ದಿನದ ಸುದ್ದಿ

ಚಾಮರಾಜನಗರ | ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಸಿಸೇರಿಯನ್ ಮೂಲಕ ಹೆರಿಗೆ, ತಾಯಿ ಮಗು ಸೇಫ್

Published

on

ಸುದ್ದಿದಿನ,ಚಾಮರಾಜನಗರ : ನಗರದ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಯೊಬ್ಬರು ಭಾನುವಾರ ಸಂಜೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಕ್ಷೇಮವಾಗಿದ್ದಾರೆ.

ಹನೂರು ತಾಲೂಕಿನ ಗಾಣಿಗ ಮಂಗಲದ 21 ವರ್ಷದ ಮಹಿಳೆ ಹೆಣ್ಣು ಮಗುವಿಗೆ ಜನ್ಮವಿತ್ತವರು. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಮಹಿಳೆ ಜನ್ಮ ನೀಡಿದ ಮೊದಲ ಪ್ರಕರಣ ಇದಾಗಿದೆ.

ಈ ಮಹಿಳೆ ಕಳೆದ ಜುಲೈ 17 ರಂದು ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮಾರ್ಗ ಅನುಸೂಚಿ ಪ್ರಕಾರ ಮುನ್ನೆಚ್ಚರಿಕಾ ಕ್ರಮವಾಗಿ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇಂದು ಬೆಳಿಗ್ಗೆ ಬಂದ ವರದಿಯಲ್ಲಿ ಕೋವಿಡ್ ಸೋಂಕು ಇರುವುದು ಧೃಢಪಟ್ಟಿತು.ಗರ್ಭಿಣಿಗೆ 41 ವಾರಗಳು ತುಂಬಿದ್ದರಿಂದ ಆಕೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲು ಆಸ್ಪತ್ರೆ ವೈದ್ಯರು ನಿರ್ಧರಿಸಿದರು.

ಅದರಂತೆ ಇಂದು ಸಂಜೆ 4.30 ರಿಂದ 6 ಗಂಟೆಯವರೆಗೆ ನಗರದ ಕೋವಿಡ್ ಆಸ್ಪತ್ರೆಯ ವಿಶೇಷ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಮಹಿಳೆಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಹೆಣ್ಣು ಮಗು ಜನಿಸಿದ್ದು, ಆರೋಗ್ಯವಾಗಿದೆ.

ಪ್ರಸೂತಿ ತಜ್ಞೆ ಡಾ. ಸ್ವಾತಿ, ಅರವಳಿಕೆ ತಜ್ಞ ಡಾ. ಸಮರ್ಥ್, ಮಕ್ಕಳ ತಜ್ಞೆ ಡಾ. ಲಕ್ಷ್ಮಿ ಮತ್ತು ಸಿಬ್ಬಂದಿ ಪುಟ್ಟಲಿಂಗಮ್ಮ ಮತ್ತು ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ.

ಮಹಿಳೆ ದಾಖಲಾಗಿದ್ದ ಹೆರಿಗೆ ವಾರ್ಡ್ ಅನ್ನು ಸ್ಯಾನಿಟೈಸ್ ಮಾಡಲಾಗಿದೆ. ವಾರ್ಡಿನಲ್ಲಿ ಇದ್ದ ಇನ್ನೂ ಐವರನ್ನು ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಿ ಇವರ ಕೋವಿಡ್ ಪರೀಕ್ಷೆಗೆ ಕ್ರಮ ತೆಗೆದುಕೊಳ್ಳಲಾಗಿದೆ.ಸದ್ಯಕ್ಕೆ ಇವರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಶಸ್ರಚಿಕಿತ್ಸಕರಾದ ಡಾ.ಕೃಷ್ಣ ಪ್ರಸಾದ್ ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version