ದಿನದ ಸುದ್ದಿ
ದಾವಣಗೆರೆ ಕೋವಿಡ್ -19 | ಒಟ್ಟು 23 ಸೋಂಕಿತರು ಗುಣಮುಖ : 93 ಆ್ಯಕ್ಟೀವ್ ಕೇಸ್
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಶುಕ್ರವಾರ 3 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಹಾಗೂ ಸಂಪೂರ್ಣರಾಗಿ ಗುಣಮುಖರಾದ 7 ಜನರನ್ನು ಶುಕ್ರವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸಿ ಸೇರಿದಂತೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಶುಕ್ರವಾರ ಜಿಲ್ಲೆಯಲ್ಲಿ ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಪಿ-1656, ಪಿ-1657, ಪಿ-1658 ಇವರೆಲ್ಲರೂ ಹಿಂದಿನವರ ಸಂಪರ್ಕ ಹೊಂದಿದ್ದು, ಜಾಲಿನಗರದ ಕಂಟೈನ್‍ಮೆಂಟ್ ಜೋನ್ ಒಳಗೆ ಬರುವವರು ಎಂದು ತಿಳಿಸಿದರು.
ಇವತ್ತು ಒಟ್ಟು 7 ಜನರನ್ನು ಕೊರೊನಾದಿಂದ ಗುಣಮುಖರಾದವರನ್ನು ಬಿಡುಗಡೆ ಮಾಡಲಾಗಿದೆ. ಈ 7 ಜನರು ಪಿ-533, 581, 660, 661, 665, 666 ಹಾಗೂ 696 ಇಬ್ಬರು ಪುರುಷರು ಹಾಗೂ 5 ಜನ ಹೆಣ್ಣು ಮಕ್ಕಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಹಳೆಯ 14 ಜನರು ಹಾಗೂ ಇಂದು 7 ಜನರು ಸೇರಿ ಒಟ್ಟು 21 ಜನರನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 118 ರಲ್ಲಿ 93 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಓ ಪದ್ಮಾ ಬಸವಂತಪ್ಪ, ಎಸಿ ಮಮತಾ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ ನಾಯಕ್, ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ, ಎಎಸ್‍ಪಿ ರಾಜೀವ್, ಡಿಎಚ್‍ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿತ್ಸಕ ಸುಭಾಷಚಂದ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243