ದಿನದ ಸುದ್ದಿ

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ಧಲಿಂಗೇಶ ಬೇವಿನ್‌ಮಟ್ಟಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಲ್ಲಿ (ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗ) ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಸಮರ್ಪಕವಾಗಿ ಅಳವಡಿಸಿಕೊಂಡಿರುವ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಿ 2 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿದ್ಧಲಿಂಗೇಶ ಬೇವಿನ್‌ಮಟ್ಟಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.

ವಸತಿ ಶಾಲೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಇಲಾಖೆಯು ಕಡ್ಡಾಯಗೊಳಿಸಿದ್ದರು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳಲ್ಲಿ (ಕ್ರೆöÊಸ್) ಬಯೋಮೆಟ್ರಿಕ್ ಹಾಜರಾತಿಯನ್ನು ಪಾಲಿಸದೆ ಇರುವ ವಿಷಯ ತಿಳಿದು ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಇವರಿಗೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ದಿನಾಂಕ: 03-10-2025 ರಂದು ದೂರು ನೀಡಲಾಗಿತ್ತು.

ಈ ನಡುವೆ ಜಂಟಿ ನಿರ್ದೇಶಕರು ವರ್ಗಾವಣೆಗೊಂಡು, ಉಪ ನಿರ್ದೇಶಕರು ಅಧಿಕಾರ ವಹಿಸಿಕೊಂಡಿರುವ ಮಾಹಿತಿ ತಿಳಿದು, ದಾವಣಗೆರೆ ಜಿಲ್ಲಾ ಉಪ ನಿರ್ದೇಶಕರನ್ನು ಭೇಟಿಯಾಗಿ ದೂರು ಅರ್ಜಿಯ ವಿಷಯವನ್ನು ಪ್ರಸ್ತಾಪಿಸಿ, ಸೂಕ್ತ ತನಿಖೆ ನಡೆಸಿ, ತನಿಖಾ ವರದಿ ನೀಡುವಂತೆ ಮೌಖಿಕವಾಗಿ ತಿಳಿಸಲಾಗಿತ್ತು. ಆದರೆ ನಿಗದಿತ ಅವಧಿ ಮುಕ್ತಾಯವಾದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಇವರಿಗೆ ದಿನಾಂಕ: 11-11-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.

ಜ್ಞಾಪನ ನೀಡಿ ನಿಗದಿತ ಅವಧಿ ಮುಕ್ತಾಯವಾದರೂ ದಾವಣಗೆರೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿದ್ಧಲಿಂಗೇಶ ಬೇವಿನ್‌ಮಟ್ಟಿ ಇವರು ದೂರು ಅರ್ಜಿಗೆ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version