ದಿನದ ಸುದ್ದಿ
ಬೆಂಗಳೂರಿಗೆ ಬರಲಿವೆ ಪರಿಸರ ಸ್ನೇಹಿ ಸಿಎನ್‍ಜಿ ಕ್ಯಾಬ್‍ಗಳು
ಸುದ್ದಿದಿನ ಡೆಸ್ಕ್: ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಜಾರಿಗೆ ತರಲುದ್ದೇಶಿಸಿದ್ದ ಪರಿಸರ ಸ್ನೇಹಿ ಸಿಎನ್‍ಜಿ ಕ್ಯಾಬ್‍ಗಳು ತಡವಾಗಿಯಾದರೂ ಈಮಾಸಾಂತ್ಯಕ್ಕೆ ಬೆಂಗಳೂರನ್ನು ಪ್ರವೇಶಿಸಲಿವೆ.
ಯುಬರ್ ಕ್ಯಾಬ್ ಸೇವಾ ಸಂಸ್ತೆಯು ಗೇಯ್ಲ್ ಗ್ಯಾಸ್ ಸಂಸ್ಥೆ ಜತೆ ಸೇರಿ ಸಿಎನ್‍ಜಿ ಕ್ಯಾಬ್‍ಗಳನ್ನು ಜೂನ್ 20ರಿಂದ ಬೆಂಗಳೂರಿಗೆ ಬಿಡಲು ನಿರ್ಧರಿಸಿವೆ.
ಮೊದಲ ಹಂತದಲ್ಲಿ 50 ಸಿಎನ್‍ಜಿ ಕ್ಯಾಬ್‍ಗಳ ಸೇವೆಯನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಲ್ಪಿಸುತ್ತಿದ್ದು, ಕ್ರಮೇಣ ಇದನ್ನು ಇನ್ನಷ್ಟು ವಿಸ್ತರಿಸುವುದು ಎರಡೂ ಸಂಸ್ಥೆಗಳ ಉದ್ದೇಶವಾಗಿದೆ.
ಜಿಬ್ ಕ್ಯಾಬ್ ಸಂಸ್ಥೆ ಕೂಡ ಜೂ. 25ರಂದು ಪರಿಸರ ಸ್ನೇಹಿ ಸಿಎನ್‍ಜಿ ಕಾರುಗಳನ್ನು ಬೆಂಗಳೂರಿಗೆ ಪರಿಚಯಿಸುತ್ತಿದೆ.
ಸಿಎನ್‍ಜಿ ಚಾಲಿತ ವಾಹನಗಳನ್ನು ಬಳಸುವುದರಲ್ಲಿ ಬೆಂಗಳೂರು ಬಹಳ ಹಿಂದೆ ಉಳಿದಿದೆ. ಇದಕ್ಕೆ ಜಾಗೃತಿ ಇಲ್ಲದಿರುವುದೇ ಮುಖ್ಯ ಕಾರಣ. ಹಾಗೆ ನೋಡಿದರೆ 2016ರಲ್ಲೇ ಬೆಂಗಳೂರಿನಲ್ಲಿ ಸಿಎನ್‍ಜಿ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ ಆರಂಭವಾಯಿತು. ಆದರೂ, ಬೆಂಗಳೂರಿಗರು ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸಲು ಮುಂದಾಗಲಿಲ್ಲ ಎನ್ನುತ್ತಾರೆ ಉಬರ್ ವಕ್ತಾರರು.
ಸದ್ಯ ಗೇಯ್ಲ್ ಸಿಎನ್‍ಜಿ ಗ್ಯಾಸ್ ಫಿಲ್ಲಿಂಗ್ ಕೇಂದ್ರವು ಲಗ್ಗೆರೆ ಹಾಗೂ ಸುಂಕದಕಟ್ಟೆಯಲ್ಲಿದೆ. ಪೀಣ್ಯ, ಬೊಮ್ಮಸಂದ್ರ, ಜಿಗಣಿ, ಬಂಡೆ ಕೊಡಿಗೆಹಳ್ಳಿಗೆ ವಿಸ್ತರಿಸಬೇಕೆಂಬುದು ಕಂಪನಿಯ ಉದ್ದೇಶವಾಗಿದೆ.
ಬೆಂಗಳೂರಿನಲ್ಲಿ ಸುಮಾರು 1.56 ಲಕ್ಷ ಕ್ಯಾಬ್ ಸೇವೆ ಇದೆ. ದೆಹಲಿಯಲ್ಲಿ ಡೀಸೆಲ್ ಕಾರುಗಳನ್ನು ನಿಷೇಧಿಸಿದ ಬೆನ್ನ ಹಿಂದೆಯೇ ಅಷ್ಟೂ ಕಾರುಗಳನ್ನು ಬೆಂಗಳೂರಿಗೆ ಹಸ್ತಾಂತರಿಸಲಾಗಿತ್ತು. ಮುಂಬಯಿ ಕೂಡ ಡೀಸೆಲ್ ಕಾರುಗಳ ನಿಷೇಧಕ್ಕೆ ಚಿಂತಿಸಿದೆ.