ದಿನದ ಸುದ್ದಿ

‘ಪೌರತ್ವ (ತಿದ್ದುಪಡಿ) ಮಸೂದೆ’ | ದೇಶ ಒಡೆಯುವ ಬಿಜೆಪಿಯ ಗುಪ್ತ ಅಜೆಂಡಾದ ಭಾಗವಿದು : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ,ಬೆಂಗಳೂರು : ಅವಸರದಿಂದ ಮಧ್ಯರಾತ್ರಿ ಲೋಕಸಭೆ ಅಂಗೀಕರಿಸಿದ ‘ಪೌರತ್ವ (ತಿದ್ದುಪಡಿ) ಮಸೂದೆ’ ಸಂವಿಧಾನದ ಮೂಲ‌ ಆಶಯಗಳಾದ ಸಮಾನತೆ ಮತ್ತು ಜಾತ್ಯತೀತತೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಈ ಮಸೂದೆ ಧರ್ಮದ ಆಧಾರದಲ್ಲಿ ದೇಶ ಒಡೆಯುವ ಬಿಜೆಪಿಯ ಗುಪ್ತ ಅಜೆಂಡಾದ ಭಾಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವುದು ಸಂವಿಧಾನ ವಿರೋಧಿ ನಡೆ. ಈ ಮಸೂದೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಅವರನ್ನು ಹತ್ತಿಕ್ಕುವ ದುರುದ್ದೇಶ ಇದೆಯೇ ಹೊರತು ವಲಸೆ ಸಮಸ್ಯೆಯನ್ನು ಪರಿಹರಿಸುವ ಸದುದ್ದೇಶ ಖಂಡಿತ ಇಲ್ಲ. ದ್ವಿರಾಷ್ಟ್ರ ಸಿದ್ದಾಂತವನ್ನು ಪ್ರತಿಪಾದಿಸಿದ್ದ ಬಿಜೆಪಿಯ ಮೂಲಪುರುಷರ ಆಶಯವನ್ನು ಕೇಂದ್ರ ಸರ್ಕಾರ ಈಡೇರಿಸಲು ಹೊರಟಿರುವುದು ಸ್ಪಷ್ಟ. ದೇಶ ಒಡೆಯಲು ಹೊರಟಿರುವ ಬಿಜೆಪಿ ಸಂಚಿನ ವಿರುದ್ದ ಜಾತ್ಯತೀತ ಭಾರತ ಸಂಘಟಿತವಾಗಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚುತ್ತಿರುವ ನಿರುದ್ಯೋಗ, ಮುಚ್ಚುತ್ತಿರುವ ಕೈಗಾರಿಕೆಗಳು, ಏರುತ್ತಿರುವ ಸಾಮಗ್ರಿಗಳ ಬೆಲೆ, ಕುಸಿಯುತ್ತಿರುವ ಜಿಡಿಪಿ, ದಿವಾಳಿಯಾಗುತ್ತಿರುವ ಬ್ಯಾಂಕುಗಳ ಸ್ಥಿತಿಯಿಂದ ಜನ‌ಮನ ಬೇರೆಡೆ ಸೆಳೆಯಲು ಬಿಜೆಪಿ ಪೌರತ್ವ ಮಸೂದೆಯ ಅಸ್ತ್ರ ಬಳಸಲು ಹೊರಟಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version