನದಲ್ಲೂ ಭಾಷಣ ಮಾಡಲು, ಪ್ರಶಸ್ತಿ, ಬಹುಮಾನ ಸ್ವೀಕರಿಸಲು ನಿರಂತರವಾಗಿ ಆಹ್ವಾನಿಸಿದೆ. ಆಗ ಯಾರೂ ಕೂಡಾ ಇದೇ ವಿಠಲ ಹೆಗಡೆ ನಕ್ಸಲರ ಬೆಂಬಲಿಗ ಎಂದು ಹೇಳಿ ವಿರೋಧಿಸಿಲ್ಲ. ಆಗ ನಕ್ಸಲರ ಬೆಂಗಲಿಗರಾಗದ ವಿಠಲ ಹೆಗಡೆ ಈಗ ನಕ್ಸಲರ ಬೆಂಬಲಿಗರಾಗಿದ್ದು ಹೇಗೆ ಮತ್ತು ಯಾಕೆ? ಯಾಕೆಂದರೆ,
ಈ ಸಲದ ಸಮ್ಮೇಳನಕ್ಕೆ ಜನಪದ ಪ್ರತಿಭೆ ಬಿ.ಕೆ. ಸುಮಿತ್ರಾ ಅವರ ಹೆಸರು ಪ್ರಸ್ತಾಪಕ್ಕೆ ಬಂದಿತ್ತು. ಇವರು ಸ್ಥಳೀಯ ಬಸರಿಕಟ್ಟೆಯವರು. ಒಂದು ಬಣ ಬಿ.ಕೆ. ಸುಮಿತ್ರ ಅವರ ಪರವಾಗಿ ಪ್ರಸ್ತಾವನೆ ಇಟ್ಟಿತು. ಈ ಬಣಕ್ಕೆ ವಿರುದ್ಧವಾಗಿದ್ದ ಇನ್ನೊದು ಬಣ ಕಲ್ಕುಳಿ ವಿಠಲ ಹೆಗಡೆಯವರ ಹೆಸರನ್ನು ಮುಂದಿಟ್ಟಿತು. ಈ ತಿಕ್ಕಾಟದಲ್ಲಿ ಬಿ.ಕೆ. ಸುಮಿತ್ರ ಅವರ ಪರವಾಗಿದ್ದ ಬಣಕ್ಕೆ ಜಯ ಸಿಗದೆ ಅದಕ್ಕೆ ಮುಖಭಂಗವಾಯಿತು. ಕಲ್ಕುಳಿ ವಿಠಲ ಹೆಗಡೆಯವರು ಆಯ್ಕೆಯಾದ ನಂತರ ಅವರ ಬಗೆಗೆ ಅಪಪ್ರಚಾರಕ್ಕೆ ತೊಡಗಿತು. *ಆಗ ಆ ಬಣಕ್ಕೆ ಸಿಕ್ಕಿದ ಸಿದ್ಧ ಅಸ್ತ್ರ ಅವರು ನಕ್ಸಲರ ಬೆಂಬಲಿಗರು ಎಂಬುದು.* ಹಾಗಾಗಿ ವಿಠಲ ಹೆಗಡೆಯವರು ನಕ್ಸಲರ ಬೆಂಬಲಿಗರು ಎಂಬ ನೆಪವನ್ನು ಕಾರಣವನ್ನಾಗಿ ಬಳಸಿಕೊಂಡರು. ಬಿ.ಕೆ. ಸುಮಿತ್ರ ಅವರ ಮೇಲಿನ ಅಭಿಮಾನವು ವಿಠಲ ಹೆಗಡೆಯವರ ವಿರೋಧವಾಗಿ ಬೆಳೆಯಿತು. ಮುಂದೆ ವಿಠಲ ಹೆಗಡೆಯವರನ್ನು ವಿರೋಧಿಸುವವರು ಭಜರಂಗದಳದವರಾದರೆ ಈ ಕಡೆ ಅವರನ್ನು ಬೆಂಬಲಿಸುವವರು ಕಾಂಗ್ರೆಸ್ ಪಕ್ಷದವರಾದರು. ಆದ್ದರಿಂದ ಸಂಪೂರ್ಣ ಒಕ್ಕಲಿಗಮಯವಾಗಿದ್ದ ಸಾಹಿತ್ಯ ಸಮ್ಮೇಳನವನ್ನು ಆ ಬಣ ವಿರೋಧಿಸಲಿಲ್ಲ. ಕೇವಲ ವಿಠಲ ಹೆಗಡೆಯರನ್ನು ಮಾತ್ರ ವಿರೋಧಿಸಿತು.

3. ನಾಡಿನ ಪ್ರಜ್ಞಾವಂತರು ದಯವಿಟ್ಟು ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ನೋಡಬೇಕು. ಬೆಳವಾಡಿ ಮಂಜುನಾಥ ಎಂಬಾತನ ಸಾಹಿತ್ಯದ ಬಗೆಗೆ ಒಂದು ಗೋಷ್ಠಿ ಇದೆ. ಅವನು ಯಾವ ದೊಡ್ಡ ಪ್ರಗತಿಪರ ಸಾಹಿತಿ? ಜಿಲ್ಲೆಯ ಖ್ಯಾತ ಕವಿ ಲಕ್ಷ್ಮೀಶ, ಖ್ಯಾತ ಸಾಹಿತಿಗಳಾದ ಎ.ಆರ್. ಕೃಷ್ಣಶಾಸ್ತ್ರಿ, ಕಾಶಿವಿಶ್ವನಾಥಶೆಟ್ಟಿ, ಪೂರ್ಣಚಂದ್ರ ತೇಜಸ್ವಿ, ಕುವೆಂಪು ಮುಂತಾದವರ ಸಾಹಿತ್ಯದ ಬಗೆಗೆ ಅಲ್ಲಿ ವಿಚಾರಗೋಷ್ಠಿಗಳಿಲ್ಲ.

4. ಈ ಸಲದ ಸಮ್ಮೇಳನದಲ್ಲಿ ಎರಡು ಹಾಸ್ಯಗೋಷ್ಠಿಗಳಿದ್ದವು. ಇಡೀ ದೇಶ ಈಗ ಸಿ.ಎ.ಎ. ಮತ್ತು ಎನ್.ಆರ್.ಸಿ.ಗಳ ಸಮಸ್ಯೆಯಲ್ಲಿ ಕುದಿಯುತ್ತಿದೆ. ಇವುಗಳ ಬಗೆಗೆ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ. ಆದರೆ ಇವುಗಳ ಬಗೆಗೆ ಇಲ್ಲಿ ಯಾವುದೇ ಗೋಷ್ಠಿ ಇಲ್ಲ. ಆದರೆ ಹಾಸ್ಯಗೋಷ್ಠಿಗಳಿವೆ. ಇದರ ಅವಶ್ಯಕತೆ ಇತ್ತೆ? ಕಳೆದ ವರ್ಷದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬೆಂಗಳೂರಿನ ಪ್ರಗತಿಪರ ಚಿಂತಕ ಡಾ. ಕೆ.ವೈ. ನಾರಾಯಣಸ್ವಾಮಿಯವರು ಇಂತಹ ಮನರಂಜನೆ ಕಾರ್ಯಕ್ರಮ ನಡೆಸಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಅವರ ಸಲಹೆಯಿಂದ ಇವರು ಬುದ್ಧಿ ಕಲಿಯಲಿಲ್ಲ; ಕಲಿಯುವುದೂ ಇಲ್ಲ.

5. ಕುಂದೂರು ಅಶೋಕ ಎಂಬಾತ ಜಿಲ್ಲಾ ಕ.ಸಾ.ಪ. ಅಧ್ಯಕ್ಷ. ಈತ ಏನು ಸಾಹಿತ್ಯ ಬರೆದಿದ್ದಾನೆ, ಈತ ಪ್ರಗತಿಪರನೋ, ಜಾತಿವಾದಿಯೋ ಎಂಬುದನ್ನು ಪ್ರಜ್ಞಾವಂತರು ಹೇಳಬೇಕು. ಕೊಪ್ಪಳ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಸವಪ್ರಭು ಬೆಟ್ಟದೂರು, ಮುಂತಾದ ಪ್ರಗತಿಪರರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕ.ಸಾ.ಪ. ಅಧ್ಯಕ್ಷರಾಗಿದ್ದಾರೆ. ಅಂತಹವರ ಎದುರು ಈತ ಏನು?

ಡಾ. ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ತಾವು ಸೂಚಿಸುವ ವಿಷಯಗಳು ಮತ್ತು ವಿದ್ವಾಂಸರನ್ನು ಕರೆಯುವುದಾದರೆ ಮಾತ್ರ ಅಧ್ಯಕ್ಷನಾಗುತ್ತೇನೆ ಎಂಬ ಷರತ್ತು ಹಾಕಿದ್ದರು. ಆ ರೀತಿಯಲ್ಲೆ ನಾಡಿನ ಪ್ರಗತಿಪರ ಚಿಂತಕರು, ವಿದ್ವಾಂಸರನ್ನು ಕರೆಸಿ ಗಂಭೀರ ವಿಷಯಗಳ ಬಗೆಗೆ ವಿಚಾರಗೋಷ್ಠಿ ನಡೆಸಿದ್ದರು. ಇಂತಹದನ್ನು ಕಲ್ಕುಳಿ ಹೆಗಡೆಯವರು ಮಾಡಬಹುದಿತ್ತು; ಆದರೆ ಯಾಕೆ ಮಾಡಲಿಲ್ಲ? ಪ್ರತೀ ಸಮ್ಮೇಳನಕ್ಕೂ ನನ್ನನ್ನು ಬಿಡದೆ ಕರೆಯುತ್ತೀರಿ, ಬೇರೆ ಪ್ರಗತಿಪರ ಚಿಂತಕರನ್ನು ಕರೆಯಿರಿ ಎಂದು ಅವರು ಯಾಕೆ ಹೇಳುವುದಿಲ್ಲ?

ಚಿಕ್ಕಮಗಳೂರು ಜಿಲ್ಲಾ ಕ.ಸಾ.ಪ.ವನ್ನು ಒಳಗಿನಿಂದ ಮತ್ತು ಪ್ರಶ್ನೆಗಳ ಮೂಲಕ ನೋಡದೆ ಅದರ ಬೆಂಬಲಕ್ಕೆ ನಿಂತುದು ನಾಡಿನ ಪ್ರಗತಿಪರರ ನಾಚಿಗೆಗೇಡಿನ ಸಂಗತಿ ಎಂದು ಹೇಳಲೇಬೇಕಾಗಿದೆ.

–ಬಿ.ಟಿ. ಲೋಕೇಶ್, ಚಿಕ್ಕಮಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version