ದಿನದ ಸುದ್ದಿ

ಕೊರೋನಾದಿಂದ ಸಾವಿನ ಪ್ರಮಾಣ ರಾಜ್ಯದ ಸರಾಸರಿಗಿಂತ ಜಿಲ್ಲೆಯಲ್ಲಿ ಹೆಚ್ಚಿದೆ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಕೊರೋನಾದಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಿದ್ದು ಈ ಪ್ರಮಾಣವನ್ನು ಕಡಿಮೆಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಶನಿವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞ ವೈದ್ಯರುಗಳನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಮಾತಾನಾಡಿದರು.

ನಮ್ಮ ಜಿಲ್ಲೆಯ ವೈದ್ಯರ ತಂಡ ಹಾಗೂ ಕೋವಿಡ್ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ನನಗೆ ತೃಪ್ತಿ ಇದೆ ಆದರೆ ಎಲ್ಲೋ ಒಂದು ಕಡೆ ಸಾವಿನ ಪ್ರಮಾಣ ನಮ್ಮ ಕಾರ್ಯದಕ್ಷತೆಯನ್ನ ಪ್ರಶ್ನಿಸುವಂತಿದೆ.

ನಮ್ಮಲ್ಲಿ ಸಾಕಷ್ಟು ತಜ್ಞ ವೈದ್ಯರುಗಳು ಇದ್ದಾಗಿಯೂ ನಾವು ಎಲ್ಲಿ ಎಡವುತ್ತಿದ್ದೇವೆ. ಹಾಗೂ ಎಲ್ಲಿ ಸರಿಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣ ತಗ್ಗಿಸಲು ಅನುಸರಿಸಬೇಕಾದ ಮಾಗೋಪಾಯದ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಹಾಗೂ ಎಷ್ಟೇ ಕೇಸ್ ಬರಲಿ ನಿಭಾಯಿಸಲು ಜಿಲ್ಲಾಡಳಿತ ತಂಡ ಸಿದ್ದವಾಗಿದೆ.

ಈ ನಿಟ್ಟಿನಲ್ಲಿ ನಮ್ಮ ಸರ್ವೇಕ್ಷಣ ತಂಡ ಲ್ಯಾಬ್ ಪರೀಕ್ಷಾ ಪ್ರಮಾಣ ಹೆಚ್ಚಿಸಬೇಕು ಹಾಗೂ ತಾಲ್ಲೂಕುವಾರು ನೀಡಿರುವ ಮೊಬೈಲ್ ಕೋವಿಡ್ ಟೆಸ್ಟಿಂಗ್ ವಾಹನಗಳನ್ನು ತೀವ್ರ ಅನಾರೋಗ್ಯ ವ್ಯಕ್ತಿಗಳು ಇರುವ ಮನೆಯ ಬಳಿಯೇ ಸಾಗಿ ಪರೀಕ್ಷ್ಷೆಗೆ ಒಳಪಡಿಸುವ ಮೂಲಕ ಅದಷ್ಟು ಬೇಗ ಸೋಂಕಿಗೆ ಸಿಲುಕಿರುವರನ್ನು ಹಾಗೂ ಸೋಂಕಿಗೆ ಒಳಗಾಗುರುವರನ್ನು ಪತ್ತೆ ಹಚ್ಚಬೇಕಾಗಿದೆ ಎಂದರು.

ಕೇರಳ ರಾಜ್ಯದ ಮಾದರಿಯಲ್ಲಿ ಸಾಮೂಹಿಕ ಸಹಭಾಗಿತ್ವದಲ್ಲಿ ಎಲ್ಲರೂ ಮುಂದೆ ಬಂದು ಕೆಲಸ ಮಾಡಬೇಕು.ನಮ್ಮ ಜನ ಪ್ರತಿನಿಧಿಗಳು, ಮುಖಂಡರೂ, ಈ ಕಾರ್ಯದಲ್ಲಿ ಕೈಜೋಡಿಸಬೇಕು.

ಈಗಾಗಲೇ ರಚಿಸಲಾಗಿರುವ ವಾರ್ಡ್ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಮಹಾನಗರಪಾಲಿಕೆ ಆಯುಕ್ತರು ಈ ಸಮಿತಿಗಳ ತರಬೇತಿ ಕಾರ್ಯನಿರ್ವಹಣೆಯನ್ನು ಯಶಸ್ವಿಯಾಗಿ ನೋಡಿಕೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ಎಷ್ಟೇ ಕೇಸ್ ಗಳು ಬಂದರು ನಿಬಾಯಿಸಲು ಸಿದ್ದವಾಗಿರಬೇಕು. ಮತ್ತು ಅದಷ್ಟು ಸೋಂಕಿತರು ವೆಂಟಿಲೇಟರ್ ಗೆ ಹೋಗುವುದನ್ನು ಕಡಿಮೆ ಮಾಡಲು ತಪಾಸಾಣೆ ತೀವ್ರವಾಗಬೇಕು.

ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಮೂರು ಲ್ಯಾಬ್ ಗಳು ಕೋರೋನಾ ಪರೀಕ್ಷೆಗೆ ತೊಡಗಿದ್ದು, ಇನ್ನೂ ಹೆಚ್ಚಿನ ಕ್ಷಿಪ್ರವೇಗದಲ್ಲಿ ಪರೀಕ್ಷೆ ನಡೆಸಲು ಸಿದ್ದವಾಗಬೇಕು. ಅದಕ್ಕೆ ಬೇಕಾದ ಯಾವುದೇ ಸಹಕಾರವನ್ನು ನನ್ನನ್ನು ಕೇಳಿ ಒಟ್ಟ್ಟಾರೆ ಟೆಸ್ಟಿಂಗ್ ಸರ್ವೇಕ್ಷಣೆ ಆಸ್ಪತ್ರೆಗೆ ಅದಷ್ಟು ಬೇಗ ಸೇರಿಸುವ ಕೆಲಸ ಆಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ ಸಿಇಒ ಪದ್ಮಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ಡಿಹೆಚ್‍ಓ ರಾಘವೇಂದ್ರಸ್ವಾಮಿ, ಡಾ.ಸುರೇಂದ್ರ, ಡಾ.ಮಹಾಂತೇಶ್,ಡಾ. ರವಿ, ಡಾ.ಪ್ರಸಾದ್ ಜಿಲ್ಲಾಕೋವಿಡ್ ನೋಡೆಲ್ ಅಧಿಕಾರಿ ಪ್ರಮೋದ್ ನಾಯಕ್, ಡಾ.ನಾಗರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version