ದಿನದ ಸುದ್ದಿ

ನವದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣ ಏರಿಕೆ; ಮಾಸ್ಕ್ ಕಡ್ಡಾಯಗೊಳಿಸಿದ ಉತ್ತರ ಪ್ರದೇಶ ಸರ್ಕಾರ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಕಳೆದ ಕೆಲವು ತಿಂಗಳುಗಳಿಂದ ಕಡಿಮೆಯಾಗಿದ್ದ ಕೊರೊನಾ ವೈರಸ್ ಪ್ರಕರಣಗಳು ದೇಶಾದ್ಯಂತ ನಿಧಾನವಾಗಿ ಹೆಚ್ಚಳವಾಗುತ್ತಿದೆ. ದಿನೇ ದಿನೇ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ವರದಿಯಾಗಿದೆ.

ಕೋವಿಡ್ ನಿಯಮಗಳಿಗೆ ಸಡಿಲಿಕೆ ನೀಡಿದ್ದ ರಾಜ್ಯಗಳು ಈಗ ಮತ್ತೆ ಬಿಗಿ ಕ್ರಮಕ್ಕೆ ಮುಂದಾಗಿವೆ. ನವದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಈಗ ಮಾಸ್ಕ್ ಧರಿಸುವುದುನ್ನು ಕಡ್ಡಾಯಗೊಳಿಸಿದೆ. ರಾಜಧಾನಿ ಲಖನೌ ಮತ್ತು ಆರು ಜಿಲ್ಲೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.

ಕೋವಿಡ್ ಪ್ರಕರಣಗಳ ಹೆಚ್ಚಳವು ರಾಷ್ಟ್ರೀಯ ರಾಜಧಾನಿ ಪ್ರದೇಶ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಗೌತಮ್ ಬುದ್ಧ ನಗರ, ಗಾಜಿಯಾಬಾದ್, ಹಾಪುರ್, ಮೀರತ್, ಬುಲಂದ್ಶಹರ್, ಬಾಗ್ಪತ್ ಮತ್ತು ರಾಜಧಾನಿ ಲಖನೌದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯಗೊಳಿಸಿದೆ.

ಒಂದೇ ದಿನದಲ್ಲಿ ಗೌತಮ್ ಬುದ್ಧ ನಗರದಲ್ಲಿ 65, ಗಾಜಿಯಾಬಾದ್ನಲ್ಲಿ 20 ಮತ್ತು ಲಖನೌದಲ್ಲಿ 10 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯ ಕುರಿತು ಸೂಕ್ತ ಅಧ್ಯಯನ ನಡೆಸಿ ಬಿಗಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಆರಂಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮ ಸಡಿಲಿಕೆ ಮಾಡಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version