ರಾಜಕೀಯ

ರಾಷ್ಟ್ರಪತಿ ಕುರಿತು ಕಾಂಗ್ರೆಸ್ ನಾಯಕ ಅಧೀರ್‌ರಂಜನ್ ಚೌಧರಿ ಅನುಚಿತ ಪದ ಬಳಕೆ; ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ; ಕಲಾಪ ನಾಳೆಗೆ ಮುಂದೂಡಿಕೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಕಾಂಗ್ರೆಸ್ ಸಂಸದ ಅಧೀರ್‌ರಂಜನ್ ಚೌಧರಿ ಅವಹೇಳನಕಾರಿ ಪದ ಬಳಕೆ ಮಾಡಿರುವುದರ ವಿರುದ್ಧ ಆಡಳಿತಾರೂಢ ಬಿಜೆಪಿ ಸಂಸದರು ಲೋಕಸಭೆಯಲ್ಲಿಂದು ಪ್ರತಿಭಟನೆ ನಡೆಸಿದರು.

ಚೌಧರಿ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಲೇ ದೇಶದ ಜನತೆ ಎದುರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಸಂಸದರು ಆಗ್ರಹಿಸಿದರು.

ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಷ್ಟ್ರಪತಿ ಸ್ಥಾನ ಕುರಿತು ಅನುಚಿತ ಪದ ಬಳಸುವ ಮೂಲಕ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿದೆ ಎಂದರು.

ಅಲ್ಲದೆ ದೇಶದ ಮಹಿಳೆಯರು, ಬುಡಕಟ್ಟು ಸಮುದಾಯ, ಆದಿವಾಸಿಗಳು ಮತ್ತು ಬಡಜನರಿಗೆ ಅಗೌರವ ತೋರಿದೆ ಎಂದು ಸಚಿವೆ ಸ್ಮೃತಿ ಇರಾನಿ ಟೀಕಿಸಿದರು. ಚೌಧರಿ ಹೇಳಿಕೆ ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದ್ದು, ಜನತೆ ದಿಗ್ಭ್ರಾಂತರಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಆಗ್ರಹಿಸಿದರು.

ಆಯುಷ್ ಸಚಿವ ಸರ್ಬಾನಂದ ಸೋನೋವಾಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್ ಸೇರಿದಂತೆ ಹಲವು ಸಚಿವರು ಮತ್ತು ಸಂಸದರು ಚೌಧರಿ ಹೇಳಿಕೆಯನ್ನು ಟೀಕಿಸಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿ ಹಾಗೂ ಪ್ರತಿ ಪಕ್ಷಗಳ ವಾಗ್ವಾದ ಮತ್ತು ಗದ್ದಲದಿಂದಾಗಿ ಸದನದ ಕಲಾಪವನ್ನು ಹಲವು ಬಾರಿ ಮುಂದೂಡಲಾಗಿದ್ದು, ಅಂತಿಮವಾಗಿ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.

ಆಯೋಗ ಪತ್ರ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ಅಧೀರ್‌ರಂಜನ್ ಚೌಧರಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮುಂದಿನ ತಿಂಗಳ 3ರಂದು ಈ ಕುರಿತು ವಿಚಾರಣೆಗೆ ನಡೆಸಲಿದ್ದು, ಖುದ್ದಾಗಿ ಹಾಜರಾಗುವಂತೆ ಚೌಧರಿ ಅವರಿಗೆ ಆಯೋಗ ಸೂಚಿಸಿದೆ. ಅಲ್ಲದೆ ಚೌಧರಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಆಯೋಗ ಪತ್ರ ಬರೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version