ದಿನದ ಸುದ್ದಿ
ಚಿತ್ರದುರ್ಗ | ವದ್ದೀಕೆರೆ ಸಿದ್ದೇಶ್ವರ ಸ್ವಾಮಿ ಜಾತ್ರೆ ರದ್ದು
ಸುದ್ದಿದಿನ,ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿ ವದ್ದೀಕೆರೆ ಗ್ರಾಮದ ಶ್ರೀಕಾಲಭೈರವೇಶ್ವರ (ಸಿದ್ದೇಶ್ವರ ಸ್ವಾಮಿ) ಜಾತ್ರಾ ಮಹೋತ್ಸವವನ್ನು ಏಪ್ರಿಲ್ 26ರಂದು ನಡೆಸಲು ಈ ಹಿಂದೆ ತಿರ್ಮಾನಿಸಿದ್ದು, ಆದರೆ ಈಗ ಪ್ರಸ್ತುತ ಸನ್ನಿವೇಶದಲ್ಲಿ ಕೋವಿಡ್-19ರ ರೂಪಾಂತರ ಕೊರೊನಾ ವೈರಸ್‍ನ ಎರಡನೇ ಅಲೆ ತಾಲ್ಲೂಕು ವ್ಯಾಪ್ತಿಯಲ್ಲಿ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಿರಿಯೂರು ತಾಲ್ಲೂಕು ಆಡಳಿತ ಜಾತ್ರೆಯನ್ನು ರದ್ದು ಪಡಿಸಿದೆ.
ಬೇರೆ ಊರು, ಗ್ರಾಮಗಳಿಂದ ಜಾತ್ರೆ, ದೇವಸ್ಥಾನಕ್ಕೆ ಬರಲು ಸಿದ್ದತೆ ಮಾಡಿಕೊಳ್ಳುತ್ತಿರುವ ಸಾರ್ವಜನಿಕರು, ಭಕ್ತಾಧಿಗಳು ಯಾರು ಕೂಡ ಜಾತ್ರೆಗೆ ಬರದೇ ತಮ್ಮ ಭಕ್ತಿಯನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಪೂಜೆ ಮಾಡಿ ದೇವರಲ್ಲಿ ಮನೆಯಿಂದಲೆ ಪ್ರಾರ್ಥನೆ ಮಾಡಿಕೊಳ್ಳುವುದರ ಮೂಲಕ ಶ್ರೀಕಾಲಭೈರವೇಶ್ವರ (ಸಿದ್ದೇಶ್ವರ ಸ್ವಾಮಿ) ಕೃಪೆ ಪಡೆದುಕೊಳ್ಳಲು ತಿಳಿಸಿದೆ.
ಸಾರ್ವಜನಿಕರು, ಭಕ್ತಾಧಿಗಳು ಆದೇಶವನ್ನು ಮೀರಿ ಜಾತ್ರೆಗೆ ಬರಲು ಪ್ರಯತ್ನ ಮಾಡಿದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ನಿಮ್ಮನ್ನು ಅಲ್ಲಲ್ಲಿಯೇ ತಡೆಗಟ್ಟಿ ದೇವಸ್ಥಾನಕ್ಕೆ ಬರಲು ಅವಕಾಶ ನೀಡದೇ ಇರುವುದರಿಂದ ತಮ್ಮ ತಮ್ಮ ಮನೆಗಳಲ್ಲಿಯೇ ಪೂಜೆ ಮಾಡಿಕೊಳ್ಳಲು ಸಾರ್ವಜನಿಕರು, ಭಕ್ತಧಿಗಳಲ್ಲಿ ಕೋರಿದೆ.
ಸಿದ್ದೇಶ್ವರ ಸ್ವಾಮಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಮತ್ತು ಸಾರ್ವಜನಿಕರು ಹಾಗೂ ಎಲ್ಲಾ ಭಕ್ತಾಧಿಗಳಿಂದ ರಾಜ್ಯದಲ್ಲಿ ಹರಡಿರುವ ಕೊರೊನಾ ವೈರಸ್ ಸೋಂಕು ಆದಷ್ಟು ಶೀಘ್ರವಾಗಿ ಮುಕ್ತವಾಗಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತಾ, ತಾವೆಲ್ಲರೂ ತಾಲ್ಲೂಕು ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಹಿರಿಯೂರು ತಾಲ್ಲೂಕು ತಹಶೀಲ್ದಾರ್ ಜಿ.ಹೆಚ್. ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243