ದಿನದ ಸುದ್ದಿ

ದಾವಣಗೆರೆ | ಕೋವಿಡ್ ರೋಗಿಗಳನ್ನು ಉಳಿಸಲು ವೈದ್ಯರ ಅವಿರತ ಪ್ರಯತ್ನ

Published

on

ಸುದ್ದಿದಿನ,ದಾವಣಗೆರೆ : ನಗರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳು, ವಿವಿಧ ನರ್ಸಿಂಗ್ ಹೋಂಗಳ ತಜ್ಞರು, ಜಿಲ್ಲಾಸ್ಪತ್ರೆಯ ತಜ್ಞರುಗಳಿದ್ದು, ಇಎನ್‍ಟಿ, ಪಲ್ಮನಾಲಜಿ ಸೇರಿದಂತೆ ಇತರೆ ತಜ್ಞ ವೈದ್ಯರನ್ನೊಳಗೊಂಡ ಎರಡು ತಜ್ಞ ವೈದ್ಯರ ರಚಿಸಿಕೊಂಡು ಪ್ರತಿ ದಿನ ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಹೇಳಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ 5 ರೋಗಿಗಳು ಹೈಫ್ಲೋ ಆಕ್ಸಿಜನ್ ಥೆರಪಿಯಲ್ಲಿದ್ದು, 1 ರೋಗಿ ಗಂಭೀರ ಸ್ಥಿತಿ ತಲುಪಿತ್ತು. ಇದೀಗ ಆ ರೋಗಿಯೂ ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಪ್ರತಿ ಪ್ರಕರಣಗಳಲ್ಲಿ ರೋಗಿಯ ಜೀವ ಉಳಿಸಲು ಅವಿರತ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನಗರದಲ್ಲಿನ ಖಾಸಗಿ ಆಸ್ಪತ್ರೆ ನರ್ಸಿಂಗ್ ಹೋಂಗಳ ವೈದ್ಯಕೀಯ ಸಿಬ್ಬಂದಿಗಳು, ನರ್ಸ್‍ಗಳು ಬಂದು ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ತಿಳಿದುಬಂದಿದೆ. ವೈದ್ಯಕೀಯ ರಂಗದಲ್ಲಿರುವ ತಾವೇ ಅನಗತ್ಯವಾಗಿ ಹೆದರುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ಎಲ್ಲರ ರಕ್ಷಣೆ ಬಗ್ಗೆ ಜವಾಬ್ದಾರಿ ಕೈಗೊಳ್ಳಲಿದೆ. ಅನಾವಶ್ಯಕವಾಗಿ ಭಯ ಪಡದೇ ಕರ್ತವ್ಯ ಹಾಜರಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಬೇಕೆಂದು ಮನವಿ ಮಾಡಿದರು.

ಕೇಂದ್ರ ಮತ್ತು ರಾಜ್ಯದ ಪಡಿತರವನ್ನು ಕಂಟೈನ್‍ಮೆಂಟ್ ಝೋನ್‍ನಲ್ಲಿ ಶೇ.90 ವಿತರಣೆಯಾಗಿದ್ದು ಇನ್ನುಳಿದ ಶೇ 10 ನ್ನು ಶೀಘ್ರದಲ್ಲೇ ವಿತರಣೆ ಮಾಡಲಾಗುವುದು.
ಹರಿಹರ ಮತ್ತು ಚನ್ನಗಿರಿಯ ಜನಸಂದಣಿ ಪ್ರದೇಶಗಳಲ್ಲಿ ರ್ಯಾಂಡಮ್ ಆಗಿ ಗಂಟಲುದ್ರವ ಮಾದರಿ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version