ದಿನದ ಸುದ್ದಿ
ಕೊರೊನಾ ಮತ್ತು ನಮ್ಮ IASಗಳು..!
- ರಾಜಾರಾಮ್ ತಲ್ಲೂರ್
ಶತ್ರುದಾಳಿ ನಡೆದಾಗ ಕೋಟೆಯ ಬಾಗಿಲು ಭದ್ರಪಡಿಸಿಕೊಳ್ಳುವುದೇ ಯುದ್ಧ ಅಲ್ಲ. ಅದು ಯುದ್ಧದ ತಯಾರಿಗೆ ಮೊದಲ ಹಂತ. ಶತ್ರು ಹಠಾತ್ ಎರಗದಂತೆ ಬಾಗಿಲು ಭದ್ರಪಡಿಸಿ, ಹತ್ಯಾರುಗಳು, ಸೈನಿಕರು ತಯಾರಾಗಬೇಕು.
ನಮ್ಮಲ್ಲೀಗ ಕೋಟೆಬಾಗಿಲು ಭದ್ರಪಡಿಸಿ 23 ದಿನಗಳು ಕಳೆದಿವೆ. ಮತ್ತೆ ಮೇ 3ರ ತನಕ ಕೋಟೆಬಾಗಿಲು ಮುಚ್ಚಿಯೇ ಇರಲಿದೆ ಎಂಬ ಸೂಚನೆ ನಿನ್ನೆ ಹೊರಬಿದ್ದಿದೆ. ತಯಾರಿ ಏನಾಗಿದೆ ಎಂದರೆ ಚಿತ್ರಣ ಆಶಾದಾಯಕ ಇಲ್ಲ.
ಕೊರೊನಾ ಬರಿಯ ಬಾಗಿಲು ಭದ್ರಪಡಿಸಿದರೆ ಹೊರಟು ಹೋಗುವ ಆತಂಕ ಅಲ್ಲ. ಹಾಗಿದ್ದಿದ್ದರೆ ಈ ಜಗತ್ತಿನಲ್ಲಿ ಫ್ಲೂ ವೈರಸ್ ಗಳೇ ಇರುತ್ತಿರಲಿಲ್ಲ. ಪ್ರತೀ ಸೀಸನ್ನಿನಲ್ಲಿ ಮೂರು-ನಾಲ್ಕು ಸುತ್ತು ಬರುವ ಎಲ್ಲ ವೈರಸ್ ಗಳ ರೀತಿಯೇ ತಾನೂ ಕೂಡ ಎಂದು ಕೊರೊನಾ ಈಗಾಗಲೇ ಚೀನಾದ ವುಹಾನ್, ದಕ್ಷಿಣ ಕೊರಿಯಾ ಮೊದಲಾದೆಡೆ ಸಾಬೀತುಪಡಿಸುತ್ತಿದೆ. ಅಲ್ಲಿ ಸೋಂಕಿನ ಎರಡನೇ ಅಲೆ ಹರಡುತ್ತಿದೆ.
ಅಂದರೆ, ಬರಿಯ ಲಾಕ್ ಡೌನ್ ಮಾಡಿಕೊಂಡು ಕುಳಿತರೆ ಇನ್ನು ಐದಾರು ವರ್ಷ ಹೋದರೂ ಜಗತ್ತು ಇದೇ ಸ್ಥಿತಿಯಲ್ಲಿ ಇರಬೇಕಾಗುತ್ತದೆ ಎಂಬುದು ವಾಸ್ತವ. ಕೊರೊನಾ ಜೊತೆ ಬದುಕುವುದು ನಮಗೆ ಅಭ್ಯಾಸ ಆಗದೆ ಬೇರೆ ದಾರಿ ಇಲ್ಲ.
ನಾನು ಇಲ್ಲಿ ಹೇಳಹೊರಟಿರುವುದು, ನಮ್ಮ ದೇಶದ ನಿಯಮಗಳನ್ನು ರೂಪಿಸುವ IAS ಕೆಡೇರ್ ಬಗ್ಗೆ. ಕಳೆದ 20 ದಿನಗಳಲ್ಲಿ ಅವರು ಮುಂದಿನ ದಿನಗಳಿಗೆ ಒಂದು ಸ್ಪಷ್ಟ-ನಿಖರ-ಕಾರ್ಯರೂಪಕ್ಕೆ ತರಬಲ್ಲ ಒಂದಿಷ್ಟು ನಿಯಮಗಳನ್ನು ರೂಪಿಸಬಲ್ಲರು ಎಂಬ ನಿರೀಕ್ಷೆ ಇತ್ತು.
ಆದರೆ ನಿನ್ನೆ ಲಾಕ್ ಡೌನ್ 2.0 ಗೆ ಮಾರ್ಗದರ್ಶಿಯನ್ನು ವಿವರವಾಗಿ ನೋಡಿದ ಬಳಿಕ ತುಂಬಾ ನಿರಾಸೆ ಆಯ್ತು. ಅಲ್ಲಿ ಹೇಳಲಾಗಿರುವ ಎಲ್ಲ ನಿಯಮಗಳೂ ಎಷ್ಟು ಆಂಬಿಗ್ಯುಯಿಟಿಯಿಂದ ತುಂಬಿವೆ ಎಂದರೆ ಕಳೆದ ಸಾರಿಯಂತೆ ಕ್ಲಾರಿಫಿಕೇಷನ್ ಗಳಿಗೆ ಕ್ಲಾರಿಫಿಕೇಷನ್ ಗಳ ಮತ್ತೊಂದು ಸರಣಿಯನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು. ಇದೆಲ್ಲ ಬೊಟ್ಟುಮಾಡುವುದು ಹಠಾತ್ ವಿಪತ್ತು ಸನ್ನಿವೇಶಗಳನ್ನು ಎದುರಿಸುವುದಕ್ಕೆ ನಮ್ಮ ತಯಾರಿಯ ಕೊರತೆಯನ್ನೇ.
ಇನ್ನಾದರೂ ಕೊರೊನೋತ್ತರ ಬದುಕಿಗೆ ಸ್ಪಷ್ಟ ಚಿತ್ರಣವೊಂದನ್ನು ತಯಾರಿ ಮಾಡದಿದ್ದರೆ, ದೇಶದ ಆರ್ಥಿಕ – ಸಾಮಾಜಿಕ ಸಂಕಟಗಳು ಎಲ್ಲರನ್ನೂ ಒಟ್ಟಾಗಿ ಮುಳುಗಿಸಲಿವೆ. ಈವತ್ತಲ್ಲ ನಾಳೆ ದೇಶದ ಎಲ್ಲ ಚಟುವಟಿಕೆಗಳಿಗೆ ಅವಕಾಶ ಕೊಡಲೇಬೇಕಾಗುತ್ತದೆ. ಕೊರೊನಾ ನಾಲ್ಕನೇ ಹಂತಕ್ಕೆ ಹರಡದಂತೆ ನಿಗಾ ಇರಿಸಿಕೊಂಡೇ ದೇಶ ಸಹಜ ಚಟುವಟಿಕೆಗಳೊಂದಿಗೆ ಮುನ್ನಡೆಯುವುದು ಹೇಗೆ ಎಂಬ ನಿಖರ ಯೋಜನೆಗಳನ್ನು ಇಂದೇ ಮಾಡದಿದ್ದರೆ, ಈಗ ಆಗುತ್ತಿರುವ ಮುಕ್ಕುಗಳು ಶಾಶ್ವತವಾಗಿ ಉಳಿಯಲಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243