ದಿನದ ಸುದ್ದಿ
ಚಿತ್ರದುರ್ಗ ಕೋಟೆ ಮೇಲೆ ಸಿನಿಮಾ ಶೂಟಿಂಗ್ ಗೆ ವಿರೋಧ !
ಚಿತ್ರದುರ್ಗ: ಚಲನಚಿತ್ರದ ಚಿತ್ರೀಕರಣದ ನೆಪದಲ್ಲಿ ದುರ್ಗದ ಕೋಟೆಯ ಕೆಲವಡೆ ರಸಾಯನಿಕ ಬಣ್ಣಗಳು ಹರಡಿ ಇಡೀ ಕೋಟೆಯ ಪರಿಸರ ಹಾಳಾಗಿದ್ದು, ಇದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರವಾಸಿಗರು ಮತ್ತು ಸ್ಥಳಿಯರು ಕ್ಷಣ ಚಿತ್ರಕ್ಕಾಗಿ ಪುರಾತನ ಕೋಟೆ ಹಾಳು ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದು ಹಲವು ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ಕೋಟೆ, ಅದರ ಮೂಲ ಸ್ವರೂಪಕ್ಕೆ ದಕ್ಕೆ ಉಂಟಾಗದಂತೆ, ಯಾವುದೇ ರೀತಿಯ ಬಣ್ಣಗಳನ್ನ ಬಳಿಯದಂತೆ ಕಾಪಾಡಿಕೊಳ್ಳಬೇಕು. ಆದ್ರೆ ಅಲ್ಲಿ ಚಲನಚಿತ್ರದ ಚಿತ್ರೀಕರಣ ಮಾಡಿದ ತಂಡವೊಂದರ ನಿರ್ಲಕ್ಷ್ಯತೆಯಿಂದ ಕೋಟೆಯ ಬಹುಭಾಗ ರಸಾಯನಿಕ ಬಣ್ಣಗಳು ಹರಡಿ ಇಡೀ ಕೋಟೆಯ ಪರಿಸರ ಹಾಳಾಗಿದ್ದು, ಇದರ ಬಗ್ಗೆ ನಿರ್ಲಕ್ಷ್ಯತೆ ತೋರಿದ್ದ ಅಧಿಕಾರಿ ವಿರುದ್ದ ಸಾರ್ವಜನಿಕರ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚತ್ತ ಪುರಾತತ್ವ ಇಲಾಖೆ ಅಧಿಕಾರಿ ತ್ಯಾಪೆ ಸಾರಿಸೋಕೆ ಮುಂದಾಗಿದ್ದಾರೆ.
ಚಿತ್ರದುರ್ಗದ ಕಲ್ಲಿನ ಕೋಟೆ ಹಲವು ಶತಮಾನಗಳಷ್ಟು ಇತಿಹಾಸವನ್ನು ಹೊಂದಿದೆ, ಶಾತವಾಹನರ ಕಾಲದಿಂದ ಪಾಳೇಗಾರರ ಆಳ್ವಿಕೆಯ ಕಾಲದ ವರೆಗೂ ಅಭಿವೃದ್ದಿ ಹೊಂದುತ್ತಲೇ ಬಂದ ಈ ಕೋಟೆ, ಹೈದರಾಲಿ ಮತ್ತು ಟಿಪ್ಪುವಿನ ದಾಳಿಗೆ ಸಿಲುಕಿ ಅಲ್ಪಮಟ್ಟಿಗೆ ನಾಶವಾಗಿತ್ತು. ಸ್ವತಂತ್ರ್ಯಾ ನಂತರ ಭಾರತೀಯ ಪುರಾತತ್ವ ಇಲಾಖೆ ಈ ಕೋಟೆಯನ್ನ ತನ್ನ ಅಧೀನಕ್ಕೆ ಪಡೆದಿದ್ದು, ಇದೀಗ ಕೇಂದ್ರ ಸರ್ಕಾರದ ಆಡಳಿತಕ್ಕೊಳಪಟ್ಟಿದೆ.
ಈ ಕೋಟೆಯ ಸಂರಕ್ಷಣೆ ಹೊಣೆಹೊತ್ತ ಅಧಿಕಾರಿಗಳು, ಕೋಟೆಯ ಮೇಲೆ ಚಲನಚಿತ್ರಗಳನ್ನ ಚಿತ್ರೀಕರಿಸಲು ಅನುಮತಿ ನೀಡುತ್ತಿದ್ದು, ಕಳೆದ ಹದಿನೈದು ದಿನಗಳಿಂದ ಪಡ್ಡೆಹುಲಿ ಚಿತ್ರದ ಚಿತ್ರೀಕರಣ ಮಾಡುತ್ತಿದ್ದ ತಂಡ, ಪುರಾತತ್ವ ಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಕೋಟೆಯ ಮೇಲೆಲ್ಲಾ ರಸಾಯನಿಕ ಮಿಶ್ರಿತ ಬಣ್ಣಗಳನ್ನ ಹರಡಿ, ಇಡೀ ಪರಿಸರವನ್ನೇ ಹಾಳು ಗೆಡವಿದೆ, ಇದನ್ನು ಕಂಡ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದು, ಐತಿಹಾಸಿಕ ಸ್ಥಳದ ಮೂಲ ಸ್ವರೂಪಕ್ಕೆ ಧಕ್ಕೆ ತಂದವರ ವಿರುದ್ದ ಪ್ರವಾಸಿಗರಾದ ರಂಜಿತಾ ಮತ್ತು ಸ್ಥಳೀಯರಾದ ಸದಾಶಿವ ಆಕ್ರೋಶ ಹೊರಹಾಕಿದ್ದಾರೆ.
ನಿರ್ಮಾಪಕ ಕೆ.ಮಂಜು ಪುತ್ರ ಹಾಗು ಹಿರಿಯ ನಟ ಕ್ರೇಸಿ ಸ್ಟಾರ್ ರವಿಚಂದ್ರನ್ ನಟಿಸುತ್ತಿರುವ ಪಡ್ಡೇಹುಲಿ ಚಿತ್ರದ ಹಾಡಿನ ದೃಷ್ಯದ ಚಿತ್ರೀಕರಣ ಮುಗಿಸಿದ ಚಿತ್ರತಂಡ, ಐತಿಹಾಸಿಕ ಕೋಟೆಯ ಪರಿಸರವನ್ನ ಹಾಳುಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ, ಎಚ್ಚತ್ತ ಪುರಾತತ್ವ ಇಲಾಖೆ ಅಧಿಕಾರಿ, ತಮ್ಮ ಸಿಬ್ಬಂದಿಗಳ ಮೂಲಕ ಕೋಟೆಯ ಮೇಲೆಲ್ಲಾ ಹರಡಿದ್ದ ಬಣ್ಣವನ್ನ ಸ್ವಚ್ಚಗೊಳಿಸಲು ಮುಂದಾಗಿದ್ದಾರೆ.
ಆದರೆ ಕೆಮಿಕಲ್ ಯುಕ್ತ ಬಣ್ಣಗಳು ಕೋಟೆಯ ಕಲ್ಲುಗಳು, ಮೆಟ್ಟಿಲುಗಳು, ಹುಲ್ಲುಹಾಸುಗಳು ಇಡೀ ಕೋಟೆಯ ಸ್ವರೂಪವನ್ನೇ ಬದಲಿಸಿಬಿಟ್ಟಿದ್ದು, ನಿರ್ವಹಣೆಯ ಜವಬ್ದಾರಿ ಹೊತ್ತ ಅಧಿಕಾರಿ ಗಿರೀಶ್, ಹಣ ಕೊಟ್ಟರೆ ಸಾಕು ಕೋಟೆಯನ್ನೆ ಬಾಡಿಗೆ ಕೊಟ್ಟು ಬಿಡುತ್ತಾರೆ, ಅವರಿಗೆ ಸ್ಮಾರಕಗಳ ರಕ್ಷಣೆ ಬಗ್ಗೆ ಜವಬ್ದಾರಿ ಇಲ್ಲ, ಇಂತಹ ಭ್ರಷ್ಟ ಅಧಿಕಾರಿಯನ್ನ ತೊಲಗಿಸಿ, ನಮ್ಮ ಕೋಟೆಯನ್ನ ಉಳಿಸಿ ಎಂದು ದುರ್ಗದ ಜನರು ಮನವಿ ಮಾಡಿದ್ದಾರೆ.
ಒಟ್ಟಾರೆ ಸಿಡಿಲಿಗು ಜಗ್ಗದ ಉಕ್ಕಿನ ಕೋಟೆ ಎಂದೇ ಖ್ಯಾತಿ ಹೊಂದಿರುವ ಚಿತ್ರದುರ್ಗದ ಕೋಟೆ, ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಈ ಐತಿಹಾಸಿಕ ಕೋಟೆ ಇತ್ತೀಚೆಗೆ ಬಿರುಕು ಬಿಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಹಲವಾರು ಬಾರಿ ವರದಿ ಪ್ರಸಾರ ಮಾಡಿದರೂ ಎಚ್ಚತ್ತುಕೊಳ್ಳದ ಭಾರತೀಯ ಪುರಾತತ್ವ ಇಲಾಖೆಯ ಸರ್ವಾಧಿಕಾರಿ ಗಿರೀಶ್, ಹಣ ಸಿಗುತ್ತೆ ಅಂದ್ರೆ ಮಾತ್ರ ಕೋಟೆಯ ಮೇಲೆ ಏನು ಬೇಕಾದ್ರೂ ಮಾಡ್ಕೊಳಿ ಅನ್ನೋ ಮಟ್ಟಕ್ಕಿಳಿದಿದ್ದಾರೆ ಎಂಬ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಇನ್ನಾದ್ರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ, ಕೋಟೆಯನ್ನು ಉಳಿಸಬೇಕಿದೆ.