ದಿನದ ಸುದ್ದಿ
ಮಾನವ ಹಕ್ಕುಗಳ ಸಂರಕ್ಷಣೆಗೆ ಆಯೋಗ ಸುಮೋಟೋ ಕೇಸ್ ; ಆಯೋಗದ ಹೆಸರೇಳಿ ಬೆದರಿಸುವರ ಮೇಲೆ ಕಾನೂನು ಕ್ರಮ: ಟಿ.ಶ್ಯಾಮ್‍ಭಟ್
ಸುದ್ದಿದಿನ,ದಾವಣಗೆರೆ:ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟಲು ನೇರ ದೂರುಗಳ ಜೊತೆಗೆ ಸ್ವಯಂ ಪ್ರೇರಿತ ದೂರುಗಳನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಟಿ.ಶ್ಯಾಮ್‍ಭಟ್ ತಿಳಿಸಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಬಾಕಿ ಇರುವ ಜಿಲ್ಲೆಯ ಪ್ರಕರಣಗಳ ಕುರಿತು ವಿಚಾರಣೆ ನಡೆಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು. ಸರ್ಕಾರದ ವಿವಿಧ ಇಲಾಖೆಗಳು ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಕಚೇರಿಗಳಿಗೆ ಬಂದಾಗ ಅವರ ಅಹವಾಲುಗಳನ್ನು ಸೌಜನ್ಯಯುತವಾಗಿ ಸ್ವೀಕರಿಸಿ ನೋವು, ನಲಿವುಗಳಿಗೆ ಸ್ಪಂದನೆ ನೀಡಿದಾಗ ಸಾಕಷ್ಟು ಪರಿಹಾರ ಸಿಕ್ಕಂತಾಗುತ್ತದೆ. ಯಾವುದೇ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೇ ನಿಯಮಾನುಸಾರವಾಗಿ ಕೆಲಸ ಮಾಡಿಕೊಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು. ಅರ್ಹತೆ ಇದ್ದರೂ ಸೌಲಭ್ಯಗಳನ್ನು ನೀಡದಿದ್ದಲ್ಲಿ ಅದು ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದರು.
ಮಾನವ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳಲ್ಲಿ ಆಯೋಗಕ್ಕೆ ನೇರವಾಗಿ, ಆನ್‍ಲೈನ್ ಮೂಲಕವೂ ಅತ್ಯಂತ ಕಡಿಮೆ ಖರ್ಚಿನಲ್ಲಿ ದೂರುಗಳನ್ನು ನೀಡಬಹುದಾಗಿದೆ. ಸಾರ್ವಜನಿಕ ಹಿತಾಸಕ್ತಿ ದೂರುಗಳನ್ನು ಸ್ವಯಂಪ್ರೇರಿತವಾಗಿ ದಾಖಲು ಮಾಡಲಾಗುತ್ತದೆ. ಸಾರ್ವಜನಿಕರಿಗೆ ಇರುವ ಮೂಲಭೂತ ಹಕ್ಕುಗಳನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಉಲ್ಲಂಘನೆಯ ಬಗ್ಗೆ ಇಲಾಖೆಗಳಿಗೆ ದೂರುಗಳು ಬಂದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಇಲಾಖೆ ಅಧಿಕಾರಿಗಳು ಮಾಡಬೇಕಾಗಿದೆ ಎಂದರು.
ಅಧಿಕಾರ ವಹಿಸಿಕೊಂಡ ಸಮಯದಲ್ಲಿ ಆಯೋಗದಲ್ಲಿ 5400 ರಷ್ಟು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದವು, ಆಯಾ ಜಿಲ್ಲೆಗಳಿಗೆ ತೆರಳಿ ಅಲ್ಲಿಯೇ ಇಲಾಖೆ ಅಧಿಕಾರಿಗಳು, ದೂರುದಾರರೊಂದಿಗೆ ನೇರವಾಗಿ ವಿಚಾರಣೆ ಮಾಡಲಾಗುತ್ತಿದೆ. ಇದರಿಂದ ಶೀಘ್ರವಾಗಿ ಪ್ರಕರಣಗಳ ಇತ್ಯರ್ಥ ಮಾಡಲು ಸಾಧ್ಯವಾಗಲಿದೆ. ಬಾಕಿ ಇದ್ದ ಪ್ರಕರಣಗಳಲ್ಲಿ 2000 ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದು 3413 ಪ್ರಕರಣಗಳು ಆಯೋಗದಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ.
ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ 18 ಪ್ರಕರಣಗಳು ಬಾಕಿ ಇದ್ದು ಸ್ಥಳದಲ್ಲಿಯೇ ವಿಚಾರಣೆ ನಡೆಸಲಾಗಿದ್ದು 15 ಪ್ರಕರಣಗಳನ್ನು ಮುಕ್ತಾಯ ಮಾಡಲಾಗಿದೆ. ಬಾಕಿ ಮೂರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಬೆದರಿಕೆಗೆ ಕ್ರಮ; ಅನೇಕ ಸಂಘ, ಸಂಸ್ಥೆಯವರು ಮಾನವ ಹಕ್ಕುಗಳ ಆಯೋಗ, ಪರಿಷತ್ತು, ಹೋರಾಟ ಸಮಿತಿ ಎಂಬ ಹೆಸರನ್ನಿಟ್ಟುಕೊಂಡು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಬೆದರಿಕೆಯೊಡ್ಡುತ್ತಿರುವ ಬಗ್ಗೆ ಮಾಹಿತಿ ಇದೆ. ಯಾವುದೇ ವ್ಯಕ್ತಿ, ಸಂಘ, ಸಂಸ್ಥೆಯವರು ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಬೆದರಿಕೆಯೊಡ್ಡಿದಲ್ಲಿ ನೇರವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಇಲ್ಲವೇ ಆಯೋಗಕ್ಕೆ ದೂರು ನೀಡಬಹುದಾಗಿದೆ. ಯಾವುದೇ ವ್ಯಕ್ತಿ ಆಯೋಗದ ಹೆಸರಿನಲ್ಲಿ ಸಂಘ, ಸಂಸ್ಥೆ, ಪರಿಷತ್‍ಗಳನ್ನು ಸ್ಥಾಪನೆ ಮಾಡಿಕೊಳ್ಳುವಂತಿಲ್ಲ, ಅವರ ಹಕ್ಕುಗಳ ಉಲ್ಲಂಘನೆಯಾಗಿದ್ದಲ್ಲಿ ನೇರವಾಗಿ ಆಯೋಗಕ್ಕೆ ದೂರು ನೀಡಬಹುದು. ಆದರೆ ಹೆಸರಿಟ್ಟುಕೊಂಡು ಬೆದರಿಕೆ ಸಲ್ಲದು, ಅಧಿಕಾರಿಗಳು ಇಂತಹ ವ್ಯಕ್ತಿಗಳಿಗೆ ಕಡಿವಾಣ ಹಾಕಿ ಎಂದರು.
ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಮಾತನಾಡಿ ಪ್ರತಿಯೊಬ್ಬರಿಗೂ ನೈಸರ್ಗಿಕವಾಗಿ ಬಂದಂತಹ ಹಕ್ಕುಗಳು, ಪರಭಾರೆಯಾಗಂತಹ ಹಕ್ಕುಗಳಾಗಿವೆÀ. ಮತ್ತು ಸಂವಿಧಾನದತ್ತವಾಗಿ ಬಂದಂತಹ ಹಕ್ಕುಗಳು ಸೇರಿವೆ. ಇದರಲ್ಲಿ ಯಾವುದೇ ಹಕ್ಕುಗಳು ಉಲ್ಲಂಘನೆಯಾದರೂ ಪ್ರಶ್ನಿಸುವ ಹಕ್ಕು ಎಲ್ಲರಿಗಿದೆ. ನೊಂದವರು ನೇರವಾಗಿ ಆಯೋಗಕ್ಕೆ ದೂರು ನೀಡಬಹುದು. ಮತ್ತು ಆಯೋಗವು ಸಹ ಮಾಧ್ಯಮಗಳಲ್ಲಿ ಬರುವ ದೂರುಗಳನ್ನು ಆಧರಿಸಿ ಸ್ವಯಂಪ್ರೇರಿತ ದೂರುಗಳನ್ನಾಗಿ ಆಯೋಗ ದಾಖಲು ಮಾಡಿಕೊಳ್ಳಲಿದೆ ಎಂದರು.
ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿನ ಬಿಸಿಎಂ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‍ಗೆ ಅನಿರೀಕ್ಷಿತ ಭೇಟಿ ನೀಡಿದ ವೇಳೆ ಪ.ಪಂಗಡದ ಹಾಸ್ಟೆಲ್‍ನಲ್ಲಿ ಮಂಜೂರಾತಿ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದು ಈಗಿರುವ ಅಡುಗೆ ಸಿಬ್ಬಂದಿಗೆ ಕಾರ್ಯಭಾರ ಹೆಚ್ಚಿದೆ. ಇದಕ್ಕೆ ಹೆಚ್ಚುವರಿ ಸಿಬ್ಬಂದಿ ಮಂಜೂರು ಮಾಡಿಸಲು ಮತ್ತು ರಾತ್ರಿ ಕಾವಲು ಹೊರಗುತ್ತಿಗೆ ಸಿಬ್ಬಂದಿಗೆ ಕಡಿಮೆ ವೇತನ ಪಾವತಿಸಲಾಗುತ್ತಿದೆ ಎಂಬ ಸಿಬ್ಬಂದಿ ಅಹವಾಲಾಗಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್‍ಗೆ ಬಸ್ ವ್ಯವಸ್ಥೆ ಕಲ್ಪಿಸಲಾಗದೆ, ಆದರೆ ಬೆಳಗ್ಗೆ ಒಂದು ಬಸ್ ಮಾತ್ರ ಬರುತ್ತಿದ್ದು ಬಸ್‍ಗಳನ್ನು ಹೆಚ್ಚಿಸಲು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು. ಕಾಲೇಜು ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೊಠಡಿಯ ವ್ಯವಸ್ಥೆ ಹೊಸ ಕಟ್ಟಡ ನಿರ್ಮಾಣದ ವೇಳೆ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಮಾತನಾಡಿ ಹಾಸ್ಟೆಲ್‍ಗೆ ಹೆಚ್ಚುವರಿ ಬಸ್ ವ್ಯವಸ್ಥೆ, ಬಾಲಕಿಯರಿಗೆ ಡ್ರೆಸ್ಸಿಂಗ್ ರೂಂ, ಬಿಸಿ ನೀರು ವ್ಯವಸ್ಥೆ, ಹೊಸ ಜೈಲು ನಿರ್ಮಾಣ, ಹೊಸ ಸಿಜಿ ಆಸ್ಪತ್ರೆ ಕಟ್ಟಡ ನಿರ್ಮಾಣದ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಆಯೋಗಕ್ಕೆ ಮನವರಿಕೆ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243