ದಿನದ ಸುದ್ದಿ
ದಾವಣಗೆರೆ | ಗುಣಮಟ್ಟದ ಸರ್ವೇ ಆಗಬೇಕು, ಕೊರೊನಾವನ್ನು ಜಿಲ್ಲೆಯಿಂದ ಹಿಮ್ಮೆಟ್ಟಿಸಬೇಕು : ಜಿಲ್ಲಾಧಿಕಾರಿ
ಸುದ್ದಿದಿನ,ದಾವಣಗೆರೆ :ಅತಿ ಹೆಚ್ಚು ಪ್ರಕರಣ ಕಂಡು ಬಂದಿರುವ ಮತ್ತು ಇನ್ನೂ ಎರಡು ಮೂರು ಪ್ರಕರಣ ದಾಖಲಾಗುತ್ತಿರುವ ಜಾಲಿನಗರದಲ್ಲಿ ಇನ್ನೂ ಪರಿಣಾಮಕಾರಿಯಾಗಿ ಸರ್ವೇ ಮಾಡಲೆಂದು ರೆಡ್‍ಕ್ರಾಸ್ ಸ್ವಯಂ ಸೇವಕರನ್ನೂ ಒಳಗೊಂಡಂತೆ ಆಶಾ, ವೈದ್ಯರ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮುಖ್ಯವಾಗಿ ಕೆಮ್ಮು ಶೀತ (ಐಎಲ್‍ಐ) ಮತ್ತು ತೀವ್ರ ಉಸಿರಾಟದ ತೊಂದರೆ(ಎಸ್‍ಎಆರ್‍ಐ) ಪ್ರಕಣಗಳಿಗೆ ಒತ್ತು ನೀಡಿ, ಇಂತಹ ಒಂದೂ ಪ್ರಕರಣ ಕಣ್‍ತಪ್ಪಿ ಹೋಗದಂತೆ ಅವರನ್ನು ಸರ್ವೇ ಮಾಡಿ ಪರೀಕ್ಷೆಗೆ ಒಳಪಡಿಸುವ ಕೆಲಸ ಮಾಡಲಾಗುವುದು. ಒಟ್ಟಾರೆ ಗುಣಮಟ್ಟದ ಸರ್ವೇ ಆಗಬೇಕು. ಈ ಮೂಲಕ ಕೊರೊನಾವನ್ನು ಜಿಲ್ಲೆಯಿಂದ ಹಿಮ್ಮೆಟ್ಟಿಸಬೇಕೆಂದರು.
ಪ್ರತಿ ಕಂಟೈನ್‍ಮೆಂಟ್ ಝೋನ್‍ನ ಅದರಲ್ಲೂ ಮುಖ್ಯವಾಗಿ ಜಾಲಿನಗರದಲ್ಲಿ ಇನ್ಸಿಡೆಂಟ್ ಕಮಾಂಡರ್‍ಗಳು ಮೈಕ್ ಘೋಷಣೆ ಕೂಗುವ ಮೂಲಕ ಜಾಗೃತಿ ಮೂಡಿಸಬೇಕು. ಕ್ವಾರಂಟೈನ್ ಮಾಡುತ್ತಾರೆ, ಚಿಕಿತ್ಸೆ ಹೇಗಿರುತ್ತೋ ಎಂಬೆಲ್ಲ ಭಯ ಬಿಟ್ಟು ಆಸ್ಪತ್ರೆಗೆ ತೋರಿಸಿಕೊಳ್ಳುವಂತೆ ಮನವೊಲಿಸಬೇಕು ಎಂದರು.
ಎಡಿಸಿಯವರು ಪ್ರತಿನಿತ್ಯ ಮೆಡಿಕಲ್ ಶಾಪ್, ತಾಲ್ಲೂಕುಗಳಿಂದ ಕೆಮ್ಮು ಶೀತ ಜ್ವರಕ್ಕೆಂದು ಮೆಡಿಕಲ್ ಶಾಪ್‍ಗಳಲ್ಲಿ ಮಾತ್ರೆ ತೆಗೆದುಕೊಳ್ಳುತ್ತಿರುವವರ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಈ ಮಾಹಿತಿಯನ್ನು ಎಡಿಸಿಯವರು ಇನ್ಸಿಡೆಂಟ್ ಕಮಾಂಡರ್‍ಗೆ ಕಳುಹಿಸಬೇಕು. ಇನ್ಸಿಡೆಂಟ್ ಕಮಾಂಡರ್ ಈ ಮಾಹಿತಿಯನ್ನು ಆಯಾ ಏರಿಯಾ ವೈದ್ಯಕೀಯ ಅಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ನೀಡಿ ಇವರ ಸ್ವಾಬ್ ಪರೀಕ್ಷೆ ಆಗುವಂತೆ ಕ್ರಮ ವಹಿಸಬೇಕೆಂದರು.
ಎಲ್ಲ ಪ್ರಾದೇಶಿಕ ವೈದ್ಯಕೀಯ ಅಧಿಕಾರಿಗಳು ಕ್ಷೇತ್ರದಲ್ಲಿ ನಿರಂತರವಾಗಿ ಭೇಟಿ ನೀಡಬೇಕು. ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಇವರ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಮೊದಲನೆಯದಾಗಿ ಎಲ್ಲ ದುರ್ಬಲ ವರ್ಗದವರ ಸರ್ವೇ ಜೊತೆಗೆ ಕೋವಿಡ್ ಪರೀಕ್ಷೆ ಆಗಬೇಕು.
ನಂತರದ ಹಂತದಲ್ಲಿ ಕಂಟೈನ್‍ಮೆಂಟ್ ಝೋನ್‍ನ ಎಲ್ಲ ವ್ಯಕ್ತಿಗಳ ಕೋವಿಡ್ ಪರೀಕ್ಷೆ ಆಗಬೇಕು. ತದನಂತರ ಬಫರ್ ಝೋನ್‍ನಲ್ಲಿ ನಿರಂತರವಾಗಿ ಜ್ವರ ಸರ್ವೇ ಕಾರ್ಯ ನಡೆಯಬೇಕು. ಡಿಹೆಚ್‍ಓ ರವರು ತಾಲ್ಲೂಕು ಕೇಂದ್ರಗಳಲ್ಲಿ ಆರಂಭಿಸಲಾಗಿರುವ ಸ್ವಾಬ್ ಸಂಗ್ರಹ ಕೇಂದ್ರಗಳಿಗೆ ಗುರಿ ನೀಡಬೇಕು.
ಈಗ ಹೊಸ ಮಾರ್ಗಸೂಚಿಯಂತೆ ರೋಗಲಕ್ಷಣಗಳಿಲ್ಲದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು 7 ದಿನ ಮನೆಯಲ್ಲೇ ಕ್ವಾರಂಟೈನ್ ಮಾಡಿ ಏರಿಯಾ ವೈದ್ಯಕೀಯ ಅಧಿಕಾರಿ ನಿಗಾ ವಹಿಸಬೇಕು. ಹೈರಿಸ್ಕ್ ಮತ್ತು ಇತರೆ ಕಾಯಿಲೆಯುಳ್ಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ 7 ದಿನ ಕ್ವಾರಂಟೈನ್ ಮಾಡಬೇಕು.
ಎಲ್ಲ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕಿತರನ್ನು ಟ್ರೇಸ್ ಮಾಡುವ ಜವಾಬ್ದಾರಿಯಿಂದ ಹಿಡಿದು ಅಗತ್ಯವಿದ್ದಲ್ಲಿ ಅವರಿಗೆ ಆಸ್ಪತ್ರೆಗೆ ವರ್ಗಾಯಿಸುವವರೆಗೆ ಏರಿಯಾ ಮೆಡಿಕಲ್ ಆಫೀಸರ್ ಮತ್ತು ತಾಲ್ಲೂಕು ಮೆಡಿಕಲ್ ಆಫೀಸರ್ ಜವಾಬ್ದಾರಿ ಇರುತ್ತದೆ.
ಜಿಲ್ಲೆಯಲ್ಲಿ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿರುವ ಕೆಲವು ಪ್ರಕರಣಗಳು ನಿಲ್ಲಬೇಕು. ಕೋವಿಡ್ ಮುಕ್ತ ಜಿಲ್ಲೆಯಾಗಿಸುವಲ್ಲಿ ಎಲ್ಲರ ಜವಾಬ್ದಾರಿ ಇದ್ದು ಎಲ್ಲರೂ ತಮ್ಮ ಸರ್ವ ಪ್ರಯತ್ನದಿಂದ, ಮುತುವರ್ಜಿಯಿಂದ ಕೆಲಸ ಮಾಡಬೇಕೆಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243