ದಿನದ ಸುದ್ದಿ

ಐತಿಹಾಸಿಕ ಚರಿತ್ರೆಯುಳ್ಳ ನಲ್ಕುದುರೆ ಗ್ರಾಮದ ಸಮುದಾಯ ಭವನ ಮೇ 15 ರಂದು ಲೋಕಾರ್ಪಣೆ

Published

on

  • ಹಾಲೇಶ್ ಹೆಚ್. ಎಸ್. ಹಂಚಿನಮನೆ ನಲ್ಕುದುರೆ

ಮೇ 15 ರಂದು ನೆರವೇರಲಿರುವ ಚನ್ನಗಿರಿ ತಾಲ್ಲೂಕಿನ ನಲ್ಕುದುರೆ ಗ್ರಾಮದ ಶ್ರೀ ವೀರಭದ್ರೇಶ್ವರ ಸಾರ್ವಜನಿಕ ಸಮುದಾಯ ಭವನದ ಉದ್ಘಾಟನೆ ಹಿನ್ನೆಲೆಯಲ್ಲಿ ವಿಶೇಷ ಲೇಖನ.


ಭದ್ರಾ ಅಚ್ಚುಕಟ್ಟು ಪ್ರದೇಶ, ಅರೆ ಮಲೆನಾಡಿನ ಬಯಲು ಸೀಮೆ, ಸಮಶೀತೋಷ್ಣ ವಲಯ, ಭತ್ತ ಗದ್ದೆಗಳ ಸಾಲು, ಕಂಗೊಳಿಸುವ ಆಡಿಕೆ – ತೆಂಗಿನ ಬೀಡು, ಭದ್ರಾ ನದಿಯ ಹುಸಿರಾದ ಐತಿಹಾಸಿಕ ಚರಿತ್ರೆಯುಳ್ಳ ಗ್ರಾಮ ಚನ್ನಗಿರಿ ತಾಲೂಕಿನ ನಲ್ಕುದುರೆ. ಅಗ್ರಹಾರ ಕೇಂದ್ರವಾಗಿದ್ದ ಇಲ್ಲಿನ ಪುರಾತನ ದೇವಾಲಯಗಳು, ಶಾಸನ, ವೀರಗಲ್ಲು, ಮಾಸ್ತಿಗಲ್ಲುಗಳು ಇಂದಿಗೂ ಸಂಶೊಧನೆಗೆ ಗ್ರಾಸವಾಗಿವೆ.

ಈ ಗ್ರಾಮದಲ್ಲಿ ಬಹುತೇಕ ಸೌಲಭ್ಯಗಳಿದ್ದು, ಮಾನವ ಕಲ್ಯಾಣಾರ್ಥ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ಸಾರ್ವಜನಿಕ ಸಮುದಾಯ ಭವನ ಇದೇ ಮೇ 15 ರಂದು ಲೋಕಾರ್ಪಣೆ ಯಾಗಲಿದೆ.

ನಲ್ಕುದುರೆ ಗ್ರಾಮ ಪಂಚಾಯತಿಗೆ ಗೋಮಾಳ, ನಲ್ಕುದುರೆ ಕ್ಯಾಂಪ್ ಕೂಡ ಸೇರಿದ್ದು, ಸುಮಾರು ಮೂರರಿಂದ ನಾಲ್ಕು ಸಾವಿರ ಸಂಖ್ಯೆಯ ಈ ಗ್ರಾಮದ ಜನತೆ ಪ್ರೀತಿ, ಶಾಂತಿ, ಸಹಕಾರ, ಅನ್ಯೋನ್ಯತೆಯ ಬದುಕಿಗೆ ಮಾದರಿಯಾಗಿದ್ದಾರೆ. ಕಾಯಕವೇ ಕೈಲಾಸವೆಂದು ಭಾವಿಸಿ ವೃತ್ತಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಹಿಂದೆ ಗ್ರಾಮದ ಜನತೆ ಮದುವೆ, ಸಭೆ – ಸಮಾರಂಭ ಆಯೋಜನೆಗಾಗಿ ಸುಮಾರು 25 ರಿಂದ 30 ಕಿಲೋಮೀಟರ್ ದೂರ ಹೋಗಬೇಕಿತ್ತು. ಅಲ್ಲದೆ ನಗರದ ಸಮುದಾಯದ ಭವನಗಳಿಗೆ ಅತಿ ಹಣ ಹೊಂದಿಸುವುದು ಬಡವರಿಗೆ, ಸಾಮಾನ್ಯ ವರ್ಗದವರಿಗೆ ಸಾಧ್ಯವಾಗದ ಮಾತಾಗಿತ್ತು.

ವಿವಿಧ ಬಗೆಯ ಕಾರ್ಮಿಕರ ಕೊರತೆಯಿಂದ ಹಳ್ಳಿಯಲ್ಲಿ ಸಮಾರಂಭ ಮಾಡುವುದು ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡಂತಾಗುತಿತ್ತು. ಇದನ್ನರಿತ ಗ್ರಾಮದ ಜನತೆ ಸಾಂದರ್ಭಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಕೊನೆಗೊಮ್ಮೆ ಅನೌಪಚಾರಿಕವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಸಭೆ ಕರೆದು ಸಮುದಾಯದ ಭವನ ನಿರ್ಮಾಣ ಮಾಡಲೇಬೇಕೆಂದು ತೀರ್ಮಾನಿಸಿ, ಕೈಲಾದ ಹಣ ಘೋಷಣೆ ಮಾಡಿದಲ್ಲದೆ ಅದಕ್ಕಾಗಿ ಸಮಿತಿ ರಚನೆ ಮಾಡಿದರು.

ಈ ಸಮಿತಿಯ ಕಾರ್ಯದರ್ಶಿಯಾಗಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀಯುತ ಹೆಚ್. ವಿ. ಸಿದ್ದಪ್ಪ ಹಂಚಿನಮನಿ ಇವರನ್ನು ಆಯ್ಕೆ ಮಾಡಲಾಯಿತು. ಇವರ ನೇತೃತ್ವದಲ್ಲಿ ಗ್ರಾಮದ ಮುಖಂಡರ ಸಹಯೋಗದೊಂದಿಗೆ ದೇಣಿಗೆ ಸಂಗ್ರಹ ಮೂಲಕ ಸಂಪೂರ್ಣಗೊಂಡು ಸಮಾರಂಭಗಳ ಆಯೋಜನೆಗೆ ಇದೀಗ ಭವನ ಸಜ್ಜಾಗಿ ನಿಂತಿದೆ.

ಈ ಸಮುದಾಯ ಭವನ ನಿರ್ಮಾಣಕ್ಕೆ ಶ್ರೀಯುತರು ಹಾಕಿದ ನಿರಂತರ ಶ್ರಮ, ಪರಿಶ್ರಮ, ಸಹಕಾರ, ವಿಶ್ವಾಸ ಹಾಗೂ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಗ್ರಾಮಸ್ಥರು, ಶ್ರೀ ವೀರಭದ್ರೇಶ್ವರ ಸ್ವಾಮಿಯ ಭಕ್ತರು, ಮನೆ ದೇವರು ಎಂದು ಪೂಜಿಸುವ ಭಕ್ತಾದಿಗಳು, ಬೇರೆ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮದ ನೌಕರರು, ಗ್ರಾಮ ಪಂಚಾಯಿತಿಯ ಸದಸ್ಯರು, ಅಧ್ಯಕ್ಷರು, ತಾಲೂಕು ಪಂಚಾಯತ್ ಸದಸ್ಯರು, ವಿಧಾನ ಪರಿಷತ್, ವಿಧಾನಸಭೆ , ಲೋಕ ಸಭೆಯ ಹಾಲಿ ಹಾಗೂ ಮಾಜಿ ಮಂತ್ರಿಗಳು, ಇತ್ಯಾದಿ ಎಲ್ಲರ ತನು ಮನ ಧನ ಸಹಕಾರದೊಂದಿಗೆ ನಿರ್ಮಾಣವಾದ ಶ್ರೀ ವೀರಭದ್ರೇಶ್ವರ ಸಮುದಾಯ ಭವನ ಲೋಕಾರ್ಪಣೆಯಾಗುತ್ತಿದೆ.

ಐತಿಹಾಸಿಕ ಹಿನ್ನೆಲೆಯ ಗ್ರಾಮ

ಈ ಗ್ರಾಮದಲ್ಲಿ ಸಾವಿರ ವರ್ಷಗಳ ಹಿಂದೆ ನಿರ್ಮಾಣವಾದ ರಾಷ್ಟ್ರಕೂಟ ಮತ್ತು ಚಾಲುಕ್ಯ ಶೈಲಿಯ ಪುರಾತನ ದೇವಾಲಯಗಳು, ವೀರಗಲ್ಲುಗಳು, ಮಾಸ್ತಿ ಕಲ್ಲುಗಳು, ಹೆಜ್ಜೆಗೊಂದು ದೇವಸ್ಥಾನ, ಅಗ್ರಹಾರ ಕೇಂದ್ರ ಹಾಗೂ 1802 ರಲ್ಲಿ ಲೂಯಿಸ್ ರೈಸ್ ಗುರುತು ಮಾಡಿರುವ ಬ್ರಹ್ಮಶ್ವರ್ ದೇವಾಲಯವಿದೆ. ಶಿವಲಿಂಗ, ನಂದಿ, ಭೈರವ, ಕೇಶವ, ನಾಗ ಮೂರ್ತಿಗಳು ಕಲೆಗೆ ಹೆಸರಾಗಿವೆ. ಅಲ್ಲದೆ ಈಶ್ವರ ದೇವಸ್ಥಾನದಲ್ಲಿ ಶಾಸನ ಹಳೆಗನ್ನಡದಲ್ಲಿದ್ದು ಇದರ ಮಾಹಿತಿ ಪರಿಪೂರ್ಣ ಪ್ರಕಟಿಸಬೇಕಾಗಿದೆ. ಸುಮಾರು 300 ವರ್ಷ ಇತಿಹಾಸ ಉಳ್ಳ ವೀರಭದ್ರಸ್ವಾಮಿಯ ದೇವಾಲಯ ಇತ್ತೀಚಿಗೆ ಜೀರ್ಣೋದ್ದಾರವಾಗಿದೆ. ವಿದ್ಯಾರಣ್ಯರು ತಾಮ್ರ ಪತ್ರ ನೀಡಿರುವ ಉಲ್ಲೇಖವಿದೆ.

ಶಿಥಿಲಾವಸ್ಥೆಯಲ್ಲಿರುವ ಇಲ್ಲಿನ ಕೆಲ ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಿ ಉಳಿಸುವ ಜೊತೆ ಮುಂದಿನ ಜನಾಂಗಕ್ಕೆ ಸ್ಥಳೀಯ ಇತಿಹಾಸದ ಅಂಶಗಳನ್ನು ತಿಳಿಸಬೇಕಾಗಿದೆ.

ನೀರಿನ ಹೊಂಡಗಳು

ಗ್ರಾಮದಲ್ಲಿ ಲಕ್ಕಣ್ಣನ ಕಟ್ಟೆ ಮತ್ತು ಕಲ್ಲೇಶ್ವರ ಹೊಂಡವಿದ್ದು, ಕೆರೆ ಮತ್ತು ಭದ್ರ ಕಾಲುವೆಗಳು ಕೃಷಿ, ವ್ಯವಸಾಯ ಮಾಡಲು ಅನುಕೂಲಕರ ವಾತಾವರಣವಿದೆ.

ರಾಜಕೀಯ ಛಾಪು

ರಾಜಕೀಯವಾಗಿ ತಮ್ಮದೇ ಆದ ವಿಶಿಷ್ಠ ಛಾಪು ಬಿಟ್ಟು ಹೋಗಿರುವ ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದ ದಿವಂಗತ ಟಿ. ವಿ.ಚಂದ್ರಶೇಖರಪ್ಪನವರು ಹಾಗೂ ಪರಿಸರ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾಗಿದ್ದ ದಿವಂಗತ ಎನ್. ಜಿ ಹಾಲಪ್ಪನವರು ಇದೇ ಊರಿನವರು ಎಂಬುದು ಗ್ರಾಮದ ಹೆಗ್ಗಳಿಕೆ.

ಶಿವಮೊಗ್ಗದಿಂದ ಬೇರ್ಪಟ್ಟ ನಂತರ ನಲ್ಕುದುರೆ ಗ್ರಾಮ ಚನ್ನಗಿರಿ ತಾಲ್ಲೂಕಿನಲ್ಲಿ ಇದ್ದರೂ ಮಾಯಕೊಂಡ ಕ್ಷೇತ್ರಕ್ಕೆ ಸೇರಿದೆ. ಪ್ರಸ್ತುತ ಚನ್ನಗಿರಿ ತಾಲ್ಲೂಕಿಗೂ ಹಾಗೂ ಮಾಯಕೊಂಡಕ್ಕೂ ಕೊನೆಯ ಅಂಚಿನಲ್ಲಿ ಇರುವ ಕಾರಣ ರಾಜಕೀಯವಾಗಿ ನಿರ್ಲಕ್ಷ್ಯಕ್ಕೆ ಗುರಿಯಾಗದೆ ಸರ್ವರಂಗದಲ್ಲೂ ಈ ಗ್ರಾಮ ಅಭಿವೃದ್ಧಿ ಸಾಧಿಸಲು ರಾಜಕೀಯ ಧುರೀಣರು ಹಾಗೂ ಅಧಿಕಾರಿಗಳ ಸಹಾಯ ಸಹಕಾರದ ಹಸ್ತ ತಮ್ಮ ಗ್ರಾಮದ ಜೊತೆ ಸದಾ ಇರಲಿ ಎಂಬುದು ಗ್ರಾಮಸ್ಥರ ಆಶಯ.

(- ಹಾಲೇಶ್ ಹೆಚ್. ಎಸ್. ಹಂಚಿನಮನೆ ನಲ್ಕುದುರೆ
M.NO – 8867702396)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version