ದಿನದ ಸುದ್ದಿ

ಸಾಮೂಹಿಕ ಸಾರಿಗೆಯತ್ತ ಮುಖಮಾಡಲು ’ಚಲೋ’ ಉಪಕಾರಿ : ಹಿರಿಯ ನಿರೀಕ್ಷಕ ಸತೀಶ್

Published

on

ಸುದ್ದಿದಿನ,ದಾವಣಗೆರೆ : ಕೊರೋನಾ ನಂತರದ ದಿನಗಳಲ್ಲಿ ಜನರು ಸಾಮೂಹಿಕ ಸಾರಿಗೆಯಿಂದ ವಿಮುಖರಾಗುತ್ತಿರುವ ದಿನಗಳಲ್ಲಿ ’ಚಲೋ’ ಜನರನ್ನು ಸಾಮೂಹಿಕ ಸಾರಿಗೆಯತ್ತ ಮುಖ ಮಾಡುವಂತೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಆರ್‌ಟಿಓ ಹಿರಿಯ ನಿರೀಕ್ಷಕ ಸತೀಶ್ ಅಭಿಪ್ರಾಯಪಟ್ಟರು.

ನಗರದ ಎಸ್.ಎಸ್. ಮಾಲ್ ಹೋಟೆಲ್ ಸದರ್ನ್ ಸ್ಟಾರ್‌ನಲ್ಲಿ ಬುಧವಾರ ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಆಪರೇಟರುಗಳ ಸಂಘ ಆಯೋಜಿಸಿದ್ದ ವ್ಯಾಲೆಟ್ ಸೌಕರ್ಯವಿರುವ ಚಲೋ ಕಾರ್ಡ್ ಅನಾವರಣ ಮಾಡಿ ಅವರು ಮಾತನಾಡಿದರು.

ಎಲ್ಲಾ ಕ್ಷೇತ್ರಗಳೂ ಇಂದು ಡಿಜಟಲೀಕರಣಗೊಂಡು ಕ್ಯಾಶ್‌ಲೆಸ್ ಆಗಿ ವ್ಯವಹರಿಸುತ್ತಿರುವ ಇಂದಿನ ದಿನಮಾನದಲ್ಲಿ ಸಾರಿಗೆ ವ್ಯವಸ್ಥೆಯಲ್ಲೂ ಸಹ ಕ್ಯಾಶ್‌ಲೆಸ್ ಸೌಲಭ್ಯವನ್ನು ಚಲೋ ನೀಡುತ್ತಿರುವುದು ಸ್ವಾಗತಾರ್ಹ ಎಂದರು.

ಕೊರೋನಾದಿಂದ ನಷ್ಟ ಅನುಭವಿಸುತ್ತಿರುವ ಬಸ್ ಮಾಲೀಕರಿಗೆ ಚಲೋ ವ್ಯವಸ್ಥೆಯಿಂದ ಲಾಭದತ್ತ ಸಾಗಲಿ. ಸಾಮೂಹಿಕ ಸಾರಿಗೆಯಿಂದ ಸಂಚಾರವೂ ಸುಗಮವಾಗುವುದಲ್ಲದೇ, ನೈರ್ಮಲ್ಯವೂ ಕಡಿಮೆಯಾಗುತ್ತದೆ ಎಂದರು.

ಖಾಸಗಿ ಬಸ್ ಆಪರೇಟರ್ ಎಂ.ಎನ್. ಹರೀಶ್ ಮಾತನಾಡಿ, ಚಲೋದಿಂದ ಈಗ ಮೂರರಿಂದ ನಾಲ್ಕು ಪರ್ಸೆಂಟ್ ಜನ ಕ್ಯಾಶ್‌ಲೆಸ್ ಸೇವೆ ಪಡೆದುಕೊಳ್ಳುತ್ತಿದ್ದು, ಬಸ್ ಮಾಲೀಕರಿಗೂ ಇದರಿಂದ ಉಪಯೋಗವಾಗಿದೆ. ಹಿರಿಯ ನಾಗರಿಕರಿಗೆ, ಶಾಲಾ ಮಕ್ಕಳಿಗೆ, ನೌಕರರಿಗೆ, ದಿನನಿತ್ಯ ಸಾರಿಗೆ ಸಂಚರಿಸುವವರಿಗೆ ಇದು ಉಪಯುಕ್ತವಾಗಿದೆ. ಮುಂದಿನ ದಿನಗಳಲ್ಲಿ ಶೇ.100 ಕ್ಯಾಶ್‌ಲೆಸ್ ಸೇವೆಯ ಜೊತೆಗೆ ಇತರೆ ಉಪಯುಕ್ತ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಚಲೋ ಕಾರ್ಯ ನಿರ್ವಹಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಸ್ ಮಾಲೀಕರ ಸಂಘದ ಗೌರವಾಧ್ಯಕ್ಷ ಮಲ್ಲೇಶಪ್ಪ, ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ಸತೀಶ್. ಎಂ. ಆರ್., ಸಚಿನ್, ವಿಜಯ್ ಹಾಗೂ ಚಲೋ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version