ದಿನದ ಸುದ್ದಿ
ಕೋವಿಡ್-19 | ಹೊರ ರಾಜ್ಯದಿಂದ ರಾಜ್ಯಕ್ಕೆ ಆಗಮಿಸುವವರು ಅನುಸರಿಸಬೇಕಾದ ಕ್ರಮ
ಸುದ್ದಿದಿನ, ಬೆಂಗಳೂರು : ಹೊರರಾಜ್ಯಗಳಲ್ಲಿ ಸ್ಥಗಿತವಾಗಿರುವ ಕರ್ನಾಟಕ ರಾಜ್ಯದ ಜನರು sevasindhu.karnataka.gov.in ವೆಬ್‍ಸೈಟ್ ಮೂಲಕ ಟ್ರಾವೆಲ್ ಟು ಕರ್ನಾಟಕ ಫ್ರಮ್ ಅದರ್ ಇಂಡಿಯನ್ ಸ್ಟೇಟ್ಸ್ ಆಯ್ಕೆಯನ್ನು ಮಾಡಿಕೊಂಡು ನೊಂದಣಿ ಮಾಡಿಕೊಳ್ಳಬೇಕು.
ಇ-ಪಾಸ್
ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಸ್ವೀಕೃತಿ ಬರುತ್ತದೆ. ಈ ಅರ್ಜಿಗಳನ್ನು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯದ ನೋಡಲ್ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುತ್ತಾರೆ. ನಂತರ ಅರ್ಜಿದಾರರಿಗೆ ಎಸ್‍ಎಂಎಸ್ ಸಂದೇಶದ ಮೂಲಕ ಇ-ಪಾಸ್ ಪಡೆಯುವ ಲಿಂಕ್ ಕಳುಹಿಸಲಾಗುತ್ತದೆ. ಇ-ಪಾಸ್ ದೊರೆಕಿದ ನಂತರ ಪ್ರಯಾಣಿಸಲು ಒಂದು ವಾರದ ಕಾಲಾವಕಾಶ ಇರುತ್ತದೆ.
ತಪಾಸಣಾ ಪ್ರಾಧಿಕಾರವು ಇ-ಪಾಸ್‍ಗಳ ಅಧಿಕೃತತೆಯನ್ನು ಕ್ಯೂಆರ್ ಕೊಡ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸುತ್ತದೆ. ಇದಕ್ಕಾಗಿ ಗೂಗಲ್ ಪ್ಲೇ ಸ್ಟೊರ್ ಮೂಲಕ ಸರ್ವಿಸ್ ಪ್ಲಸ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು.
ಇ-ಪಾಸ್ ಹೊಂದಿರುವವರು ತಮ್ಮ ಸಂತ ಅಥವಾ ಬಾಡಿಗೆ ಅಥವಾ ಕರಾರು ಒಪ್ಪಂದದ ಬಸ್‍ಗಳ ಮೂಲಕ ಪ್ರಯಾಣ ಕೈಗೊಳ್ಳಬಹುದು. ಇಂತಹ ವಾಹನಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಸ್ಯಾನಿಟೈಸರ್ ಬಳಸಬೇಕು ಹಾಗೂ ಸಾಮಾಜಿಕ ಅಂತರದ ನಿಯಮ ಪಾಲಿಸಬೇಕು.
ಗಮನಿಸಿ
ಒಂದು ಕಾರಿನಲ್ಲಿ 03, ದೊಡ್ಡ ಕಾರ್‍ಗಳಲ್ಲಿ (ಎಸ್‍ಯುವಿ) 05, ವ್ಯಾನ್‍ಗಳಲ್ಲಿ 10 ಹಾಗೂ ಬಸ್‍ಗಳಲ್ಲಿ 25 ಜನ ಮಾತ್ರ ಪ್ರಯಾಣಿಸಲು ಅವಕಾಶವಿದೆ. ಪ್ರಯಾಣಿಕರು ಗಡಿ ಜಿಲ್ಲೆಗಳಲ್ಲಿ ಗುರುತಿಸಲಾಗಿರುವ ಆಗಮನದ ಚೆಕ್‍ಪೋಸ್ಟ್‍ಗಳ ಮೂಲಕವೇ ಪ್ರಯಾಣಿಸುವುದು ಕಡ್ಡಾಯವಾಗಿದೆ.
ವಾಹನ ವೆಚ್ಚ
ವಾಹನಗಳ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು. ವೈದ್ಯಕೀಯ ತಪಾಸಣೆ ಹಾಗೂ ಅಧಿಕೃತ ಗುರುತಿನ ಚೀಟಿಗಳೊಂದಿಗೆ ಪ್ರಯಾಣಿಸಬೇಕು. ಕೋವಿಡ್ ಲಕ್ಷಣವಿರುವವರನ್ನು ಆಸ್ಪತ್ರೆ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತದೆ. ರೋಗ ಲಕ್ಷಣ ಇಲ್ಲದೇ ಇರುವವರನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತದೆ. ರಾಜ್ಯಕ್ಕೆ ಆಗಮಿಸುವ ನಾಗರಿಕರು ತಮ್ಮ ಮೋಬೈಲ್‍ಗಳಲ್ಲಿ ಆರೋಗ್ಯಸೇತು ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗೆ ಮತ್ತು ತುರ್ತು ಸಂದರ್ಭಗಳಿಗೆ 080-22636800 ದೂರವಾಣಿ ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243