ದಿನದ ಸುದ್ದಿ

ಉಡುಪಿ ಜಿಲ್ಲಾ ಹಿರಿಯ ಭೂ ವಿಜ್ಞಾನಿ ವಿಂಧ್ಯ ವಿರುದ್ದ ಲೋಕಾಗೆ ದೂರು

Published

on

ಸುದ್ದಿದಿನಡೆಸ್ಕ್: ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಸೂಡ ಗ್ರಾಮದಲ್ಲಿ ಸಿ.ಎಂ.ಜಾಯ್ ಒಡೆತನದ ಕಲ್ಲು ಗಣಿಗಾರಿಕೆಯಲ್ಲಿನ ಅಕ್ರಮವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 3 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ ಉಡುಪಿ ಜಿಲ್ಲಾ ಹಿರಿಯ ಭೂ ವಿಜ್ಞಾನಿ ವಿಂಧ್ಯ ವಿರುದ್ದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ ಇವರ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿರುವ ಕಾರ್ಕಳ ತಾಲ್ಲೂಕಿನ ಸೂಡ ಗ್ರಾಮದ ಸರ್ವೆ ನಂಬರ್ 31/ಪಿ-2 ಹಾಗೂ 133/ಪಿ-1ರಲ್ಲಿ ಸಿ.ಎಂ.ಜಾಯ್ ಎಂಬುವವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಎರಡು ಪರವಾನಿಗೆ ಪಡೆದು, ಪ್ರತಿ ಪರವಾನಿಗೆಯಿಂದ ತಲಾ ಒಂದೊಂದು ಎಕರೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ಪಡೆದಿರುವ ಸದರಿ ಗಣಿ ಗುತ್ತಿಗೆದಾರರಾದ ಸಿ.ಎಂ.ಜಾಯ್ ಅವರು ಗುತ್ತಿಗೆ ಪಡೆದ ಭೂಮಿಯ ವ್ಯಾಪ್ತಿಯೊಳಗೆ ಕಲ್ಲು ಗಣಿಗಾರಿಕೆ ನಡೆಸಿರುವುದಿಲ್ಲ.

ಗುತ್ತಿಗೆ ಪಡೆದ ಒಂದೊಂದು ಎಕರೆ ಭೂಮಿಯ ಸುತ್ತಮುತ್ತಲಿನ ಹತ್ತಾರು ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿ, ನೂರಾರು ಅಡಿಗಳ ಆಳ ತೆಗೆದು ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಸರ್ಕಾರಕ್ಕೆ ನೂರಾರು ಕೋಟಿ ವಂಚನೆ ಎಸಗಿರುತ್ತಾರೆ ಎಂಬುದಾಗಿ ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ ಇವರಿಗೆ ದೂರು ನೀಡಲಾಗಿತ್ತು. ದೂರು ನೀಡಿ 3 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಹಿರಿಯ ಭೂ ವಿಜ್ಞಾನಿಗಳಾದ ವಿಂಧ್ಯ ಅವರ ವಿರುದ್ಧ ಲೋಕಾಯುಕ್ತಾದಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version