ದಿನದ ಸುದ್ದಿ
ಚಿಕ್ಕಮಗಳೂರು : ತರಳಬಾಳು ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ
ಸುದ್ದಿದಿನ ಡೆಸ್ಕ್ : ಶಿಕ್ಷಣದಿಂದಲೇ ಸರ್ವರ ಕಲ್ಯಾಣವೆಂದು ಸ್ವಾತಂತ್ರ ಪೂರ್ವದಲ್ಲಿಯೇ ಗ್ರಾಮೀಣ ಶಿಕ್ಷಣಕ್ಕೆ ಕ್ರಾಂತಿಯ ನಾಂದಿ ಹಾಡಿದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸಂಸ್ಥಾಪನಾಚಾರ್ಯ ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಮತ್ತು ಪ್ರಸ್ತುತ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ದಕ್ಷ ಮತ್ತು ಸಮೃದ್ಧ ಜ್ಞಾನ ಸಂಪನ್ನ ಮಾರ್ಗದರ್ಶನದಿಂದ ವಿದ್ಯಾರ್ಥಿಯ ಸರ್ವತೋಮುಖ ಹಾಗೂ ಗುಣಮಟ್ಟದ ಆಶಯದಂತೆ
ಕರ್ನಾಟಕ ರಾಜ್ಯದ 14 ಜಿಲ್ಲೆಗಳಲ್ಲಿ 250 ಕ್ಕೂ ಶಿಕ್ಷಣ ಸಂಸ್ಥೆಗಳ ಮೂಲಕ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡುತ್ತಿರುವ ದೇಶದಲ್ಲಿಯೇ ಮಾದರಿಯಾದ ಅಪರೂಪದ ವಿದ್ಯಾಸಂಸ್ಥೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂಬ ಧ್ಯೇಯವಾಕ್ಯದ ಆಶಯದಂತೆ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಸುಸಂಸ್ಕೃತ ಶಿಕ್ಷಣದ ನೈವೇದ್ಯವನ್ನು ಅರ್ಪಿಸುತ್ತಿದೆ.
ಶಿಕ್ಷಣ ಸಂಸ್ದೆಗಳ ನೂರಾರು ಶಾಲಾ ಕಟ್ಟಡಗಳ ನಿರ್ಮಾಣದ ವಾಸ್ತು ಶಿಲ್ಪ ಕಾರ್ಯಗಳಂತು ಅತ್ಯದ್ಭುತ ಆನಂದವನ್ನುಂಟು ಮಾಡುತ್ತದೆ. ನಿತ್ಯವೂ ಶ್ರೀ ಸಂಸ್ಥೆಯಯ ಕಟ್ಟಡ ನಿರ್ಮಾಣ ಕಾಮಗಾರಿಗಳ ಕಾರ್ಯ ಭರದಿಂದ ಸಾಗುತ್ತಿವೆ.
ಚಿಕ್ಕಮಗಳೂರಿನಲ್ಲಿ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ ಪರಮಪೂಜನೀಯ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಿ ಜರುಗಿತು.
ಬೈಪಾಸ್ ರಸ್ತೆಯ,ಕಲ್ಯಾಣ ನಗರದ ದೊಡ್ಡ ಕುರುಬರಹಳ್ಳಿಯ ಶಾಲಾ ಆವರಣದ ಸಭೆಯಲ್ಲಿ ಚಿಕ್ಕಮಗಳೂರು ಶಾಸಕರಾದ ಶ್ರೀ ಸಿ.ಟಿ ರವಿ,ಕಡೂರು ಶಾಸಕರಾದ ಬೆಳ್ಳಿಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬೋಜೇಗೌಡ ಮಾಜಿ ಸಭಾಪತಿ ಶ್ರೀ ಬಿ.ಎಲ್. ಶಂಕರ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಸಾವಿರಾರು ಶಿಷ್ಯ ಸಮಾಜ ಬಾಂಧವರು ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಂಜೆ ಜರುಗಿದ ತರಳಬಾಳು ಜಾನಪದ ಸಿರಿ ತಂಡದವರ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.