ದಿನದ ಸುದ್ದಿ
ಕೊರೋನಾ ಇನ್ನೂ ಹೋಗಿಲ್ಲ ; ಎಚ್ಚರದಿಂದಿರಿ : ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ ಡೆಸ್ಕ್ : ಕೋವಿಡ್-19ಸವಾಲು ಇನ್ನೂ ಮುಗಿದಿಲ್ಲ. ಹಾಗಾಗಿ ದೇಶದ ಜನತೆ ಎಚ್ಚರದಿಂದ ಇರುವ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.
ದೇಶದ ಕೋವಿಡ್-19 ಪರಿಸ್ಥಿತಿ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವರ್ಚುಯಲ್ ಸಂವಾದಲ್ಲಿ ಅವರು ಈ ಕಳವಳ ವ್ಯಕ್ತಪಡಿಸಿದರು.
ಓಮಿಕ್ರಾನ್ ಮತ್ತು ಅದರ ರೂಪಾಂತರಗಳು ಐರೋಪ್ಯ ದೇಶಗಳಲ್ಲಿ ಕಾಣಿಸಿಕೊಂಡಿರುವಂತೆ ಇಲ್ಲಿಯೂ ಇನ್ನೂ ಹೆಚ್ಚಿನ ಹಾನಿ ಉಂಟುಮಾಡಬಹುದು ಎಂದು ಅವರು ಹೇಳಿದರು.
ವಿಜ್ಞಾನಿಗಳು ಮತ್ತು ತಜ್ಞರು ರಾಷ್ಟ್ರೀಯ ಮತ್ತು ಜಾಗತಿಕ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಮೋದಿ ತಿಳಿಸಿದರು.
ಸೋಂಕು ಕಾಣಿಸಿಕೊಂಡಾಗ ಆರಂಭದಲ್ಲೇ ಅದನ್ನು ನಿಯಂತ್ರಣಕ್ಕೆ ತರಲು ಜನತೆ ಮುಂಜಾಗ್ರತೆ ವಹಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.
ಆದಷ್ಟು ಬೇಗ ಎಲ್ಲಾ ಅರ್ಹ ಮಕ್ಕಳಿಗೆ ಲಸಿಕೆ ಹಾಕಲು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ವಿಶೇಷ ಅಭಿಯಾನಗಳನ್ನು ನಡೆಸಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.
ದೇಶದ ವಯಸ್ಕ ಜನಸಂಖ್ಯೆಯ ಶೇಕಡಾ 96ರಷ್ಟು ಜನರು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು. ರೋಗ ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಯ ಕಾರ್ಯತಂತ್ರವನ್ನು ದೇಶವು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ, ಮಾನವಶಕ್ತಿ ಹೆಚ್ಚಿಸಬೇಕೆಂದು ಪ್ರಧಾನಿ ಕರೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243