ದಿನದ ಸುದ್ದಿ

ಕೋವಿಡ್ ಲಸಿಕೆ : ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು ಡಿಸಿ ಮಹಾಂತೇಶ್ ಬೀಳಗಿ ಸೂಚನೆ

Published

on

ಸುದ್ದಿದಿನ,ದಾವಣಗೆರೆ: ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಲಸಿಕೆ ಬಳಕೆಗೆ ಲಭ್ಯವಾಗುವ ಎಲ್ಲ ಸಾಧ್ಯತೆಗಳಿದ್ದು, ಸರ್ಕಾರದ ಸೂಚನೆಯಂತೆ ಮೊದಲ ಆದ್ಯತೆ ವಲಯಕ್ಕಾಗಿ ಅಗತ್ಯ ಅಂಕಿ-ಅಂಶಗಳನ್ನು ಎರಡು ದಿನಗಳ ಒಳಗಾಗಿ ಸಿದ್ಧಪಡಿಸಿ, ಲಸಿಕೆ ನೀಡಿಕೆ ಕಾರ್ಯದಲ್ಲಿ ದಾವಣಗೆರೆ ಜಿಲ್ಲೆಯು ರಾಷ್ಟ್ರ ಮತ್ತು ರಾಜ್ಯಕ್ಕೇ ಮಾದರಿಯಾಗುವ ರೀತಿ ಕಾರ್ಯಗತಗೊಳಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್-19 ಲಸಿಕೆ ಕಾರ್ಯವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್-19 ಗೆ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ದೇಶದಲ್ಲಿ ಅಂತಿಮ ಹಂತದಲ್ಲಿದ್ದು, ಯಾವುದೇ ಸಮಯದಲ್ಲಿ ಲಸಿಕೆಯು ಬಳಕೆಗೆ ಲಭ್ಯವಾಗುವ ಸಾಧ್ಯತೆಗಳಿವೆ. ಲಸಿಕೆಯನ್ನು ಮೊದಲ ಆದ್ಯತೆಯಾಗಿ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರೂ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ನೀಡಬೇಕೆಂಬುದು ಸರ್ಕಾರದ ನಿಲುವಾಗಿದೆ.

ಇದರಂತೆಯೇ ಜಿಲ್ಲೆಯಲ್ಲಿಯೂ ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕಿದೆ. ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ಮಾನ್ಯತೆ ಹೊಂದಿರುವ ಖಾಸಗಿ ಎಲ್ಲ ಆಸ್ಪತ್ರೆಗಳ ವೈದ್ಯರು, ನರ್ಸ್‍ಗಳು, ಪ್ರಯೋಗಶಾಲೆ ನಿರ್ವಹಿಸುವವರು, ಚಾಲಕರು, ಕ್ಲರ್ಕ್‍ಗಳು, ಡಿ-ಗ್ರೂಪ್ ಸಿಬ್ಬಂದಿಯಾದಿಯಾಗಿ ಎಲ್ಲ ಆರೋಗ್ಯ ಕಾರ್ಯಕರ್ತರ ವಿವರಗಳು, ವೈದ್ಯಕೀಯ ಕಾಲೇಜುಗಳು, ದಂತವೈದ್ಯಕೀಯ, ಪ್ಯಾರಾಮೆಡಿಕಲ್, ಆಯುರ್ವೇದಿಕ್ ಸೇರಿದಂತೆ ಎಲ್ಲರ ಸಮಗ್ರ ವಿವರಗಳು ಅಂಕಿ-ಅಂಶ ಸಹಿತ ಎರಡು ದಿನಗಳ ಒಳಗಾಗಿ ಸಿದ್ಧವಾಗಬೇಕು.

ಜಿಲ್ಲೆಗೆ ಪ್ರಥಮ ಹಂತದಲ್ಲಿ ಬೇಕಾಗಬಹುದಾದ ಲಸಿಕೆ ಡೋಸ್‍ಗಳ ಸಂಖ್ಯೆಯನ್ನು ವಿವರ ಸಹಿತ ಸಲ್ಲಿಸಬೇಕು. ಪ್ರಥಮ ಆದ್ಯತಾ ವಲಯದ ಯಾರೂ ಕೂಡ ಈ ಅಂಕಿ-ಅಂಶದಲ್ಲಿ ಬಿಟ್ಟುಹೋಗಬಾರದು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಪ್ರತಿ ಗುರುವಾರ ಕೋವಿಡ್ ಲಸಿಕೆಗೆ ಸಂಬಂಧಿಸಿದ ಕಾರ್ಯಪಡೆ ಸಮಿತಿ ಸಭೆಯನ್ನು ನಡೆಸಿ, ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲಾಗುವುದು, ಅಲ್ಲದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತಿ ತಾಲ್ಲೂಕಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಈ ಹಿಂದಿನ ಲಸಿಕಾ ಕಾರ್ಯಕ್ರಮಗಳಿಗಿಂತ ಇದು ಹೆಚ್ಚಿನ ಮಹತ್ವದ್ದಾಗಿದ್ದು, ಪ್ರತಿಯೊಬ್ಬರಲ್ಲೂ ಆತ್ಮಸ್ಥೈರ್ಯ ಮೂಡಿಸುವುದು ಅಗತ್ಯವಾಗಿದೆ.

ಕೋವಿಡ್ ಲಸಿಕೆ ಕಾರ್ಯಕ್ರಮ ಅನುಷ್ಠಾನದಲ್ಲಿ ಜಿಲ್ಲೆಯು ರಾಷ್ಟ್ರ ಹಾಗೂ ರಾಜ್ಯದಲ್ಲಿ ಮಾದರಿಯಾಗಬೇಕು ಎಂದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಅವರು, ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಈಗಾಗಲೆ ಅಂಕಿ-ಅಂಶ ಸಿದ್ಧಪಡಿಸುವ ಕಾರ್ಯ ನಡೆದಿದೆ.

ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಲಸಿಕಾಕರ್ತರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಕೋವಿಡ್‍ಗೆ ಸಂಬಂಧಿಸಿದಂತೆ ಭಾರತದಲ್ಲಿ ಒಟ್ಟು 09 ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಈ ಪೈಕಿ 04 ಪ್ರಾಥಮಿಕ ಹಂತ, 02- ದ್ವಿತೀಯ ಹಂತ ಹಾಗೂ 03 ಲಸಿಕೆಗಳು ತೃತೀಯ ಅಂದರೆ ಅಂತಿಮ ಹಂತದಲ್ಲಿವೆ. ಅಂತಿಮ ಹಂತದ ಪ್ರಯೋಗದಲ್ಲಿ ಯಶಸ್ವಿಯಾಗುವ ಲಸಿಕೆಗೆ ಮಾತ್ರ ಬಳಕೆ ಮಾಡಲು ಅನುಮತಿ ದೊರೆಯಲಿದೆ. ಜಾಗತಿಕವಾಗಿ ಒಟ್ಟು 248 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಪೈಕಿ 10 ಲಸಿಕೆಗಳು ಅಂತಿಮ ಹಂತ ತಲುಪಿವೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version