ದಿನದ ಸುದ್ದಿ

ದಾವಣಗೆರೆ | ಗುಣಮುಖವಾಗುತ್ತಿದ್ದಾರೆ ಕೊರೋನಾ ಸೋಂಕಿತೆ ಹೃದ್ರೋಗಿ

Published

on

ಸುದ್ದಿದಿನ, ದಾವಣಗೆರೆ : ಮೇ 1 ಕ್ಕೆ ಕೊರೊನಾ ಪಾಸಿಟಿವ್ ವರದಿ ಬಂದ 18 ವರ್ಷದ ಯುವತಿ ರೋಗಿ ಸಂಖ್ಯೆ : 584 ಇವರು ಸಿಜಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಬಹಳ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಮೊದಲೇ ಗಂಭೀರ ಹೃದಯ ರೋಗ ಇರುತ್ತದೆ. ಇಂತಹ ರೋಗಿಗೆ ಸೋಂಕು ತಗಲುವ ಸಾಧ್ಯತೆ ಯಥೇಚ್ಚವಾಗಿರುತ್ತದೆ ಎಂದು ಜೆಜೆಎಂ ಮೆಡಿಕಲ್ ಕಾಲೇಜಿನ ಅನಸ್ತೇಷಿಯಾ ಮತ್ತು ಕ್ರಿಟಿಕಲ್ ಕೇರ್‍ನ ಮುಖ್ಯಸ್ಥರಾದ ಡಾ. ರವಿ ಅವರು ಹೇಳಿದರು.

ಭಾನುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಆಕ್ಸಿಜನ್ ಥೆರಪಿ ನಂತರವೂ ಇವರ ರಕ್ತದಲ್ಲಿ ಶೇ.70 ಸ್ಯಾಚುರೇಷನ್ ಇದ್ದು, ಇವರನ್ನು ಉಳಿಸಲು ತಜ್ಞ ವೈದ್ಯರ ತಂಡ ಐಸಿಯುಯಲ್ಲಿ ಚಿಕಿತ್ಸೆ ನಡೆಸಲು ನಿರ್ಧರಿಸಿ ಮೇ 5 ಕ್ಕೆ ಐಸಿಯುಗೆ ಶಿಫ್ಟ್ ಮಾಡಿ ಪಾಶ್ಚಿಮಾತ್ಯ ದೇಶಗಳಲ್ಲಿ ನೀಡುವಂತೆ ಹೈಫ್ಲೋ ಆಕ್ಸಿಜನ್ ಜೊತೆಗೆ ಔಷಧೋಪಚಾರ, ಹೃದಯರೋಗಕ್ಕೂ ಸೂಕ್ತ ಚಿಕಿತ್ಸೆಯನ್ನು ನೀಡಿ ನಿಯಂತ್ರಣಕ್ಕೆ ತರಲಾಗುತ್ತದೆ‌ ಎಂದರು.

ಪ್ರಸ್ತುತ ಆ ರೋಗಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ಈಗ ಎದ್ದು ಓಡಾಡುವ ಸ್ಥಿತಿಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಐಸಿಯು ಯಿಂದ ಹೊರತಂದು ಚಿಕಿತ್ಸೆ ಮುಂದುವರೆಸಲಿದ್ದೇವೆ. ಇದನ್ನು ಯಾಕೆ ಹೇಳಿದೆ ಅಂದರೆ ಎಂತಹ ಗಂಭೀರ ಸ್ಥಿತಿಯನ್ನೂ ಎದುರಿಸುವ ತಜ್ಞ ವೈದ್ಯರು, ಸೌಲಭ್ಯ ನಮ್ಮಲ್ಲಿ ಇದೆ‌ ಎಂದು ತಿಳಿಸಿದರು.

ಯಾವುದೇ ಸಾರ್ವಜನಿಕರು ಹೆದರಬೇಕಾದ ಅವಶ್ಯಕತೆ ಇಲ್ಲ. ಶೇ.80 ಕೊರೊನಾ ಸೋಂಕಿತರು ವಾಸಿಯಾಗುತ್ತಾರೆ. ಇನ್ನು ಶೇ 20 ರಲ್ಲಿ ಶೇ.15 ಜನರನ್ನು ಆಕ್ಸಿಜನ್ ಥೆರಪಿ ನೀಡಿ ಗುಣಪಡಿಸಬಹುದು. ಮತ್ತು ಇನ್ನುಳಿದ ಶೇ.5 ವೃದ್ಯಾಪ್ಯ ಡಯಾಬಿಟಿಸ್, ಹೃದ್ರೋಗ ಇತರೆ ಸಮಸ್ಯೆ ಇರುವವರಿಗೆ ಮಾತ್ರ ವೆಂಟಿಲೇಟರ್ ಅವಶ್ಯಕತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಭಯ ಬೀಳುವ ಅವಶ್ಯಕತೆ ಇಲ್ಲ. ಎಲ್ಲರೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version