ನೆಲದನಿ
ಕೊರೊನಾ ಕಲಿಸಿದ ಅಸ್ಪೃಶ್ಯತೆ ಪಾಠ
- ಚೀನಾದಲ್ಲಿ ಜನ್ಮತಳೆದ ಅಮೂರ್ತ ಸ್ವರೂಪದ ವೈರಸೊಂದು ಅಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು, ಇಂದು ತನ್ನ ಶಕ್ತಿ ಮತ್ತು ಸಾಮಥ್ರ್ಯದಿಂದಾಗಿ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಲಗ್ಗೆಯಿಟ್ಟಿದೆ. ವಿಶ್ವದಲ್ಲಿ ತಾನು ಶ್ರೇಷ್ಟ ಎಂದು ಮೆರೆಯುತ್ತಿದ್ದ ಪ್ರಬಲ ರಾಷ್ಟ್ರಗಳೆಲ್ಲ ಕೊರೊನಾದ ಮುಂದೆ ಅಸಹಾಯಕವಾಗಿ ಕೈ ಕಟ್ಟಿ ಕೂತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಮನೆ ಮಾಡಿಕೊಂಡಿರುವ ‘ಅಸ್ಪೃಶ್ಯತೆ’ ಎಂಬ ಸೊಂಕಿನ ಬಗ್ಗೆ ಒಂದು ಸಣ್ಣ ಚರ್ಚೆ ಮಾಡುವ ಉದ್ದೇಶ ಪ್ರಸ್ತುತ ಲೇಖನದ ಆಶಯವಾಗಿದೆ.
–ಡಾ. ಕೆ.ಎ.ಓಬಳೇಶ್
ಭಾರತದಲ್ಲಿ ಜಾತಿ ಆಧಾರಿತವಾದ ಅಸ್ಪೃಶ್ಯತೆಯ ಬಗ್ಗೆ ಚರ್ಚೆ ಮಾಡುವುದಕ್ಕೂ ಪೂರ್ವದಲ್ಲಿ ಮುಂದುವರೆದ ರಾಷ್ಟ್ರಗಳನ್ನು ಅಂದರೆ ಬಿಳಿಯರ, ಅತಿ ಬುದ್ಧಿವಂತರೆಂದು ಸ್ವಯಂ ಘೋಷಿಸಿ ಕೊಂಡಿದ್ದವರ ಮನಸ್ಥಿತಿಗಳನ್ನು ಕೂಡ ಈ ಸಂದರ್ಭದಲ್ಲಿ ಚರ್ಚೆಗೆ ಎತ್ತಿಕೊಳ್ಳುವುದು ಸೂಕ್ತವೆಂದು ಭಾವಿಸಲಾಗಿದೆ. ಒಂದು ಕಾಲಕ್ಕೆ ತನ್ನ ವಸಹಾತು ನೀತಿಯ ಮೂಲಕ ಇಡೀ ಜಗತ್ತಿನ ಹಿಂದುಳಿದ ರಾಷ್ಟ್ರಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಫ್ರಾನ್ಸ್, ಇಂಗ್ಲೇಡ್, ಅಮೇರಿಕಾದಂತಹ ರಾಷ್ಟ್ರಗಳು ಇಂದು ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿವೆ. ಒಂದು ಕಾಲದಲ್ಲಿ ಈ ರಾಷ್ಟ್ರಗಳು ಹಿಂದುಳಿದ ರಾಷ್ಟ್ರಗಳನ್ನು ಹಾಗೂ ಅಲ್ಲಿನ ಜನರನ್ನು ದಡ್ಡರು, ಮೂಢರೂ ಎಂದೂ, ಬಣ್ಣದ ಆಧಾರದ ಮೇಲೆ ಕಪ್ಪು ಜನರನ್ನು ಅಸ್ಪøಶ್ಯರೆಂದು ಜರಿದರು. ಆದರೆ ಇಂದು ಈ ದೇಶದ ಜನರನ್ನು ಕಂಡರೆ ಹಿಂದುಳಿದ ರಾಷ್ಟ್ರಗಳು ದೂರ ಸರಿದು ನಿಲ್ಲುವಂತಹ ಸಂದರ್ಭ ನಿರ್ಮಾಣವಾಗಿದೆ. ಇದು ಪ್ರಕೃತಿಯ ಮುಂದೆ ಎಲ್ಲರೂ ಒಂದೆ ಎಂಬ ಪಾಠದ ಭಾಗವಾಗಿದೆ. ಇಂದು ಮುಂದುವರೆದ ರಾಷ್ಟ್ರಗಳು ‘ಮಾನವ ಜಾತಿಯೊಂದೆ’ ಎಂಬ ಮಾತನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಭಾರತದ ಸಂದರ್ಭದಲ್ಲಿ ಗಮನಿಸುವುದಾದರೆ ಐರೋಪ್ಯ ರಾಷ್ಟ್ರಗಳು ಕಟ್ಟಿಕೊಂಡಿದ್ದ ಅಸ್ಪøಶ್ಯತೆಯ ಚೌಕಟ್ಟಿಗಿಂತ, ಇಲ್ಲಿನ ಮುಂದುವರೆದ ಜಾತಿಗಳು ರೂಪಿಸಿಕೊಂಡು ಬಂದಿರುವ ಅಸ್ಪೃಶ್ಯತೆಯ ಕಟ್ಟು ತುಂಬ ಬಿಗಿಯಾದುದಾಗಿದೆ. ಇಲ್ಲಿನ ಜಾತಿವಾದಿಗಳು ಅಸ್ಪೃಶ್ಯನ ನೆರೆಳು ತಾಗಿದರೂ ನಾವು ಮಡಿವಂತರಾಗಿ ಉಳಿಯಲಾರೆವು ಎಂದು ನಂಬಿಕೊಂಡು ಬಂದವರು. ಈ ಜಾತಿವಾದಿಗಳು ಸಂದರ್ಭದ ಕೂಸುಗಳು. ಕಾಲ ಬಂದಂತೆ ಕೊಡೆ ಹಿಡಿಯುವ ಮನಸ್ಥಿತಿಯವರು. ಇವರಿಗೆ ಐಶಾರಾಮಿಯಾದ ಜೀವನ ಸಿಗುತ್ತದೆ ಎಂದರೆ ಯಾವುದನ್ನು ಮಾಡುವುದಕ್ಕೂ ಅಂಜದವರು. ಹೀಗಾಗಿ ಆಧುನಿಕತೆ ಹಾಗೂ ಐಶಾರಾಮಿ ಸೋಗಿನ ಭಾಗವಾಗಿ ವಿದೇಶಗಳ ಸಂಬಂಧವನ್ನು ಹೆಚ್ಚು ಆಪ್ತವಾಗಿಸಿಕೊಂಡವರು ಕೂಡ ಇದೇ ಮಡಿವಂತರು.
ಇಂದು ಮುಂದುವರೆದ ರಾಷ್ಟ್ರಗಳಲ್ಲಿ ಹೆಚ್ಚು ಜೀವನ ಸಾಗಿಸುತ್ತಿರುವವರು ಹಾಗೂ ವಿದೇಶಗಳೊಂದಿಗೆ ಸಂಬಂಧ ಬೆಳೆಸಿವದರು ಕೂಡ ಉನ್ನದ ವರ್ಗದ ಮಡಿವಂತರೆ. ಆದರೆ ಇಂದು ಕೊರೊನಾ ಮುಂದುವರೆದ ರಾಷ್ಟ್ರಗಳಿಗೆ ವಿಪರೀತ ಪ್ರಮಾಣದಲ್ಲಿ ಲಗ್ಗೆ ಇಟ್ಟಿರುವ ಕಾರಣದಿಂದ ತಮ್ಮ ಜೀವದ ಮೇಲಿನ ಭಯಕ್ಕಾಗಿ ಈ ಮಡಿವಂತರ ಸಂತಾನಗಳು ತನ್ನ ತಾಯ್ನಾಡನ್ನು ನೆನೆಸಿಕೊಂಡು ಹಿಂದಿರುಗುತ್ತಿವೆ. ತಾವು ವಿದೇಶಗಳಿಂದ ತಂದಿರುವ ಕೊರೊನಾ ಎಂಬ ಮಹಾಮಾರಿಯನ್ನು ದೇಶವಾಸಿಗಳಿಗೂ ವರ್ಗಾಹಿಸುತ್ತಿದ್ದಾರೆ.
ಕಾಲವು ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂಬ ದಾರ್ಶನಿಕ ನುಡಿಯಂತೆ ಇಂದು ವಿದೇಶದಿಂದ ಬಂದಿರುವ ಮಡಿವಂತ ಮಹಾಶಯರನ್ನು ಹಾಗೂ ಅವರ ಸಂತಾನಗಳನ್ನು ಇಂದು ಅಸ್ಪøಶ್ಯರಿಗಿಂತ ಹೀನಾವಾಗಿ ನೋಡಲಾಗುತ್ತಿದೆ. ಅವರನ್ನು ಕಂಡರೆ ಜನಸಾಮಾನ್ಯರಾದಿಯಾಗಿ ಎಲ್ಲರೂ ಮೂಗು ಮುಚ್ಚಿಕೊಳ್ಳುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಈ ನೆಲದ ಮೂಲನಿವಾಸಿ ಜನರನ್ನು ಯಾವುದೇ ವೈಜ್ಞಾನಿಕ ಕಾರಣವಿಲ್ಲದೆ ಅಸ್ಪøಶ್ಯರೆಂದು ಜರಿದ ಮನಸ್ಥಿತಿಗಳನ್ನು ಇಂದು ವೈಜ್ಞಾನಿಕ ತಳಹದಿಯ ಮೇಲೆ ದೂರ ನಿಲ್ಲಿಸಲಾಗುತ್ತಿದೆ. ಇಂತಹ ಪ್ರಕೃತಿಯ ಪಾಠವನ್ನು ಮಡಿವಂತರೆಲ್ಲ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
‘ಇವನಾರವ ಇವನಾರವ ಇವನಾರವನೆಂದೆಣಿಸದಿರಯ್ಯಾ, ಇವ ನಮ್ಮವ ಇವ ನಮ್ಮವ’ ಎಂಬ ಬಸವಣ್ಣನ ಮಾತುಗಳನ್ನು ವಾಸ್ತವದ ನೆಲೆಯಲ್ಲಿ ಮಡಿವಂತ ಮನಸುಗಳು ಅರ್ಥ ಮಾಡಿಕೊಳ್ಳಬೇಕಿದೆ. ‘ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ’ ಎಂಬ ದಾಸರ ಮಾತುಗಳಲ್ಲಿನ ಸೈದ್ಧಾಂತಿಕ ಶಕ್ತಿಯನ್ನು ಜಾತಿವಾದಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಇಂದು ಕೊರೊನಾ ಕಲಿಸಿದ ಅಸ್ಪøಶ್ಯತೆಯ ಪಾಠವನ್ನು ಭಾರತದ ಜಾತಿವಾದಿಗಳು ಮಾತ್ರವಲ್ಲದೆ, ಕರಿಯರನ್ನು ಹಾಗೂ ಹಿಂದುಳಿದ ಜನಾಂಗಗಳನ್ನು ಒಂದು ಕಾಲದಲ್ಲಿ ಹೀನರು, ದಡ್ಡರು ಎಂದು ಜರಿದ ಮುಂದುವರೆದ ರಾಷ್ಟ್ರಗಳು ‘ಮಾನವ ಜಾತಿ ತಾನೊಂದೆ ವಲಂ’ ಎಂಬ ಸತ್ಯದ ದಾರಿಯಲ್ಲಿ ನಡೆಯಬೇಕಿದೆ. ಕೊರೊನಾ ಕಲಿಸಿದ ಪಾಠದಿಂದಲಾದರೂ ಜಗತ್ತು ಎಚ್ಚೆತ್ತುಕೊಳ್ಳಲಿ. ಕೊರೊನಾ ಅಂಟಿದ ಮಡಿವಂತರು ಆ ಸೊಂಕಿನಿಂದ ಮತ್ತು ತಮ್ಮೊಳಗಿನ ಜಾತಿಯತೆಯ ಸೊಂಕಿನಿಂದಲೂ ಆದಷ್ಟು ಬೇಗ ಗುಣಮುಖರಾಗಲಿ. ವಿಶ್ವದಿಂದ ಕೊರೊನಾ ಅಳಿಯಲಿ ‘ವಿಶ್ವಮಾನವತ್ವ’ದ ಪಾಠ ಎಲ್ಲರ ಮನೆ ಮನಗಳನ್ನು ಬೆಳಗುವಂತಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243