ದಿನದ ಸುದ್ದಿ
ಚಿತ್ರದುರ್ಗ | ಬೆಳೆ ಸಮೀಕ್ಷೆಗೆ ಸಹಕರಿಸಿ : ರೈತರಲ್ಲಿ ಜಿಲ್ಲಾಧಿಕಾರಿಗಳ ಮನವಿ
ಸುದ್ದಿದಿನ,ಚಿತ್ರದುರ್ಗ : ಸಕಾಲಕ್ಕೆ ಮಳೆ ಬಾರದೆ ಬೆಳೆಗಳು ಒಣಗಿ ವಿಫಲವಾಗಿರುವುದರಿಂದ ಸರ್ಕಾರದ ನಿರ್ದೇಶನದಂತೆ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಈ ಸಂದರ್ಭದಲ್ಲಿ ಬೆಳೆಗಳ ಮಾಹಿತಿಯನ್ನು ದಾಖಲಿಸುವ ಕಾರ್ಯಕ್ಕೆ ರೈತರು ಸಹಕರಿಸುವಂತೆ ಜಿಲ್ಲಾದಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ರೈತರು ಈ ಯೋಜನೆಯಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರದ ಬೆಳೆಯ ವಿವರವನ್ನು ಖಾಸಗಿ ನಿವಾಸಿಗಳು ಅಥವಾ ಸರ್ಕಾರಿ ಸಿಬ್ಬಂದಿಗಳಿಗೆ ನೀಡುವ ಮೂಲಕ, ಬೆಳೆ ವಿವರ ದಾಖಲಿಸಲು ಸಹಕಾರ ನೀಡಬೇಕು.
ಬೆಳೆ ಸಮೀಕ್ಷೆಯಿಂದಾಗುವ ಅನುಕೂಲ
ಬೆಳೆ ಸಮೀಕ್ಷೆಯಲ್ಲಿ, ಖಚಿತವಾಗಿ ಯಾವ ಬೆಳೆ ಎಷ್ಟು ವಿಸ್ತೀರ್ಣದಲ್ಲಿ ಬೆಳೆದಿದೆ ಎಂದು ತಿಳಿಯಬಹುದು, ಯಾವುದೇ ಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾದಲ್ಲಿ, ಯಾವ ಪ್ರದೇಶದಲ್ಲಿ ಬೆಳೆ ಎಷ್ಟು ನಷ್ಟ ಎಂದು ಅಂದಾಜಿಸಬಹುದು, ಯಾವ ಬೆಳೆ ಎಷ್ಟು ಉತ್ಪಾದನೆಯಾಗಿದೆ, ಯಾವ ಬೆಳೆ ಉತ್ಪಾದನೆ ಕಡಿಮೆಯಿದೆ, ಕಡಿಮೆಯಾದ್ದರಿಂದ ಬೆಲೆ ಏರುಪೇರಾಗುವುದೇ, ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳಬಹುದು ಎಂಬ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ. ಬೆಳೆವಿಮೆಯಲ್ಲಿ ವಿಮಾ ಘಟಕದ ಖಚಿತ ವಿಸ್ತೀರ್ಣ ಲಭ್ಯವಾಗಲಿದ್ದು, ಯಾವ ಬೆಳೆ ಹೊಸದಾಗಿ ಬೆಳೆಯಲಾಗುತ್ತಿದೆ ಎಂಬುದನ್ನು ತಿಳಿಯಬಹುದು.
ರೈತರಿಗೆ ಆಗುವ ಅನುಕೂಲ
ಪಹಣಿಯಲ್ಲಿ ಅವರ ಸರ್ವೆ ನಂಬರಿನಲ್ಲಿ ಯಾವ ಬೆಳೆ ಬೆಳೆದಿದೆಯೋ ಆ ಬೆಳೆಯ ಹೆಸರು ಮತ್ತು ವಿಸ್ತೀರ್ಣ ಸರಿಯಾಗಿ ದಾಖಲಾಗುವುದು. ಪ್ರತಿ ಸರ್ವೆ ನಂಬರಿನಲ್ಲಿನ ಬೆಳೆಯ ವಿಸ್ತೀರ್ಣ ಲಭ್ಯವಾಗುವುದರಿಂದ ಸರ್ಕಾರದ ಸೌಲಭ್ಯ ಪಡೆಯಲು ನೇರವಾಗಿ ಉಪಯೋಗಿಸುವುದರಿಂದ ರೈತರು ಪುನ: ಪಹಣಿಯಲ್ಲಿ ದಾಖಲಿಸುವ ಅಗತ್ಯವಿರುವುದಿಲ್ಲ. ಬೆಳೆವಿಮೆಯಲ್ಲಿ ಆ ಬೆಳೆಯ ಸಮರ್ಪಕ ವಿಸ್ತೀರ್ಣ ಸಿಗುವುದರಿಂದ ರೈತರಿಗೆ ವಿಮಾ ಪರಿಹಾರದಲ್ಲಿ ಕಡಿತ ಇರುವುದಿಲ್ಲ. ಬೆಳೆ ನಷ್ಟವಾದಲ್ಲಿ ಅವರು ಬೆಳೆ ಬೆಳೆದ ವಿಸ್ತೀರ್ಣಕ್ಕೆ ಸರಿಯಾಗಿ ವಿಮೆ ಸಿಗುತ್ತದೆ. ಬೆಳೆಯ ವಿಸ್ತೀರ್ಣ ತಿಳಿಯುವುದರಿಂದ ಉತ್ಪಾದನೆ ಬಗ್ಗೆ ಕೂಡ ತಿಳಿಯಬಹುದು. ಬೆಳೆ ಏರಿಕೆ/ಇಳಿಕೆ ಬಗ್ಗೆ ತಿಳಿದು ಎಂ.ಎಸ್.ಪಿ.ಯನ್ನು ನಿರ್ಧರಿಸಿ ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಬಹುದು.
ಬೆಳೆ ಸಮೀಕ್ಷೆಯನ್ನು ಹಳ್ಳಿಯಲ್ಲಿ ವಾಸಿಸುವ ಪಿಯುಸಿ ಅಥವಾ ಹೆಚ್ಚಿನ ವಿದ್ಯಾರ್ಹತೆಯ ಯುವ ಖಾಸಗಿ ನಿವಾಸಿಗಳು ಅಥವಾ ಸರ್ಕಾರಿ ಸಿಬ್ಬಂದಿಯಿಂದ ಕೈಗೊಳ್ಳಲಾಗುವುದು. ರೈತರು ಬೆಳೆ ಸಮೀಕ್ಷೆಗೆ ಸಹಕರಿಸಬೇಕು, ಜಮೀನಿನಲ್ಲಿ ಸಮೀಕ್ಷೆಗೆ ಬರುವ ಮುಂಚೆ ರೈತರಿಗೆ ತಿಳಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ವೆ ನಂಬರ್ ಗುರುತಿಸುವಲ್ಲಿ ಮತ್ತು ಬೆಳೆಯ ವಿವರ ದಾಖಲಿಸಲು ಸಹಕರಿಸಬೇಕು. ಸರ್ವೆ ನಂಬರಿನ ಫೋಟೋ ತೆಗೆಯುವಾಗ ಕನಿಷ್ಠ ಒಂದು ಫೋಟೋದಲ್ಲಿ ರೈತರು ಕೂಡ ಇರಬೇಕು. ಬೆಳೆ ಸಮೀಕ್ಷೆದಾರರಿಗೆ ಮೊಬೈಲ್ ನಂ. ನೀಡಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ಕೆ ರೈತರು ಸಕ್ರಿಯವಾಗಿ ತೊಡಗಿಸಿಕೊಂಡು, ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401