ದಿನದ ಸುದ್ದಿ
ಚಿತ್ರದುರ್ಗ | ನಿರುದ್ಯೋಗಿಗಳಿಗೊಂದು ಸಂತಸದ ಸುದ್ದಿ : ಹೊಸ ಕೈಗಾರಿಕಾ ನೀತಿಯಡಿ ಉದ್ಯಮಗಳ ಸ್ಥಾಪನೆ ; ಸಹಾಯ ಧನ
ಸುದ್ದಿದಿನ, ಚಿತ್ರದುರ್ಗ : ಉದ್ಯೋಗಸೃಷ್ಟಿ, ತಾಂತ್ರಿಕ ನೈಪುಣ್ಯತೆ, ಮಾನವ ಸಂಪನ್ಮೂಲ ಅಭಿವೃದ್ಧಿಯ ಸದ್ಬಳಕೆ, ರಫ್ತು ಉತ್ತೇಜನಕ್ಕೆ ಪ್ರೋತ್ಸಾಹ ಅಲ್ಲದೆ ಸಣ್ಣ, ಅತಿಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ಯಮಗಳನ್ನು ಸ್ಥಾಪಿಸುವತ್ತ, ಉದ್ಯಮಿಗಳನ್ನು ಆಕರ್ಷಿಸಲು ಸರ್ಕಾರ ಹಲವು ಉತ್ತೇಜನಾಕಾರಿ ಅಂಶಗಳನ್ನೊಳಗೊಂಡ ಹೊಸ ಕೈಗಾರಿಕಾ ನೀತಿಯನ್ನು 2014 ರಿಂದ 2019 ರವರೆಗೆ ಅನ್ವಯಿಸುವಂತೆ ರೂಪಿಸಿ ಜಾರಿಗೊಳಿಸಿದೆ.
ಕೈಗಾರಿಕಾ ನೀತಿ ಜಾರಿಗೊಳಿಸುವ ಮೂಲಕ ಸರ್ಕಾರ ಕೆಲವು ಕಾರ್ಯ ನೀತಿಗಳನ್ನು ಹಮ್ಮಿಕೊಂಡಿದೆ. ಉತ್ತಮ ಗುಣಮಟ್ಟದಲ್ಲಿ ಸಮಗ್ರ ಸುವ್ಯವಸ್ಥಿತ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುವುದು. ತಾಂತ್ರಿಕ ನೈಪುಣ್ಯತೆ ಮತ್ತು ಸಾಮಥ್ರ್ಯದ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸುವುದು. ಉತ್ತಮ ಯಾಂತ್ರೀಕತೆಯ ಅವಕಾಶಗಳು ಮತ್ತು ಕ್ರಮಬದ್ಧ ಕೈಗಾರಿಕಾ ಅಭಿವೃದ್ಧಿ. ಕೈಗಾರಿಕಾ ಬೆಳವಣಿಗೆಯ ಆಧಾರದ ಮೇಲೆ ತಾಲ್ಲೂಕುಗಳ ಮರುವಿಂಗಡಣೆ. ಎಂಎಸೆಂಇ ವಲಯಕ್ಕೆ ಹೆಚ್ಚಿನ ಉತ್ತೇಜನ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ದೊಡ್ಡ, ಮೆಗಾ, ಅಲ್ಟ್ರಾ ಮೆಗಾ, ಸೂಪರ್ ಮೆಗಾ ವಲಯದ ಕೈಗಾರಿಕಾ ಕ್ಷೇತ್ರಕ್ಕೆ ಆಕರ್ಷಕ ಪ್ರೋತ್ಸಾಹ ಮತ್ತು ರಿಯಾಯಿತಿ ಸೌಲಭ್ಯಗಳನ್ನು ದೊರಕಿಸುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮಹಿಳೆ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಅಂಗವಿಕಲ ಮಾಜಿ ಸೈನಿಕ ಮತ್ತು ಅನಿವಾಸಿ ಭಾರತೀಯ ಇವರನ್ನು ಉತ್ತೇಜಿಸಲು ಅವರು ಸ್ಥಾಪಿಸುವ ಕೈಗಾರಿಕೆಗಳಿಗೆ ವಿಶೇಷ ಆದ್ಯತೆ ನೀಡುವುದು. ರಫ್ತು ಉತ್ತೇಜನಕ್ಕೆ ಪ್ರೋತ್ಸಾಹ ನೀಡುವುದು. ಹಸಿರು ವಲಯ ಸಂರಕ್ಷಣೆಯೊಂದಿಗೆ ಇಂಧನ ಕ್ಷಮತೆ ಹೆಚ್ಚಿಸುವ ಘಟಕಗಳ ಅಳವಡಿಕೆಯೊಂದಿಗೆ ಸ್ಥಾಪಿಸುವ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದು. ಗುರುತಿಸಲ್ಪಟ್ಟತಿ ವಿರಳ ವಸ್ತುಗಳ ಉತ್ಪಾದನೆ ಘಟಕಗಳಿಗೆ ವಿಶೇಷ ಒತ್ತು ನೀಡುವುದು. ಆಸ್ತಿ ಹಕ್ಕುಗಳ ಪ್ರಕರಣಗಳೊಂದಿಗೆ ಹೊಂದಾಣಿಕೆ ಕೈಗೊಳ್ಳುವುದು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಡಿಜಿಟಲ್ ಡೈರೆಕ್ಟ್ ಉತ್ಪಾದನಾ ಘಟಕಗಳಿಗೆ ಆಸರೆ ನೀಡುವುದು ಹೊಸ ಕೈಗಾರಿಕಾ ನೀತಿಯ ಉದ್ದೇಶವಾಗಿದೆ.
ಕೈಗಾರಿಕಾ ವಲಯಗಳ ವರ್ಗೀಕರಣ
ಉತ್ತೇಜನ ಮತ್ತು ರಿಯಾಯಿತಿ ಸೌಲಭ್ಯಗಳನ್ನು ನೀಡಲು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುಗಳನ್ನು ವಲಯವಾರು ವರ್ಗೀಕರಿಸಲಾಗಿದೆ. ವಲಯ-1 ರಲ್ಲಿ ಹೊಳಲ್ಕೆರೆ ತಾಲ್ಲೂಕು. ವಲಯ-2 ರಲ್ಲಿ ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ಮತ್ತು ಮೊಳಕಾಲ್ಮೂರು ತಾಲ್ಲೂಕು ಹಾಗೂ ವಲಯ-3 ರಲ್ಲಿ ಚಳ್ಳಕೆರೆ ತಾಲ್ಲೂಕು ನಿಗದಿಪಡಿಸಲಾಗಿದೆ.
ಬಂಡವಾಳ ಉತ್ತೇಜನಕ್ಕೆ ಸಹಾಯಧನ
ಕೈಗಾರಿಕೆ ಗಳನ್ನು ಸ್ಥಾಪಿಸಬಯಸವವರಿಗೆ ಉತ್ತೇಜನ ನೀಡುವ ಸಲುವಾಗಿ ವರ್ಗವಾರು ಸಹಾಯಧನವನ್ನು ನೀಡಲಾಗುವುದು. ವಲಯವಾರು ಹಾಗೂ ವರ್ಗವಾರು ಉತ್ತೇಜನ ಸಹಾಯಧನದ ಪ್ರಮಾಣ ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗ, ಮಹಿಳೆ, ಪ.ಜಾತಿ/ಪ.ವರ್ಗ, ಪ.ಜಾತಿ/ಪ.ವರ್ಗ ಮಹಿಳೆ, ಅಲ್ಪಸಂಖ್ಯಾತ, ಅಂಗವಿಕಲ, ಹಿಂದುಳಿದ ವರ್ಗ, ಮಾಜಿ ಸೈನಿಕ ಹೀಗೆ ವರ್ಗವಾರು ವಿವಿಧ ವಲಯಗಳಲ್ಲಿ ಪ್ರಾರಂಭಿಸುವ ಕೈಗಾರಿಕೆಗಳಿಗೆ ಬಂಡವಾಳ ಉತ್ತೇಜನ ಸಹಾಯಧನ ನೀಡಲಾಗುವುದು.
ಎ) ಅತಿಸಣ್ಣ ಕೈಗಾರಿಕೆಗಳಿಗೆ ಅಂದರೆ ಉತ್ಪಾದನಾ ವಲಯದಲ್ಲಿ ಯಂತ್ರ ಸ್ಥಾವರಗಳ ಮೇಲೆ 25 ಲಕ್ಷ ರೂ. ವರೆಗೆ ಬಂಡವಾಳ ಹೂಡುವವರಿಗೆ ಹಾಗೂ ಸೇವಾ ವಲಯದಲ್ಲಿ ಉಪಕರಣಗಳ ಮೇಲೆ 10 ಲಕ್ಷ ರೂ. ವರೆಗೆ ಬಂಡವಾಳ ಹೂಡುವವರಿಗೆ ಕನಿಷ್ಟ ಶೇ. 25 ರಿಂದ ಶೇ. 35 ರವರೆಗೆ ಬಂಡವಾಳ ಉತ್ತೇಜನ ಸಹಾಯಧನ ನೀಡಲಾಗುವುದು. ಸಾಮಾನ್ಯ ವರ್ಗ, ಮಹಿಳೆ, ಪ.ಜಾತಿ/ಪ.ವರ್ಗ, ಪ.ಜಾತಿ/ಪ.ವರ್ಗ ಮಹಿಳೆ, ಅಲ್ಪಸಂಖ್ಯಾತ, ಅಂಗವಿಕಲ, ಹಿಂದುಳಿದ ವರ್ಗ, ಮಾಜಿ ಸೈನಿಕ ಹೀಗೆ ವರ್ಗವಾರು ವಿವಿಧ ವಲಯಗಳಲ್ಲಿ ಪ್ರಾರಂಭಿಸುವ ಅತಿ ಸಣ್ಣ ಕೈಗಾರಿಕೆಗಳಿಗೆ ಬಂಡವಾಳ ಉತ್ತೇಜನ ಸಹಾಯಧನ ನೀಡಲಾಗುವುದು.
ಬಿ) ಸಣ್ಣ ಕೈಗಾರಿಕೆಗಳಿಗೆ ಅಂದರೆ ಉತ್ಪಾದನಾ ವಲಯದಲ್ಲಿ ಯಂತ್ರ ಸ್ಥಾವರಗಳ ಮೇಲೆ 25 ಲಕ್ಷ ರೂ. ಗಳಿಂದ 5 ಕೋಟಿ ರೂ. ವರೆಗೆ ಬಂಡವಾಳ ಹೂಡುವವರಿಗೆ ಹಾಗೂ ಸೇವಾ ವಲಯದಲ್ಲಿ ಉಪಕರಣಗಳ ಮೇಲೆ 10 ಲಕ್ಷ ರೂ. ಗಳಿಂದ 2 ಕೋಟಿ ರೂ. ವರೆಗೆ ಬಂಡವಾಳ ಹೂಡುವವರಿಗೆ ಕನಿಷ್ಟ ಶೇ. 20 ರಿಂದ ಶೇ. 30 ರವರೆಗೆ ಬಂಡವಾಳ ಉತ್ತೇಜನ ಸಹಾಯಧನ ನೀಡಲಾಗುವುದು.
ಸಿ) ಮಧ್ಯಮ ಕೈಗಾರಿಕೆಗಳಿಗೆ ಅಂದರೆ ಉತ್ಪಾದನಾ ವಲಯದಲ್ಲಿ ಯಂತ್ರ ಸ್ಥಾವರಗಳ ಮೇಲೆ 5 ಕೋಟಿ ರೂ. ಗಳಿಂದ 10 ಕೋಟಿ ರೂ. ವರೆಗೆ ಬಂಡವಾಳ ಹೂಡುವವರಿಗೆ ಹಾಗೂ ಸೇವಾ ವಲಯದಲ್ಲಿ ಉಪಕರಣಗಳ ಮೇಲೆ 02 ಕೋಟಿ ರೂ. ಗಳಿಂದ 05 ಕೋಟಿ ರೂ. ವರೆಗೆ ಬಂಡವಾಳ ಹೂಡುವವರಿಗೆ ಕನಿಷ್ಟ 30 ರಿಂದ ಗರಿಷ್ಠ 60 ಲಕ್ಷ ರೂ. ಗಳÀವರೆಗೆ ಬಂಡವಾಳ ಉತ್ತೇಜನ ಸಹಾಯಧನ ನೀಡಲಾಗುವುದು.
ಮುದ್ರಾಂಕ ಮತ್ತು ನೊಂದಣಿ ಶುಲ್ಕ ವಿನಾಯಿತಿ
ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ, ಉದ್ಯಮ ಕ್ಷೇತ್ರಕ್ಕೆ ಉತ್ತೇಜಿಸಲು ಮುದ್ರಾಂಕ ಶುಲ್ಕ ಮತ್ತು ನೊಂದಣಿ ಶುಲ್ಕದಲ್ಲಿ ವಿನಾಯಿತಿ ನೀಡುವ ಕಾರ್ಯಕ್ರಮ ರೂಪಿಸಿದೆ. ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸಾಮಾನ್ಯ ವರ್ಗದವರಿಗೆ ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಶೇ. 100 ರಷ್ಟು ಮುದ್ರಾಂಕ ಶುಲ್ಕ ವಿನಾಯಿತಿ ಇದ್ದು, ಚಳ್ಳಕೆರೆ ತಾಲ್ಲೂಕಿನಲ್ಲಿ ಶೇ. 75 ರಷ್ಟು ಮುದ್ರಾಂಕ ಶುಲ್ಕ ವಿನಾಯಿತಿ ಇರುತ್ತದೆ. ಉಳಿದಂತೆ ಮಹಿಳೆ, ಪ.ಜಾತಿ/ಪ.ವರ್ಗ, ಮಹಿಳೆ, ಅಲ್ಪಸಂಖ್ಯಾತ, ಅಂಗವಿಕಲ, ಹಿಂದುಳಿದ ವರ್ಗ, ಮಾಜಿ ಸೈನಿಕರಿಗೆ ಎಲ್ಲ ತಾಲ್ಲೂಕುಗಳಲ್ಲಿ ಶೇ. 100 ರಷ್ಟು ಮುದ್ರಾಂಕ ಶುಲ್ಕ ವಿನಾಯಿತಿ ಇದೆ. ನೊಂದಣಿ ಶುಲ್ಕದಲ್ಲಿಯೂ ಸಾಕಷ್ಟು ರಿಯಾಯಿತಿಯನ್ನು ಸರ್ಕಾರ ಘೋಷಿಸಿದೆ.
ಭೂ ಪರಿವರ್ತನಾ ಶುಲ್ಕ ಮರುಪಾವತಿ
ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸಾಮಾನ್ಯ ವರ್ಗದವರಿಗೆ ಅಲ್ಲದೆ ದೊಡ್ಡ, ಮೆಗಾ ಬೃಹತ್ ಕೈಗಾರಿಕೆ ಸ್ಥಾಪಿಸುವವರಿಗೆ ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಶೇ. 100 ರಷ್ಟು ಭೂ ಪರಿವರ್ತನಾ ಶುಲ್ಕ ಮರುಪಾವತಿ ವ್ಯವಸ್ಥೆ ಜಾರಿಗೊಳಿಸಿದ್ದು, ಚಳ್ಳಕೆರೆ ತಾಲ್ಲೂಕಿನಲ್ಲಿ ಶೇ. 75 ರಷ್ಟು ಭೂ ಪರಿವರ್ತನಾ ಶುಲ್ಕ ಮರುಪಾವತಿ ಇರುತ್ತದೆ. ಉಳಿದಂತೆ ಮಹಿಳೆ, ಪ.ಜಾತಿ/ಪ.ವರ್ಗ, ಮಹಿಳೆ, ಅಲ್ಪಸಂಖ್ಯಾತ, ಅಂಗವಿಕಲ, ಹಿಂದುಳಿದ ವರ್ಗ, ಮಾಜಿ ಸೈನಿಕರಿಗೆ ಎಲ್ಲ ತಾಲ್ಲೂಕುಗಳಲ್ಲಿ ಶೇ. 100 ರಷ್ಟು ಭೂ ಪರಿವರ್ತನಾ ಶುಲ್ಕ ಮರುಪಾವತಿ ಇರುತ್ತದೆ.
ಪ್ರವೇಶ ತೆರಿಗೆ ವಿನಾಯಿತಿ
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಮಾನ್ಯ ವರ್ಗದವರಿಗೆ 03 ರಿಂದ 05 ವರ್ಷ ಶೇ. 100 ರಷ್ಟು ಪ್ರವೇಶ ತೆರಿಗೆ ವಿನಾಯಿತಿ ಇದೆ. ಮಹಿಳೆ, ಪ.ಜಾತಿ/ಪ.ವರ್ಗ, ಅಲ್ಪಸಂಖ್ಯಾತ, ಅಂಗವಿಕಲ, ಹಿಂದುಳಿದ ವರ್ಗ, ಮಾಜಿ ಸೈನಿಕರಿಗೆ 03 ರಿಂದ 05 ವರ್ಷ ಶೇ. 100 ರಷ್ಟು ಪ್ರವೇಶ ತೆರಿಗೆ ವಿನಾಯಿತಿ ಇದೆ. ಅದೇ ರೀತಿ ದೊಡ್ಡ, ಮೆಗಾ, ಅಲ್ಟ್ರಾ ಮೆಗಾ, ಸೂಪರ್ ಮೆಗಾ ಕೈಗಾರಿಕೆಗಳಿಗೆ ಯಂತ್ರೋಪಕರಣಗಳಿಗೆ ಕನಿಷ್ಟ 03 ರಿಂದ 05 ವರ್ಷ ಹಾಗೂ ಕಚ್ಚಾ ಸಾಮಗ್ರಿಗಳಿಗೆ ಕನಿಷ್ಟ 05 ರಿಂದ 08 ವರ್ಷ ಪ್ರವೇಶ ತೆರಿಗೆ ವಿನಾಯಿತಿ ಇದೆ.
ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಸಹಾಯಧನ
ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಬಯಸುವ ಸಣ್ಣ , ಅತಿ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಗರಿಷ್ಠ 50 ಲಕ್ಷ ರೂ. ಪ.ಜಾತಿ/ಪ.ವರ್ಗ, ಅಲ್ಪಸಂಖ್ಯಾತ, ಅಂಗವಿಕಲ, ಹಿಂದುಳಿದ ವರ್ಗ, ಮಾಜಿ ಸೈನಿಕರಿಗೆ ಶೇ. 75, ಗರಿಷ್ಟ 01 ಕೋಟಿ ರೂ. ಹಾಗೂ ದೊಡ್ಡ, ಮೆಗಾ, ಅಲ್ಟ್ರಾ ಮೆಗಾ, ಸೂಪರ್ ಮೆಗಾ ಕೈಗಾರಿಕೆಗಳಿಗೆ ಶೇ. 50, ಗರಿಷ್ಠ 2 ಕೋಟಿ ರೂ. ವರೆಗೆ ಸಹಾಯಧನ ನೀಡಲಾಗುವುದು.
ವಿವಿಧ ಬಗೆಯ ನೆರವು : ಸಣ್ಣ , ಅತಿ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ವಿದ್ಯುತ್ ಶುಲ್ಕದ ಮೇಲೆ ಕನಿಷ್ಟ 04 ರಿಂದ 07 ವರ್ಷಗಳ ಕಾಲ ತೆರಿಗೆ ವಿನಾಯಿತಿ ಒದಗಿಸಲಾಗುವುದು. ಮಳೆ ನೀರು ಕೊಯ್ಲು, ರ್ಯಾಜ್ಯ ನೀರು ಮರು ಸಂಸ್ಕರಣೆ, ಶೂನ್ಯ ತ್ಯಾಜ್ಯ ಹೊರ ಹೋಗುವಿಕೆ ನಿರ್ವಹಣೆಗಾಗಿ ಸಹಾಯಧನ ಸೌಲಭ್ಯ ಕಲ್ಪಿಸಲಾಗುವುದು. ಇಂಧನ ಸಂರಕ್ಷಣೆ ಕ್ರಮಗಳಿಗೆ ಸಹಾಯಧನ, ಯೋಜನಾ ವರದಿ ತಯಾರಿಕೆ ವೆಚ್ಚದ ಮರು ಸಂದಾಯಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೆಐಎಡಿಬಿ/ಕೆಎಸ್‍ಐಡಿ ಯಿಂದ ರಿಯಾಯಿತಿ ದರದಲ್ಲಿ ನಿವೇಶನ/ಮಳಿಗೆ ಹಂಚಿಕೆ ಸೌಲಭ್ಯವಿದೆ.
ಅರ್ಹ ಕೈಗಾರಿಕೆಗಳು
ಉತ್ತೇಜನ ಸೌಲಭ್ಯಕ್ಕೆ ಅರ್ಹವಾದ ಸೇವಾ ವಲಯದ ಕೈಗಾರಿಕೆಗಳ ವಿವರ ಇಂತಿದೆ. ಕೈಗಾರಿಕೆಗಳಿಗೆ ನೆರವಾಗುವ ಲಾಜಿಸ್ಟಿಕ್ ಸೌಕರ್ಯಗಳು. ಸೇವಾ ಕಾರ್ಯದಲ್ಲಿ ನಿರತವಾಗಿರುವ ಪವರ್ ಕೋಟಿಂಗ್, ಪೇಂಟಿಂಗ್, ಇಂಡಸ್ಟ್ರಿಯಲ್ ಪೇಂಟಿಂಗ್, ಕೆಐಡಿಬಿ/ಕೆಎಸ್‍ಎಸ್‍ಐಡಿಸಿ ಕೈಗಾರಿಕಾ ವಲಯ/ವಸಾಹತುಗಳಲ್ಲಿ ಸ್ಥಾಪಿತಗೊಳ್ಳುವ ವೇಬ್ರಿಡ್ಜ್, ಹೆಲ್ತ್ ಕೇರ್ ಫೆಸಿಲಿಟಿ ಘಟಕಗಳು. ಮೆಟೀರಿಯಲ್/ಪ್ರಾಡಕ್ಟ್ ಟೆಸ್ಟಿಂಗ್ ಲ್ಯಾಬೊರೇಟರಿ. ಫ್ಲೋರ್‍ಮಿಲ್ಸ್, ಎಲ್ಲಾ ವಿಧವಾದ ಉಪಕರಣಗಳ ನಿರ್ವಹಣೆ ಮತ್ತು ದುರಸ್ತಿ. ಟೈಲರಿಂಗ್, ಜನರಲ್ ಇಂಜಿನಿಯರಿಂಗ್, ಫ್ಯಾಬ್ರಿಕೇಶನ್, ಮೋಟಾರ್ ರಿವೈಂಡಿಂಗ್, ಆಟೋಮೊಬೈಲ್ ಸರ್ವಿಸ್ ಮತ್ತು ದುರಸ್ತಿ, ಎಲೆಕ್ಟ್ರೋ ಪೇಂಟಿಂಗ್ ಇತ್ಯಾದಿ. ಎಲ್ಲ ವಿಧವಾದ ಪ್ರಿಂಟಿಂಗ್ ಪ್ರೆಸ್.
ಚಿತ್ರದುರ್ಗ ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರ ವಿಸ್ತರಣೆಗೊಳ್ಳಲು ನೂತನ ಕೈಗಾರಿಕಾ ನೀತಿ ಹಲವು ಬಗೆಯ ಯೋಜನೆ, ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡುತ್ತಿದ್ದು, ಸರ್ಕಾರದ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವ ಮೂಲಕ, ಉದ್ಯಮ ಸ್ಥಾಪಿಸಲು ಆಸಕ್ತರು ಮುಂದಾಗಬೇಕಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಜೋಗಿಮಟ್ಟಿ ರಸ್ತೆ, ಚಿತ್ರದುರ್ಗ, ದೂರವಾಣಿ ಸಂ: 08194-235994 / 235817. www.karnatakaindustry.gov.in ವೆಬ್‍ಸೈಟ್ ಸಂಪರ್ಕಿಸಬಹುದಾಗಿದೆ.