ದಿನದ ಸುದ್ದಿ
ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಕೊಪ್ಪಳಕ್ಕೆ ಕರೆತಂದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
ಸುದ್ದಿದಿನ,ಕೊಪ್ಪಳ : ಲಾಕ್‌ಡೌನ್ ಸಂದರ್ಭದಲ್ಲಿ ಅನುಮತಿ ಪಡೆಯದೇ ಸೋಂಕಿತರ ಪ್ರಾಥಮಿಕ ಸಂಪರ್ಕವಿದ್ದ ವ್ಯಕ್ತಿಯನ್ನು ಕೊಪ್ಪಳಕ್ಕೆ ಕರೆತಂದಿರುವ ಅಪರಾಧದ ಹಿನ್ನೆಲೆಯಲ್ಲಿ ನಗರದ ಗುರುಬಸವ ಹೊಳಗುಂದಿ ಇವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿದ್ದು, ನಗರದ ತಹಶೀಲ್ದಾರರು, ವೈದ್ಯಾಧಿಕಾರಿಗಳಿಗೆ ತಿಳಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕೊರೋನಾ ವೈರಸ್ ಸೋಂಕು ದೃಢಪಟ್ಟಿರುವ ಕೆಎ-ಪಿ194(ಧಾರವಾಡ) ಇವರು ಮಾ.19 ರಂದು ವಿ.ಆರ್.ಎಲ್ ಟ್ರಾವೆಲ್ಸ್ ಬಸ್ ಮೂಲಕ ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿರುತ್ತಾರೆ. ಇವರ ಸೀಟ್ ಸಂಖ್ಯೆ ಯು-1 ಆಗಿದ್ದು, ಶಿಖಾ ಶೇಖ್ (29) ಎಂಬುವವರು ಕೆಎ-ಪಿ194 ಇವರ ಜೊತೆಗೆ ಒಂದೇ ಬಸ್ಸಿನಲ್ಲಿ ಪ್ರಯಾಣಿಸಿರುತ್ತಾರೆ. ಇವರ ಸೀಟ್ ಸಂಖ್ಯೆ ಎಲ್-11 ಆಗಿರುತ್ತದೆ. ಶಿಖಾ ಶೇಖ್ ಇವರು ಕೆಎ-ಪಿ194 ಇವರ ಪ್ರಾಥಮಿಕ ಸಂಪರ್ಕವನ್ನು ಹೊಂದಿರುತ್ತಾರೆ.
ಇವರು ಮಾ.20 ರಂದು ಆಟೋ ಮೂಲಕ ಹುಬ್ಬಳ್ಳಿಯಲ್ಲಿ ಪರಿಚಯಸ್ಥರ ಮನೆಗೆ ತಲುಪಿ ತಮ್ಮ ಪರಿಚಯಸ್ಥೆ ಹುಬ್ಬಳ್ಳಿಯ ಲಕ್ಷ್ಮೀಭಟ್ ಅವರ ಮನೆಯಲ್ಲಿ ತಂಗಿದ್ದರು. ಏ.13 ರಂದು ಸಾಯಂಕಾಲ 5.30 ರಿಂದ 5.45ಕ್ಕೆ ಶಿಖಾ ಶೇಖ್ ಅವರು ಸ್ಕೂಟಿ ವಾಹನದ ಜೊತೆಗೆ ಹಾಲಿನ ಡೈರಿ ವಾಹನದಲ್ಲಿ ಹುಬ್ಬಳ್ಳಿಯಿಂದ ಪ್ರಯಾಣಿಸಿ ರಾತ್ರಿ ಸುಮಾರು 8.30ಕ್ಕೆ ಕೊಪ್ಪಳಕ್ಕೆ ತಲುಪಿ ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಕದಂಬ ನಗರ ನಿವಾಸಿ ಶಾಂತಾರಾಮ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಶಿಖಾ ಶೇಖ್ ಅವರನ್ನು ವಿಚಾರಿಸಲಾಗಿ ಗುರುಬಸವ ಹೊಳಗುಂದಿ ಇವರು ಮುಂಬೈಗೆ ಹೋಗಲು ಪಾಸ್ ಕೊಡಿಸುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಕೊಪ್ಪಳಕ್ಕೆ ಬರುವಂತಾಯಿತು ಎಂದು ಹೇಳಿಕೆಯನ್ನು ನೀಡಿರುತ್ತಾರೆ. ಇದೇ ಏ.14 ರಂದು ಗುರುಬಸವ ಹೊಳಗುಂದಿರವರು ಶಿಖಾ ಶೇಖ್ ಇವರನ್ನು ಸ್ಕೂಟಿ ವಾಹನದಲ್ಲಿ ಕರೆದುಕೊಂಡು ಪೊಲೀಸ್ ಕೇಂದ್ರ ಕಚೇರಿಗೆ ಬಂದಿರುತ್ತಾರೆ. ಪೊಲೀಸ್‌ರವರು ಆಸ್ಪತ್ರೆಗೆ ತೆರಳಲು ತಿಳಿಸಿರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿಪ್ರಾಯದಂತೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.
ಶಾಂತಾರಾಮ ಹಾಗೂ ಅವರ ಕುಟುಂಬದ ಸದಸ್ಯರನ್ನು ಸಹ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ನ್ನು ಮಾಡಲಾಗಿದೆ. ನಂತರ ಗುರುಬಸವ ಹೊಳಗುಂದಿ ಇವರನ್ನು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲು ಹೋದಾಗ ಪ್ರತಿರೋಧಿಸಿದ್ದರಿಂದ ಇವರನ್ನು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನವನ್ನು ನೀಡಲಾಗಿದೆ.
ಈ ಕುರಿತು ವಿವರಗಳನ್ನು ಧಾರವಾಡ ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು ಹಾಗೂ ಅವರ ಕುಟುಂಬದ ಸದಸ್ಯರ ಜೊತೆಗೆ ಯಾವುದೇ ಸಂಕರ್ಪ ಹೊಂದಿದ್ದಲ್ಲಿ ಅಂತಹ ವ್ಯಕ್ತಿಗಳು ತಮ್ಮ ಮನೆಯಿಂದ ಹೊರಗೆ ಬಾರದೇ ಕಡ್ಡಾಯವಾಗಿ ಮನೆಯಲ್ಲಿಯೇ ಇರತಕ್ಕದ್ದು ಹಾಗೂ ಕೆಮ್ಮು, ನೆಗಡಿ, ಉಸಿರಾಟ ಸಂಬಂಧಿತ ಖಾಯಿಲೆಗಳ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆಯನ್ನು ಪಡೆಯಬೇಕು.
ಹೆಚ್ಚಿನ ವಿವರಕ್ಕೆ ಕೊರೋನಾ ಸಹಾಯವಾಣಿ: 104 ಮತ್ತು ದೂ.ಸಂ.08539-225001 ಗೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243