ದಿನದ ಸುದ್ದಿ
ಮಾನಸ ಸರೋವರ ಯಾತ್ರಿಗಳಿಗೆ ಚೀನಾ ತಡೆ
ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಹಿಂದೂಗಳನ್ನು ಚೀನಾ ಪಡೆ ತಡೆ ಹಿಡಿದಿದ್ದು, ಈ ಮೂಲಕ ಚೀನಾ-ಭಾರತ ನಡುವಿನ ತಿಕ್ಕಾಟ ಮತ್ತೆ ಶುರುವಾಗಿದೆ.
ಮಾನಸ ಸರೋವರದಲ್ಲಿ ಪವಿತ್ರ ಸ್ನಾನ ಮಾಡಲು ಬಯಸಿದ್ದ ಭಕ್ತರನ್ನು ಯಾತ್ರೆಯ ಮಧ್ಯದಲ್ಲೇ ತಡೆ ಹಿಡಿದಿರುವ ಪರಿಣಾಮ ಅವರೆಲ್ಲರೂ ಮತ್ತೆ ಕ್ಯಾಂಪ್‌ಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ನತುಲಾ ಪಾಸ್ ಮಾರ್ಗವನ್ನು ಮಾನಸ ಸರೋವರ ಯಾತ್ರೆಗೆ ಮುಕ್ತಗೊಳಿಸುವ ಕುರಿತು ಚೀನಾ ಜತೆ ಸುಧೀರ್ಘ ಮಾತುಕತೆ ನಡೆಸಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ 20 ದಿನಗಳಲ್ಲೇ ಈ ಘಟನೆ ಜರುಗಿದೆ.
ಭಾರತ-ಚೀನಾ ನಡುವಿನ ಸಂಬಂಧವನ್ನು ಇನ್ನಷ್ಟು ಸೌಹಾರ್ಧಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಇದ್ದ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲಾಗಿದ್ದು, ಭಾರತೀಯರು ನಿಶ್ಚಿಂತೆಯಾಗಿ ಮಾನಸ ಸರೋವರ ಯಾತ್ರೆ ಕೈಗೊಳ್ಳಬಹುದು ಎಂದು ಸ್ವರಾಜ್ ಅವರು ಹೇಳಿದ್ದರು.
ನಾಲ್ಕು ತಿಂಗಳ ಯಾತ್ರೆ
ನಾಲ್ಕು ತಿಂಗಳುಗಳ ಕೈಲಾಸ ಮಾನಸ ಸರೋವರ ಯಾತ್ರೆಯು ಜೂನ್‌ನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್‌ಗೆ ಅಂತ್ಯಗೊಳ್ಳಲಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಯಾತ್ರೆಯ ಉಸ್ತುವಾರಿ ನೋಡಿಕೊಳ್ಳುತ್ತದೆ.
ಎರಡು ಮಾರ್ಗಗಳು
ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಲಿಪುಲೇಖ್ ಪಾಸ್ (ಉತ್ತರಾಖಂಡ್) ಮತ್ತು ನತುಲಾ ಪಾಸ್ (ಸಿಕ್ಕಿಂ) ಎಂಬ ಎರಡು ಮಾರ್ಗಗಳಿವೆ. 2015ರಲ್ಲಿ ಮಾನಸ ಸರೋವರ ಯಾತ್ರಿಗಳ ಮೇಲೆ ಚೀನಾ ಯೋಧರು ಗುಂಡು ಹಾರಿಸಿ ಕೊಂದ ನಂತರ ನತುಲಾಪಾಸ್ ಮಾರ್ಗವನ್ನು ಈ ಯಾತ್ರೆಗೆ ಮುಕ್ತಗೊಳಿಸಲಾಯಿತು. ಈ ಮಾರ್ಗದಲ್ಲಿ ಸಂಚರಿಸಲು ಚೀನಾ ಮತ್ತು ಭಾರತದ ಮಧ್ಯೆ ಮೊದಲಿನಿಂದಲೂ ತಗಾದೆ ನಡೆಯುತ್ತಲೇ ಇದೆ.